Advertisement

ಇಂದಿನಿಂದ 5 ದಿನ ಜಿಲ್ಲೆ ಸಂಪೂರ್ಣ ಲಾಕ್‌

08:41 PM May 19, 2021 | Team Udayavani |

ಬಳ್ಳಾರಿ: ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಾದ್ಯಂತ ಸಾರ್ವಜನಿಕರ ಆರೋಗ್ಯ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮೇ 19ರ ಬೆಳಗ್ಗೆ 10ರಿಂದ ಮೇ 24ರ ಬೆಳಗ್ಗೆ 6ರವರೆಗೆ ಸಂಪೂರ್ಣ ಜನಸಂಚಾರಕ್ಕೆ ನಿರ್ಬಂಧ ವಿ ಧಿಸಲಾಗಿದೆ. ಕೆಲ ಚಟುವಟಿಕೆಗಳಿಗೆ ಮಾತ್ರ ಅನುಮತಿ ನೀಡಿ ಆದೇಶಿಸಲಾಗಿದೆ.

Advertisement

ಕೊರೊನಾ ಸರಪಳಿಯನ್ನು ತುಂಡರಿಸುವ ನಿಟ್ಟಿನಲ್ಲಿ ತಜ್ಞರ ಶಿಫಾರಸ್ಸಿನಂತೆ ಈ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್‌ ತಿಳಿಸಿದರು. ನಗರದ ಜಿಪಂ ಕಚೇರಿಯ ಕೆಸ್ವಾನ್‌ ಸಭಾಂಗಣದ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗಿನ ವಿಡಿಯೋ ಸಂವಾದದಲ್ಲಿ ಮಂಗಳವಾರ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕೋವಿಡ್‌ ನಿಯಂತ್ರಣಕ್ಕೆ ಬಹಳಷ್ಟು ಪ್ರಯಾಸ ಪಡುತ್ತಿದ್ದೇವೆ. ಇನ್ನೂ ಹೆಚ್ಚಿನ ಕೆಲಸ ಮಾಡಬೇಕಿದೆ. ಕೊರೊನಾ ಸರಪಳಿಯನ್ನು ತುಂಡರಿಸುವ ನಿಟ್ಟಿನಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದ್ದು, ಐದು ದಿನಗಳವರೆಗೆ ಜಾರಿಯಲ್ಲಿರಲಿದೆ ಎಂದರು.

ಜಿಲ್ಲೆಯಲ್ಲಿ ಕೋವಿಡ್‌-19 ಸಾಂಕ್ರಾಮಿಕ ರೋಗವು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿದೆ. ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ. 45ಕ್ಕಿಂತ ಹೆಚ್ಚಾಗಿದ್ದು, ಇದರಿಂದ ಸೋಂಕಿತರ ಸಂಖ್ಯೆ ತೀವ್ರಗೊಂಡಿದೆ. ಆಮ್ಲಜನಕಯುಕ್ತ ಹಾಗೂ ವೆಂಟಿಲೇಟರ್‌ಯುಕ್ತ ಹಾಸಿಗೆಗಳ ಅಗತ್ಯವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿರುವ ವೈದ್ಯಕೀಯ ಮೂಲಸೌಕರ್ಯವು ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿರುವ ಸೋಂಕಿತ ಪ್ರಕರಣಗಳಿಗೆ ವೈದ್ಯಕೀಯ ಮೂಲಸೌಕರ್ಯಗಳನ್ನು ಒದಗಿಸುವುದರಲ್ಲಿ ಸಾಕಷ್ಟು ಒತ್ತಡ ಊಂಟಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮೇ 17ರಂದು ಸೋಮವಾರ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದದಲ್ಲಿ ನೀಡಲಾದ ನಿರ್ದೇಶನಗಳಂತೆ ಹಾಗೂ ಜಿಲ್ಲೆಯಲ್ಲಿನ ತಜ್ಞರೊಂದಿಗೆ ಸಮಾಲೋಚಿಸಿ ಕೋವಿಡ್‌-19 ಸಾಂಕ್ರಾಮಿಕ ರೋಗವನ್ನು ಯಶಸ್ವಿಯಾಗಿ ತಡೆಗಟ್ಟುವ ಹಾಗೂ ಹರಡುವಿಕೆಯನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತಾ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಈ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಜಿಲ್ಲಾ ಧಿಕಾರಿ ಪವನಕುಮಾರ ಮಾಲಪಾಟಿ ಮಾತನಾಡಿ, ಈ ಮುಂಚೆ ಅನುಮತಿ ನೀಡಲಾಗಿದ್ದ ಬೆಳಗ್ಗೆ 6ರಿಂದ 10ರವರೆಗಿನ ಚಟುವಟಿಕೆಗೆ ನಿರ್ಬಂಧ ವಿ ಧಿಸಲಾಗಿದೆ. ಇದಕ್ಕೆ ಜನರು ಸಹಕರಿಸಬೇಕು ಎಂದರು. ಜಿಲ್ಲೆಯಾದ್ಯಾಂತ ಮೇ ತಿಂಗಳ ಪಡಿತರ ವಿತರಣೆ ಈಗಾಗಲೇ ಬಹುತೇಕ ಮುಗಿದುಹೋಗಿದೆ. ಇನ್ನೂ ಪಡೆಯದ ಕುಟುಂಬಗಳಿಗೆ ನೇರವಾಗಿ ಗ್ರಾಹಕರ ಮನೆಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ತಲುಪಿಸುವುದಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದರು.

