Advertisement

ಗಣಿನಾಡಿನಲ್ಲಿ ಕೊರೊನಾ ಸೋಂಕು ಇಳಿಮುಖ

08:51 PM May 28, 2021 | Team Udayavani |

„ವೆಂಕೋಬಿ ಸಂಗನಕಲ್ಲು

Advertisement

ಬಳ್ಳಾರಿ: ಕೋವಿಡ್‌ ಸೋಂಕು ಪತ್ತೆಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದ ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಸೋಂಕು ಪತ್ತೆಯಾಗುವವರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಸೋಂಕು ನಿಯಂತ್ರಿಸಲು ಜಿಲ್ಲಾಡಳಿತ ಕೈಗೊಂಡ ಸಂಪೂರ್ಣ ಲಾಕ್‌ಡೌನ್‌, ಮನೆಯಲ್ಲೇ ಐಸೋಲೇಷನ್‌ ಇದ್ದ ಸೋಂಕಿತರನ್ನು ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ಸ್ಥಳಾಂತರಿಸಿರುವುದು ಉಭಯ ಜಿಲ್ಲೆಗಳಲ್ಲಿ ಸೋಂಕು ಇಳಿಮುಖದತ್ತ ಸಾಗಲು ಕಾರಣವಾಗಿದೆ.

ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಮೇ ತಿಂಗಳಲ್ಲಿ ಕೋವಿಡ್‌ ಸೋಂಕು ವ್ಯಾಪಕವಾಗಿ ಹರಡಿತ್ತು. ಮೇ ತಿಂಗಳ ಆರಂಭದಿಂದ ಪ್ರತಿದಿನ ಕೋವಿಡ್‌ ಪರೀಕ್ಷೆಗೆ ಒಳಗಾಗುವವರಲ್ಲಿ ಸರಾಸರಿ ಶೇ.46.92ರಷ್ಟು ಜನರಲ್ಲಿ ಸೋಂಕು ದೃಢಪಟ್ಟು, ಉಭಯ ಜಿಲ್ಲೆಗಳಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದವು. ಸೋಂಕು ಹರಡುವುದರ ಜತೆಗೆ ಸಾವಿನ ಸಂಖ್ಯೆಯೂ ಹೆಚ್ಚಿದ್ದ ಹಿನ್ನೆಲೆಯಲ್ಲಿ ಉಭಯ ಜಿಲ್ಲೆಗಳ ಜನರು ಆತಂಕಕ್ಕೆ ಒಳಗಾಗಿದ್ದರು.

ಪ್ರಮುಖವಾಗಿ ಗ್ರಾಮೀಣ ಭಾಗದಲ್ಲಿ ವ್ಯಾಪಕವಾಗಿ ಹರಡಿದ್ದು, ಗ್ರಾಮಸ್ಥರ ನೆಮ್ಮದಿ ಹಾಳು ಮಾಡಿತ್ತು. ಆದರೆ, ಸೋಂಕನ್ನು ನಿಯಂತ್ರಿಸಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಕೈಗೊಂಡ ಸಂಪೂರ್ಣ ಲಾಕ್‌ಡೌನ್‌ ಮತ್ತು ಗ್ರಾಮಗಳಲ್ಲಿ ಮನೆಯಲ್ಲೇ ಐಸೋಲೇಷನ್‌ ಇದ್ದ ಸೋಂಕಿತರನ್ನು ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ಸ್ಥಳಾಂತರಿಸುವ ಕ್ರಮಗಳು ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಸೋಂಕು ಪತ್ತೆಯ ಪ್ರಮಾಣ ಶೇ.20-25ಕ್ಕೆ ಇಳಿದು ಸೋಂಕು ನಿಯಂತ್ರ ಣಕ್ಕೆ ಬರಲು ಪ್ರಮುಖ ಕಾರಣಗಳಾಗಿವೆ.

ಸಂಪೂರ್ಣ ಲಾಕ್‌ಡೌನ್‌, ಸೆಂಟರ್‌ಗೆ ಸ್ಥಳಾಂತರ: ಬಳ್ಳಾರಿ ಸೇರಿ ರಾಜ್ಯಾದ್ಯಂತ ಕೋವಿಡ್‌ ಸೋಂಕು ಎರಡನೇ ಅಲೆ ಹೆಚ್ಚಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಳೆದ ಮೇ 10ರಿಂದ ಬೆಳಗ್ಗೆ 6ರಿಂದ 10 ಗಂಟೆವರೆಗೆ ವಿನಾಯಿತಿ ನೀಡಿ ಲಾಕ್‌ಡೌನ್‌ ಜಾರಿಗೊಳಿಸಿತ್ತು. ಆದರೆ, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಲಾಕ್‌ ಡೌನ್‌ ಅವ ಧಿಯಲ್ಲೇ ಅ ಧಿಕ ಸಂಖ್ಯೆಯಲ್ಲಿ ಸೋಂಕು ಪತ್ತೆಯಾಯಿತು.

Advertisement

ಲಾಕ್‌ ಡೌನ್‌ ಅವ ಧಿಯಲ್ಲೇ ಸೋಂಕು ಹೆಚ್ಚಳಕ್ಕೆ ತರಕಾರಿ ಮಾರುಕಟ್ಟೆಗಳಲ್ಲಿ ಎಸ್‌ಎಂಎಸ್‌ ಪಾಲನೆಯಾಗದಿರುವುದು, ಗ್ರಾಮೀಣ ಪ್ರದೇಶಗಳಲ್ಲಿ ಮನೆಯಲ್ಲೇ ಐಸೋಲೇಷನ್‌ ನಲ್ಲಿ ಇದ್ದ ಸೋಂಕಿತರು ಕೊಠಡಿಯಲ್ಲಿ ಸ್ವಯಂ ಬಂ ಧಿಯಾಗದೆ ಮನೆಮಂದಿಗೆಲ್ಲ ಹಬ್ಬಿಸುತ್ತಿದ್ದಾರೆ ಎಂಬುದನ್ನು ಪತ್ತೆಹಚ್ಚಿದ ಜಿಲ್ಲಾಡಳಿತ, ಜಿಪಂ ಕೂಡಲೇ ಸಂಪೂರ್ಣ ಲಾಕ್‌ಡೌನ್‌ ಘೋಷಣೆ ಮಾಡಿ, ಮನೆಯಲ್ಲೇ ಐಸೋಲೇಷನ್‌ ಇದ್ದ ಸೋಂಕಿತರನ್ನು, ಸೋಂಕು ಪತ್ತೆಯಾದವರನ್ನು ಕೋವಿಡ್‌ ಕೇರ್‌ ಸೆಂಟರ್‌ಗೆ ಸ್ಥಳಾಂತರಿಸಿರುವುದು ಉಭಯ ಜಿಲ್ಲೆಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬರಲು ಪ್ರಮುಖ ಕಾರಣವಾಗಿದೆ.

ವಾರದಲ್ಲಿ 17 ಸಾವಿರ ಜನ ಗುಣಮುಖ: ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಮೇ ತಿಂಗಳಲ್ಲೇ ಗಣನೀಯ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ. ಮೇ 18ರಂದು 1799 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 20290ಕ್ಕೆ ಏರಿಕೆಯಾಗಿತ್ತು. ನಂತರ ಸೋಂಕಿತರ ಸಂಖ್ಯೆ ಕಡಿಮೆಯಾಗಿ ಗುಣಮುಖರಾಗುವವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದ್ದಂತೆ ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಇಳಿಕೆಯತ್ತ ಸಾಗಿದೆ. ಕಳೆದ ಮೇ 18 ರಂದು 854 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದ ಜಿಲ್ಲೆಯಲ್ಲಿ ಮೇ 19ಕ್ಕೆ 1535, ಮೇ 20ಕ್ಕೆ 3618, ಮೇ 21ಕ್ಕೆ 3117, ಮೇ 22ಕ್ಕೆ 1294, ಮೇ 23ಕ್ಕೆ 1994, ಮೇ 24ಕ್ಕೆ 1463, ಮೇ 25ಕ್ಕೆ 2041, ಮೇ 26ಕ್ಕೆ 1127 ಸೇರಿ ಕಳೆದ 8 ದಿನಗಳಲ್ಲಿ ಉಭಯ ಜಿಲ್ಲೆಗಳಲ್ಲಿ 17043 ಜನರು ಸೋಂಕಿನಿಂದ ಗುಣಮಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ಸದ್ಯ 13659ಕ್ಕೆ ಇಳಿಕೆಯಾಗಿದೆ. ಈವರೆಗೆ 1284 ಜನರು ಸೋಂಕಿಗೆ ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತದ ಅಂಕಿ ಅಂಶಗಳು ಸ್ಪಷ್ಟಪಡಿಸಿವೆ.

ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಗ್ರಾಮೀಣ ಭಾಗದಲ್ಲೂ ಕೋವಿಡ್‌ ಕೇರ್‌ ಸೆಂಟರ್‌ ತೆರೆದಿರುವುದು ಪ್ರಮುಖ ಕಾರಣವಾಗಿದೆ. ಬಳ್ಳಾರಿ ತಾಲೂಕಿನ ಕೊಳಗಲ್ಲು ಗ್ರಾಮದ ಏಕಲವ್ಯ ವಸತಿ ಶಾಲೆ, ಕುರುಗೋಡು ತಾಲೂಕಿನ ಎರ್ರಂಗಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಆರಂಭಿಸಿದ್ದು ಇಲ್ಲಿ ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ. ಪ್ರತಿದಿನ ಸೋಂಕಿತರಿಗೆ ಚಿಕಿತ್ಸೆಯೊಂದಿಗೆ ಉಚಿತವಾಗಿ ಊಟ, ಹಣ್ಣುಗಳನ್ನು ನೀಡಲಾಗುತ್ತಿದೆ. ಉತ್ತಮ ಆಹಾರ, ಸೌಲಭ್ಯಗಳನ್ನು ಕಲ್ಪಿಸುವುದರ ಜತೆಗೆ ಚಿಕಿತ್ಸೆಯನ್ನೂ ನೀಡುತ್ತಿದ್ದು, ಶೀಘ್ರದಲ್ಲೇ ಗುಣಮುಖರಾಗಿ ಮನೆಗೆ ತೆರಳುತ್ತೇವೆ ಎಂದು ಕೊಳಗಲ್ಲು ಗ್ರಾಮದ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿನ ಸೋಂಕಿತರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next