ಸಂಡೂರು: ಕೋವಿಡ್-19 ವಿರುದ್ಧ ಪಟ್ಟಣದಲ್ಲಿ ಪುರಸಭೆಯ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ನಿತ್ಯ ಒಂದಲ್ಲ ಒಂದು ಓಣಿಯನ್ನು ಸೀಲ್‌ಡೌನ್ ಮಾಡುವುದರ ಜೊತೆಗೆ ಸ್ಯಾನಿಟೈಸರ್ ಸಿಂಪಡಣೆ ಮಾಡುತ್ತಿದ್ದೇವೆ ಎಂದು ಪುರಸಭೆ ಆರೋಗ್ಯ ಅಧಿ ಕಾರಿ ಮಲ್ಲೇಶಪ್ಪ ತಿಳಿಸಿದರು.
ಅವರು ಪಟ್ಟಣದ 14ನೇ ವಾರ್ಡ್ ಹಾಗೂ ಎಲ್‌ಬಿ ಕಾಲೋನಿಯಲ್ಲಿ ಪೂರ್ಣಪ್ರಮಾಣದ ಸ್ಯಾನಿಟೈಸರ್ ಸಿಂಪಡಿಸುವ ಮೂಲಕ ಕೊರೊನಾ ತೀವ್ರತೆಯನ್ನು ತಡೆಯುವ ಮತ್ತು ಜನರಲ್ಲಿ ಆತ್ಮಸ್ಥೈರ್ಯ ಉಂಟುಮಾಡುವಂಥ ಕಾರ್ಯ ಮಾಡುತ್ತಿದ್ದಾರೆ.
ಕೊರೊನಾ ವಿರುದ್ಧದ ಹೋರಾಟ ಒಂದು ಕಡೆಯಾದರೆ ಮತ್ತೂಂದು ಕಡೆ ನಿತ್ಯದ ಕಾರ್ಯಗಳಾದ ಕಸ ಸಂಗ್ರಹ, ಓಣಿಗಳಲ್ಲಿ ಕಸ ಸಂಗ್ರಹ, ಚರಂಡಿಗಳ ಸ್ವತ್ಛತೆ, ಬ್ಲಿಚಿಂಗ್ ಪೌಡರ್ ಹಾಕುವುದು, ವಾಹನಗಳಲ್ಲಿ ಕೊರೊನಾ ಜಾಗೃತಿಯನ್ನು ಮಾಡುವುದು. ಪುರಸಭೆ ಆವರಣದಲ್ಲಿಯೇ ವ್ಯಾಕ್ಸಿನ್ ಹಾಕುತ್ತಿರುವುದರಿಂದ ಅಲ್ಲಿಯೂ ಸಹ ಜನಜಂಗುಳಿ ಹೆಚ್ಚುತ್ತಿದ್ದು ಅದನ್ನು ತಡೆಯುವ ಮತ್ತು ಸ್ಯಾನಿಟೈಸರ್ ಮಾಡುವಂಥ ನಿತ್ಯಕಾರ್ಯ ಮಾಡಬೇಕಾಗಿದೆ.
ತರಕಾರಿ ಮಾರುಕಟ್ಟೆ ಸ್ಥಳಾಂತರ ಮಾಡಿದರೂ ಸಹ ಒಂದು ಕಡೆ ತಹಶೀಲ್ದಾರ್ ಕೋಲು, ಮೈಕು ಹಿಡಿದು ಹೊರಟರೆ ಮತ್ತೂಂದು ಕಡೆ ಪುರಸಭೆ ಅಧಿ ಕಾರಿಗಳು ತಮ್ಮ ಗಾಡಿ ಮತ್ತು ಸ್ಯಾನಿಟೈಸರ್ ಮಾಡಲು ಯಂತ್ರಗಳನ್ನು ಇಟ್ಟುಕೊಂಡು ಓಡುವಂತಹ ಸ್ಥಿತಿ ಉಂಟಾಗಿದೆ. ಆದರೂ ಸಾರ್ವಜನಿಕರು ನಿರ್ಭಿತಿಯಿಂದ ಓಡಾಡುತ್ತಿದ್ದು, ಪೊಲೀಸರೂ ಲಾಠಿ ಹಿಡಿದು ತಡೆಯುವ ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ, ಒಟ್ಟಾರೆಯಾಗಿ ಕೊರೊನಾ ನಿಯಂತ್ರಣಕ್ಕೆ ಇಡೀ ತಾಲೂಕು ಆಡಳಿತ ತಮ್ಮ ಪ್ರಯತ್ನ ನಡೆಸುತ್ತಿದೆ ಎಂದರು.