ಮನೆಬಾಗಿಲಿಗೆ ಹಣ್ಣು-ತರಕಾರಿ: ತೋಟಗಾರಿಕೆ ಇಲಾಖೆಗೆ ಸಂಬಂಧಿ ಸಿದ “”ಹಾಪ್‌-ಕಾಮ್ಸ್‌” ಮೂಲಕ ಮಾತ್ರ ಸಾರ್ವಜನಿಕರಿಗೆ ತರಕಾರಿಗಳನ್ನು ಹಾಗೂ ಹಣ್ಣುಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ಮಾರಾಟ ಮಾಡಲು ಅನುಮತಿ ನೀಡಲಾಗಿದೆ ಎಂದ ಡಿಸಿ ಪವವನಕುಮಾರ ಮಾಲಪಾಟಿ ಅವರು, “”ಹಾಪ್‌-ಕಾಮ್ಸ್‌” ಲಭ್ಯವಿಲ್ಲದಿರುವ ಪ್ರದೇಶಗಳಲ್ಲಿ ಸಂಬಂಧಟ್ಟ ತಹಶೀಲ್ದಾರರು ಸ್ಥಳೀಯವಾಗಿ ಸೀಮಿತ ಸಂಖ್ಯೆಯಲ್ಲಿ ತಳ್ಳುವ ಗಾಡಿಯ ಮೂಲಕ ಮನೆ ಬಾಗಿಲಿಗೆ ತರಕಾರಿಗಳನ್ನು ಹಾಗೂ ಹಣ್ಣುಗಳನ್ನು ಮಾರಾಟ ಮಾಡಲು ಪಾಸ್‌ ನೀಡುವುದರ ಮೂಲಕ ಅನುಮತಿ ನೀಡುವಂತೆ ತಿಳಿಸಲಾಗಿದೆ ಎಂದರು.

Advertisement

ಹಾಲು, ಡೈರಿ ಹಾಗೂ ಹಾಲಿನ ಬೂತುಗಳು ಮತ್ತು ಮೊಟ್ಟೆಗಳ ಅಂಗಡಿಗಳು ಮಾತ್ರ ಪ್ರತಿ ದಿನ ಬೆಳಗ್ಗೆ 6ಗಂಟೆಯಿಂದ ಬೆಳಗ್ಗೆ 10 ಗಂಟೆವರೆಗೆ ತೆರೆಯಲು ಅನುಮತಿಸಲಾಗಿದೆ ಎಂದು ವಿವರಿಸಿದ ಅವರು ಕೃಷಿಗೆ ಸಂಬಂ ಧಿಸಿದ ಅಗತ್ಯ ವಸ್ತುಗಳು/ ಉಪಕರಣಗಳ ಅಂಗಡಿಗಳನ್ನು ಪ್ರತಿದಿನ ಬೆಳಗ್ಗೆ 6ಗಂಟೆಯಿಂದ ಬೆಳಗ್ಗೆ 10ಗಂಟೆವರೆಗೆ ತೆರೆಯಲು ಅನುಮತಿಸಲಾಗಿದೆ ಎಂದರು. ಹೋಟೆಲ್‌, ರೆಸ್ಟೋರೆಂಟ್‌ಗಳಿಂದ ಗ್ರಾಹಕರ ಮನೆ ಬಾಗಿಲಿಗೆ ಪಾರ್ಸಲ್‌ ವಿತರಿಸಲು ಮಾತ್ರ ಅನುಮತಿಸಲಾಗಿದೆ. ಯಾವುದೇ ರೀತಿಯ ಪಾರ್ಸಲ್‌ಗ‌ಳನ್ನು ಗ್ರಾಹಕರು ನೇರವಾಗಿ ಖರೀದಿಸಲು ಅವಕಾಶವಿರುವುದಿಲ್ಲ. ಹೋಟೆಲ್‌ ಹಾಗೂ ರೆಸ್ಟೋರೆಂಟ್‌ಗಳು ಪಾರ್ಸಲ್‌ ಸೇವೆಯನ್ನು ಗ್ರಾಹಕರ ಮನೆ ಬಾಗಿಲಿಗೆ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದರು. ಔಷಧ ಹಾಗೂ ವೈದ್ಯಕೀಯ ಉಪಕರಣಗಳ ಅಂಗಡಿಗಳನ್ನು ತೆರೆಯಲು ