Advertisement
ಬಳ್ಳಾರಿ: ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಡೆಡ್ಲಿ ಕೊರೊನಾ ಸೋಂಕು ಎರಡನೇ ಅಲೆಯಲ್ಲಿ ಬಳ್ಳಾರಿ/ ವಿಜಯನಗರ ಜಿಲ್ಲೆಗಳ ಗ್ರಾಮೀಣ ಭಾಗಕ್ಕೂ ವ್ಯಾಪಿಸಿ ಹಳ್ಳಿ ಜನರಲ್ಲಿ ಆತಂಕ ಸೃಷ್ಟಿಸಿದ್ದು, ನಿಯಂತ್ರಣಕ್ಕೆ ಮುಂದಾಗಿರುವ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಕುಟುಂಬ ಆರೋಗ್ಯ ಸಂರಕ್ಷಣಾ ತಂಡವನ್ನು ರಚಿಸಿ ಸೋಂಕಿನ ಲಕ್ಷಣಗಳು ಕಂಡುಬರುತ್ತಿದ್ದಂತೆ ಮೂರು ದಿನಗಳಿಗೆ ಔಷಧ ನೀಡುವ ಮೂಲಕ ಸೋಂಕನ್ನು ಆರಂಭದಲ್ಲೇ ಮಟ್ಟ ಹಾಕಲಾಗುತ್ತಿದೆ.
Related Articles
Advertisement
ತಂಡದ ಸದಸ್ಯರನ್ನು ಪ್ರತಿ 50 ಕುಟುಂಬಕ್ಕೆ ಒಬ್ಬರನ್ನು ಸ್ವಯಂ ಸೇವಕರನ್ನಾಗಿ ನೇಮಿಸಲಾಗುತ್ತದೆ. ಇವರು ತಮ್ಮ ವ್ಯಾಪ್ತಿಯ ಪ್ರತಿ ಮನೆ ಮನೆ ಸಮೀಕ್ಷೆ ನಡೆಸಿ ಕುಟುಂಬಗಳ ಆರೋಗ್ಯ ಸ್ಥಿತಿ ವಿಚಾರಿಸಲಿದ್ದಾರೆ. ಈವೇಳೆ ಕುಟುಂಬದಲ್ಲಿ ಯಾರಿಗಾದರು ಜ್ವರ, ಕೆಮ್ಮು, ನೆಗಡಿ ಕಂಡುಬಂದಲ್ಲಿ ಮೂರು ದಿನಗಳಿಗೆ ಆಗುವಷ್ಟು ಔಷಧಗಳುಳ್ಳ ಜನರಲ್ ಕಿಟ್‌ನ್ನು ವಿತರಿಸಲಿದ್ದಾರೆ.
ಸತತ ಮೂರು ದಿನಗಳು ಔಷಧ ಪಡೆದರೂ ವಾಸಿಯಾಗದೆ ಆರೋಗ್ಯ ಸುಧಾರಿಸದಿದ್ದಲ್ಲಿ ಅಂತಹ ವ್ಯಕ್ತಿಯನ್ನು ತಂಡದವರು ಕೋವಿಡ್ ಪರೀಕ್ಷೆ ಮಾಡಿಸಲಿದ್ದಾರೆ. ಸೋಂಕಿತ ವ್ಯಕ್ತಿಗೆ ಪಾಸಿಟಿವ್ ಬಂದಲ್ಲಿ ನಿಗದಿತ ದಿನಗಳಿಗೆ ಔಷ ಧಿಯುಳ್ಳ ಕೋವಿಡ್ ಔಷಧ ಕಿಟ್ ವಿತರಿಸಲಿದ್ದಾರೆ. ಜತೆಗೆ ಸೋಂಕಿತರ ಮನೆಯ ಸುತ್ತಮುತ್ತಲೂ ಸ್ಯಾನಿಟೈಸರ್ ಸಿಂಪಡಿಸಿ ಸೋಂಕು ನಿಯಂತ್ರಣಕ್ಕೆ ತಂಡವೇ ಕ್ರಮಕೈಗೊಳ್ಳಲಿದೆ. ಕೋವಿಡ್ ಸೋಂಕು ದೃಢಪಟ್ಟ ವ್ಯಕ್ತಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ಆರ್ಥಿಕವಾಗಿ ಅನಾನುಕೂಲತೆಗಳು ಇದ್ದಲ್ಲಿ ಅಂತಹವರಿಗೆ ಗ್ರಾಮ ಪಂಚಾಯಿತಿಯಿಂದಲೇ ಊಟೋಪಚಾರದ ವ್ಯವಸ್ಥೆ ಮಾಡಲಾಗುತ್ತದೆ.
ಒಂದು ವೇಳೆ ಮನೆಯಲ್ಲಿ ಸೋಂಕಿತ ವ್ಯಕ್ತಿಗೆ ಪ್ರತ್ಯೇಕ ಕೊಠಡಿ, ಶೌಚಾಲಯವಿಲ್ಲದಿದ್ದಲ್ಲಿ ಹೋಬಳಿ ಮಟ್ಟದಲ್ಲಿ ನಿಗದಿಪಡಿಸಿದ ಐಸೋಲೇಷನ್ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತದೆ. ಅಲ್ಲದೇ, ಸೋಂಕಿತ ವ್ಯಕ್ತಿಯ ರೋಗ ತೀವ್ರಗೊಂಡಲ್ಲಿ ಆರೋಗ್ಯ ಇಲಾಖೆಯ ಸ್ಥಳೀಯ ತಂಡದ ಸೂಚನೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಡೆಡಿಕೇಟೆಡ್ ಕೋವಿ ಹೆಲ್ತ್ ಸೆಂಟರ್ (ಡಿಸಿಎಚ್‌ಸಿ)ಗೆ ಕಳುಹಿಸಿಕೊಡುವ ಕೆಲಸ ಕುಟುಂಬ ಆರೋಗ್ಯ ಸಂರಕ್ಷಣಾ ತಂಡ ಮಾಡಲಿದೆ.
ಈ ತಂಡಗಳು ಗ್ರಾಮಗಳಲ್ಲಿ ಈಗಾಗಲೇ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಮನೆ ಮನೆ ಸಮೀಕ್ಷೆ ವೇಳೆ ಸೋಂಕಿನ ಲಕ್ಷಣಗಳಾದ ಜ್ವರ, ಕೆಮ್ಮು, ನೆಗಡಿ ಇದ್ದವರಿಗೆ ಜನರಲ್ ಕಿಟ್‌ಗಳನ್ನು ವಿತರಿಸಲಾಗಿದೆ.
ಗಣಿಜಿಲ್ಲೆಯ ವಿಷೇಷ ಕಾರ್ಯಕ್ರಮ: ಗ್ರಾಮೀಣ ಭಾಗಕ್ಕೂ ಆವರಿಸಿರುವ ಕೋವಿಡ್ ಸೋಂಕನ್ನು ನಿಯಂತ್ರಿಸಲು ಜಿಲ್ಲಾಡಳಿತ, ಜಿಪಂ “ಕುಟುಂಬ ಆರೋಗ್ಯ ಸಂರಕ್ಷಣಾ ತಂಡ’ ರಚನೆಯ ಮೂಲಕ ವಿನೂತನ ಕಾರ್ಯಕ್ರಮವನ್ನು ಕೈಗೊಂಡಿದೆ. ಇದನ್ನು ಗಮನಿಸಿರುವ ಗ್ರಾಮೀಣಾಭಿವೃದ್ಧಿ ಸಚಿವರು, ರಾಜ್ಯದ ಇತರೆ ಜಿಲ್ಲೆಗಳವರು ಅನುಸರಿಸುವಂತೆ ಸೂಚಿಸಿ ವಿಸ್ತರಿಸಿರುವುದು ಗಮನಾರ್ಹವಾಗಿದೆ.