ಬಳ್ಳಾರಿ: ಜಿಂದಾಲ್‌ಗೆ ಜಮೀನು ಕೊಡಬೇಡಿ ಎಂದು ಹೇಳಿಲ್ಲ. ಜಮೀನನ್ನು ಲೀಜ್‌ಗೆ ನೀಡಿದ ಮೇಲೆ ಮಾರಾಟ ಮಾಡಬಾರದು ಎಂದು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದೆ. ಅದರಂತೆ ಸರ್ಕಾರ ಜಮೀನು ಪರಭಾರೆ ವಿಷಯವನ್ನು ಕೈಬಿಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ಸಿಂಗ್ ಹೇಳಿದರು.
ನಗರದ ಡಿಸಿ ಕಚೇರಿ ಆವರಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಂದಾಲ್ ಸಂಸ್ಥೆಗೆ ಜಮೀನು ಕೊಡಬೇಡಿ ಎಂದು ನಾನು ಹೇಳಿಲ್ಲ. ಲೀಜ್ ಗೆ ನೀಡಿರುವ ಜಮೀನನ್ನು ಮಾರಾಟ ಮಾಡದೇ ಲೀಜ್‌ನಲ್ಲಿಯೇ ಮುಂದುವರೆಸಬೇಕು ಎಂಬುದು ನನ್ನ ಬೇಡಿಕೆಯಾಗಿತ್ತು.
ಸರ್ಕಾರದ ಮುಂದೆಯೂ ಅದೇ ಬೇಡಿಕೆಯನ್ನು ಇಟ್ಟಿದ್ದು, ರಾಜ್ಯದ ಮುಖ್ಯಮಂತ್ರಿಗಳು, ರಾಜ್ಯದ ನಾಯಕರೊಂದಿಗೆ ಚರ್ಚೆ ಮಾಡಿದಾಗಲೂ ಅದೇ ಮಾತನ್ನು ಹೇಳಿದ್ದೆ. ಅದರಂತೆ ಜಿಂದಾಲ್ ಗೆ ಜಮೀನು ಪರಭಾರೆ ಮಾಡುವ ವಿಷಯವನ್ನು ಸರ್ಕಾರ ಕೈಬಿಟ್ಟಿರುವುದು ಗೊತ್ತಾಗಿದೆ ಎಂದು ತಿಳಿಸಿದರು.
ಲಾಕ್ ಡೌನ್ ಮುಂದುವರಿಕೆ: ಬಳ್ಳಾರಿ/ವಿಜಯನಗರ ಜಿಲ್ಲೆಗಳಲ್ಲಿ ಈಗಾಗಲೇ ಜಾರಿಯಲ್ಲಿರುವ ಕೋವಿಡ್ ಲಾಕ್‌ಡೌನ್‌ನ್ನು ಜೂನ್ 7ರವರೆಗೆ ಮುಂದುವರಿಸಲಾಗಿದೆ. ಇದರಿಂದ ಸೋಂಕು ನಿಯಂತ್ರಣಕ್ಕೆ ಬರಲಿದೆ. ಮೈಮರೆತರೆ ಪುನಃ ಹೆಚ್ಚಾಗುವ ಸಾಧ್ಯತೆಯಿದೆ. ಜೂ. 7ರ ನಂತರ ಮುಂದೆಯೂ ಲಾಕ್ ಡೌನ್ ಸಡಿಲಿಕೆ ಮಾಡಿದ ಮೇಲೂ ಕಷ್ಟವಿದೆ ಎಂದು ತಜ್ಞರು ಹೇಳಿದ್ದಾರೆ ಎಂದ ಸಚಿವರು, ನಂತರವೂ ಲಾಕ್‌ಡೌನ್ ಮುಂದುವರೆಸುತ್ತೇವೆ. ನನ್ನ ಆಲೋಚನೆಯೂ ಅದೇ ಇದೆ. ಈ ಕುರಿತು ಮತ್ತೂಮ್ಮೆ ಚರ್ಚೆ ಮಾಡಿ, ಅಧಿ ಕಾರಿಗಳ, ತಜ್ಞರ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳುತ್ತೇವೆ. ಕಠಿಣ ಕ್ರಮ ಕೈಗೊಳ್ಳಬೇಕು ಎಂದರೆ ಮತ್ತೆ ಬಳ್ಳಾರಿ ಲಾಕ್‌ಡೌನ್ ಮುಂದುವರೆಯಲಿದೆ ಎಂದವರು ಸ್ಪಷ್ಟಪಡಿಸಿದರು.