ಹೊಸಪೇಟೆ: ದಿನೇ ದಿನೆ ಕೊರೊನಾ ವೈರಸ್ ಸುನಾಮಿಯಂತೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯಲ್ಲಿ ಮೇ 19ರ ಬೆಳಗ್ಗೆ 10 ಗಂಟೆಯಿಂದ ಮೇ 24ರ ಬೆಳಗ್ಗೆ 6 ಗಂಟೆವರೆಗೆ ಜಿಲ್ಲಾಡಳಿತ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಿದೆ.
ಹೀಗಾಗಿ ಲಾಕ್‌ಡೌನ್ ಯಶಸ್ವಿಗೊಳಿಸಲು ಪೊಲೀಸ್ ಪಡೆ ಲ್ಡಿಗೆ ಇಳಿದಿದೆ. ಜನತಾ ಕಫೂ ಮತ್ತು ಸೆಮಿ ಲಾಕ್‌ಡೌನ್ ಅಸ್ತ್ರದಿಂದ ಕೊರೊನಾ ಸೋಂಕಿನ ಕೊಂಡಿಯನ್ನು ಕಳಚಲು ಆಗದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈಗ ಐದು ದಿನಗಳ ಸಂಪೂರ್ಣ ಲಾಕ್‌ಡೌನ್ ಮೊರೆ ಹೋಗಿದೆ.
ನಿರ್ಬಂಧ: ದಿನಸಿ ಹಾಗೂ ತರಕಾರಿ, ಹಣ್ಣುಕೊಳ್ಳುವ ನೆಪದಲ್ಲಿ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಜನರು ಮಾರ್ಕೆಟ್‌ಗೆ ಪದೇ ಪದೆ ಬರುತ್ತಿದ್ದರಿಂದ ಜನ ಜಂಗುಳಿ ಏರ್ಪಡುತ್ತಿತ್ತು. ಇನ್ನೂ ಮದುವೆ ಸಮಾರಂಭಗಳನ್ನು ನಿರ್ಬಂಧಿಸಿದ್ದರೂ ಕದ್ದುಮುಚ್ಚಿ ಮದುವೆಗಳು ನಡೆಯುತ್ತಿದ್ದವು. ಈಗ ಸಂಪೂರ್ಣ ಲಾಕ್‌ಡೌನ್‌ನಿಂದ ಜನ ಒಂದೆಡೆ ಸೇರುವುದು ಹಾಗೂ ಜನರ ಓಡಾಟಕ್ಕೆ ಐದು ದಿನಗಳವರೆಗೆ ಕಡಿವಾಣ ಬೀಳಲಿದೆ.
ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಪಾಸಿಟಿವಿ ದರ ಶೇ. 45 ದಾಟಿದೆ. ಹೀಗಾಗಿ ಅವಳಿ ಜಿಲ್ಲೆಗಳ ಜಿಲ್ಲಾಡಳಿತ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಜತೆಗೆ ನಡೆದ ಸಭೆಯಲ್ಲಿ ಅಂಶಗಳ ಆಧಾರದ ಮೇಲೆ ಸಂಪೂರ್ಣ ಲಾಕ್‌ಡೌನ್‌ಗೆ ಷರಾ ಒತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹಾಗೂ ಜಿಲ್ಲಾ ಧಿಕಾರಿ ಪವನಕುಮಾರ ಮಾಲಪಾಟಿ ಅವರು ತಜ್ಞರ ಜತೆ ಚರ್ಚಿಸಿ ಸಂಪೂರ್ಣ ಲಾಕ್ ಡೌನ್ ನಿರ್ಧಾರಕ್ಕೆ ಬಂದಿದ್ದಾರೆ.
ನಗರದಲ್ಲಿ ಅನ ಧಿಕೃತವಾಗಿ ತೆರೆಯಲಾಗಿದ್ದ ತರಕಾರಿ ಮಾರ್ಕೆಟ್‌ನ್ನು ಪೊಲೀಸರು ಸ್ಥಳಾಂತರಿಸಿದ್ದಾರೆ. ನಗರದ ಮದಕರಿ ನಾಯಕ ವೃತ್ತ, ಹಳೇ ಬಸ್ ನಿಲ್ದಾಣದ ಬಳಿ ಇದ್ದ ಅನ ಧಿಕೃತ ತರಕಾರಿ ಮಾರುಕಟ್ಟೆಗಳನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ. ನಗರದಲ್ಲಿ ಜನಜಂಗುಳಿಯನ್ನು ತಡೆಯಲು ಪೊಲೀಸರು ಎಲ್ಲೆಡೆ ನಾಕಾಬಂದಿ ಹಾಕಿದ್ದಾರೆ.
ಲಾಕ್ ಡೌನ್ ಯಶಸ್ವಿಗೊಳಿಸಲು ನಗರದಲ್ಲಿ ವೈದ್ಯಕೀಯ ಸೇವೆಗೆ ಹೊರತುಪಡಿಸಿ ಜನರ ಓಡಾಟಕ್ಕೆ ನಿರ್ಬಂಧ ಹಾಕಲು ಪೊಲೀಸರು ಸಜ್ಜಾಗಿದ್ದಾರೆ.