ಬಳ್ಳಾರಿ: ಗಣಿನಾಡು ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಸೋಮವಾರವೂ 1463 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಉಭಯ ಜಿಲ್ಲೆಗಳಲ್ಲಿ ಗುಣಮುಖರಾಗುವವರ ಸಂಖ್ಯೆ ಹೆಚ್ಚುತ್ತಿದ್ದಂತೆ ಸಕ್ರಿಯ ಪ್ರಕರಣಗಳ ಸಂಖ್ಯೆ ದಿನೇದಿನೆ ಕಡಿಮೆಯಾಗುತ್ತಿದೆ.
ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಕಳೆದ ಮೇ 18ರಂದು 1799 ಜನರಲ್ಲಿ ಸೋಂಕು ಪತ್ತೆಯಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 20 ಸಾವಿರ ಗಡಿದಾಟಿ, 20290ಕ್ಕೆ ಏರಿಕೆಯಾಗಿತ್ತು. ನಂತರದ ದಿನಗಳಿಂದ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗುವವ ಸಂಖ್ಯೆ ಹೆಚ್ಚಿದ್ದು, ಸೋಮವಾರ ಮೇ 24 ರಂದು ಬಿಡುಗಡೆಯಾದವರು ಸೇರಿ ಕಳೆದ 6 ದಿನಗಳಿಂದ ಉಭಯ ಜಿಲ್ಲೆಗಳಲ್ಲಿ 13021 ಜನರು ಗುಣಮುಖರಾಗಿ ಮನೆಗೆ ತೆರಳಿ ಐಸೋಲೇಷನ್ ನಿಂದ ಮುಕ್ತರಾಗಿದ್ದಾರೆ.
ಹೀಗಾಗಿ ಸೋಂಕು ಪತ್ತೆಯಾಗುವವರ ಸಂಖ್ಯೆ ಕಡಿಮೆಯಾಗಿ, ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಿದಲ್ಲಿ ಉಭಯ ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಇಳಿಕೆಯತ್ತ ಸಾಗಿದ್ದು, ಸದ್ಯ 15355ಕ್ಕೆ ಇಳಿಕೆಯಾಗಿದೆ. ಈ ಪೈಕಿ ಬಳ್ಳಾರಿ ತಾಲೂಕು 337, ಸಂಡೂರು 220, ಸಿರುಗುಪ್ಪ 63, ಕೂಡ್ಲಿಗಿ 96, ಹಡಗಲಿ 104, ಹೊಸಪೇಟೆ 287, ಹ.ಬೊ.ಹಳ್ಳಿ 260, ಹರಪನಹಳ್ಳಿ 96 ಸೇರಿ ಒಟ್ಟು 1463 ಜನರು ಬಿಡುಗಡೆಯಾಗಿದ್ದಾರೆ.
ಇನ್ನು ಉಭಯ ಜಿಲ್ಲೆಗಳಲ್ಲಿ ಸೋಮವಾರ 807 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಪೈಕಿ ಬಳ್ಳಾರಿ ತಾಲೂಕು 251 (6973 ಸಕ್ರಿಯ ಪ್ರಕರಣ), ಸಂಡೂರು 93 (1824), ಸಿರುಗುಪ್ಪ 54 (706), ಕೂಡ್ಲಿಗಿ 87 (1084), ಹಡಗಲಿ 68 (961), ಹೊಸಪೇಟೆ 126 (2425), ಹ.ಬೊ.ಹಳ್ಳಿ 55 (782), ಹರಪನಹಳ್ಳಿ 71 (836), ಇತರೆ ರಾಜ್ಯ 1 (27), ಇತರೆ ಜಿಲ್ಲೆ 1 (37) ಸೇರಿ ಒಟ್ಟು 807 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 15355ಗೆ ಇಳಿಕೆಯಾಗಿದೆ. ಸೋಂಕಿಗೆ ಎರಡು ಜಿಲ್ಲೆಗಳಲ್ಲಿ 19 ಜನರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 1242ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವುದನ್ನು ನಿಯಂತ್ರಿಸಲು ಮುಂದಾಗಿರುವ ಆರೋಗ್ಯ ಇಲಾಖೆ ಅಷ್ಟೇ ಪ್ರಮಾಣದಲ್ಲಿ ತಪಾಸಣೆ ನಡೆಸಿ ಸೋಂಕಿತರನ್ನು ಪತ್ತೆಹಚ್ಚುತ್ತಿದೆ. ಮೇ 23ರಂದು 858 ರ್ಯಾಪಿಡ್ ಆಂಟಿಜೆನ್, 2270 ಆರ್‌ಟಿ ಪಿಸಿಆರ್ ಸೇರಿ ಒಟ್ಟು 3128 ಜನರನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದೆ.
ಅದೇ ರೀತಿ ಈವರೆಗೆ 2,49,898 ರ್ಯಾಪಿಡ್ ಆಂಟಿಜೆನ್, 5,52,637 ಆರ್‌ಟಿಪಿಸಿಆರ್ ಸೇರಿ ಒಟ್ಟು 8,02,535 ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ.