ಬಳ್ಳಾರಿ: ಆರೋಗ್ಯವಂತ ಕಲ್ಯಾಣ ಕರ್ನಾಟಕ ಮಂಡಳಿ ಧ್ಯೇಯವಾಗಿದ್ದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಲಾಗಿದೆ. ಈ ಹಿನ್ನಲೆಯಲ್ಲಿ ಈಗಾಗಲೇ ಕೆಕೆಆರ್‌ಡಿಬಿ ವ್ಯಾಪ್ತಿಯ 7 ಜಿಲ್ಲೆಗಳಿಗೆ 102 ಕೋಟಿ ರೂ.ಗಳನ್ನು ಕೋವಿಡ್ ನಿರ್ವಹಣೆಗೆ ಜಿಲ್ಲಾಡಳಿತಗಳಿಗೆ ನೀಡಲಾಗಿದೆ ಎಂದು ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ಸಿ.ರೇವೂರ್ ತಿಳಿಸಿದರು.
ನಗರದ ಜಿಲ್ಲಾ ಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಕೋವಿಡ್-19ರ ನಿರ್ವಹಣೆ ಹಾಗೂ ಕೆಕೆಆರ್ ಡಿಬಿ ಮಂಡಳಿ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಳ್ಳಾರಿ ಜಿಲ್ಲೆಗೆ 15 ಕೋಟಿ ರೂ.ಅನುದಾನವನ್ನು ಕೋವಿಡ್ ನಿರ್ವಹಣೆಗೆ ನೀಡಲಾಗಿದೆ. ಈ ಜಿಲ್ಲಾಡಳಿತದಿಂದ ಬಂದ ಕ್ರಿಯಾಯೋಜನೆಯನ್ನು ತಕ್ಷಣ ಅನುಮೋದನೆ ಮಾಡಿ ಹಣ ಒದಗಿಸಲಾಗಿದೆ ಎಂದರು.
ಕೆಕೆಆರ್‌ಡಿಬಿ ವತಿಯಿಂದ ಒದಗಿಸಲಾಗಿ ರುವ ಅನುದಾನದಲ್ಲಿ ಕೋವಿಡ್ ನಿರ್ವಹಣೆಗೆ ಸಂಬಂಧಿ ಸಿದ ವೆಂಟಿಲೇಟರ್ ಖರೀದಿ, ಆಕ್ಸಿಜನ್ ಪ್ಲಾಂಟ್‌ಗಳ ಪ್ರಾರಂಭ ಹಾಗೂ ಆಂಬ್ಯುಲೆನ್ಸ್ ಸೇವೆ ಒಳಗೊಂಡಂತೆ ತುರ್ತು ಅವಶ್ಯಕತೆಗಳಿಗೆ ಮಂಡಳಿ ಅನುದಾನ ಬಳಕೆ ಮಾಡಲಾಗುತ್ತದೆ. ಅತೀ ಅವಶ್ಯಕ ಕಾರ್ಯಗಳಿಗೆ ಶಾಸಕರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು. ಬಾಕಿ ಉಳಿದ ಕೆಲಸ ಕಾಮಗಾರಿಗಳನ್ನು ಆದಷ್ಟು ಬೇಗ ಮುಗಿಸಿಕೊಂಡು ಕೋವಿಡ್ ನಿಯಂತ್ರಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಧಿಕಾರಿ ಪವನಕುಮಾರ್ ಮಾಲಪಾಟಿ ಮಾತನಾಡಿ, ಕೆಕೆಆರ್ ಡಿಬಿ ಅನುದಾನದಲ್ಲಿ ಈಗಾಗಲೇ 10 ಆಂಬ್ಯುಲೆನ್ಸ್ ಖರೀದಿ ಮಾಡಲಾಗುತ್ತಿದೆ. ತಾಲೂಕುವಾರು ಆಕ್ಸಿಜನ್ ಪ್ಲಾಂಟ್ ಪ್ರಾರಂಭಿಸಲು ಕ್ರಮಕೈಗೊಳ್ಳಲಾಗುತ್ತದೆ. ಇದರ ಜೊತೆಗೆ ಈಗಾಗಲೇ 25 ವೆಂಟಿಲೇಟರ್ ಖರೀದಿಸಲಾಗಿದೆ. ಬಳ್ಳಾರಿ ವಿಮ್ಸ್‌ಗೆ 10, ಜಿಲ್ಲಾಸ್ಪತ್ರೆಗೆ 10 ಹಾಗೂ 5 ಸಂಜೀವಿನಿ ಆಸ್ಪತ್ರೆಗೆ ನೀಡಲಾಗಿದೆ. ಈ ಮುಂಚೆ ಅನುಮೋದಿಸಲಾಗಿರುವ ಜಿಲ್ಲೆಯ ಕ್ರಿಯಾಯೋಜನೆಯಲ್ಲಿ ಅಲ್ಪಸ್ವಲ್ಪ ಬದಲಾವಣೆಗಳಿದ್ದು, ಪರಿಷ್ಕೃತ ಕ್ರಿಯಾ ಯೋಜನೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಧಿಕಾರಿ ಮಾಲಪಾಟಿ ಅವರು ತಿಳಿಸಿದರು.
ಅಧ್ಯಯನಕ್ಕೆ ಸಮಿತಿ ರಚನೆ: ಕೆಕೆಆರ್‌ಡಿಬಿ ವ್ಯಾಪ್ತಿಯ ಜಿಲ್ಲೆಗಳಲ್ಲಿರುವ ತಾಲೂಕುಗಳ ಹಿಂದಿನ ಸ್ಥಿತಿಗತಿ, ಸದ್ಯ ಇರುವ ಸ್ಥಿತಿಗತಿ ಕುರಿತು ಅಧ್ಯಯನ ಮಾಡಿ ವರದಿ ಸಲ್ಲಿಸಲು ಮಂಡಳಿಯಿಂದ ಸಮಿತಿ ರಚಿಸಲಾಗಿದೆ. ಆ ಸಮಿತಿ ಶೀಘ್ರ ವರದಿ ಸಲ್ಲಿಸಲಿದೆ. ಈ ವರದಿ ಆಧರಿಸಿ ಮುಂದಿನ ಕ್ರಮ ಮಂಡಳಿ ಕೈಗೊಳ್ಳಲಾಗುವುದು ಎಂದರು.
3ನೇ ಅಲೆಯನ್ನು ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತಾ ಕ್ರಮ ಕೈಗೆತ್ತಿಕೊಂಡಿದ್ದು, ಶೀಘ್ರ ಶಾಸಕರ ಸಭೆ ಕರೆದು ತೀರ್ಮಾನಗಳನ್ನು ಕೈಗೊಳ್ಳಲಾಗು ವುದು. ಈಗಾಗಲೇ ಮಕ್ಕಳಿಗೆ 50 ವೆಂಟಿಲೇಟರ್ ಸೌಕರ್ಯ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇನ್ನೂ ಹೆಚ್ಚುವರಿಯಾಗಿ 50 ವೆಂಟಿಲೇಟರ್ ಸೌಕರ್ಯ ಕೂಡ ಮಾಡಿಕೊಳ್ಳಲಾಗುವುದು. ಇದರ ಜೊತೆಗೆ ಮಕ್ಕಳಿಗೆ 3ನೇ ಅಲೆ ಬಾಧಿಸದಂತೆ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತ ವಿಶೇಷ ಯೋಜನೆ ರೂಪಿಸಿದ್ದು, ಅದನ್ನು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ತಿಳಿಸಿದರು.
ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ, ಎಸ್ಪಿ ಸೈದುಲು ಅಡಾವತ್, ಜಿಪಂ ಸಿಇಒ ಕೆ.ಆರ್.ನಂದಿನಿ, ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹೊಟ್, ಕಲ್ಯಾಣ ಕರ್ನಾಟಕ ಹೋರಾಟಗಾರ ಸಿರಿಗೇರೆ ಪೊನ್ನರಾಜ್, ಎಡಿಸಿ ಪಿ.ಎಸ್.ಮಂಜುನಾಥ, ವಿಮ್ಸ್ ನಿರ್ದೇಶಕ ಗಂಗಾಧರಗೌಡ, ಡಿಎಚ್‌ಒ ಡಾ| ಜನಾರ್ದನ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಬಸರೆಡ್ಡಿ ಸೇರಿದಂತೆ ವಿವಿಧ ಅನುಷ್ಠಾನ ಏಜೆನ್ಸಿಗಳ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅ ಧಿಕಾರಿಗಳು ಇದ್ದರು.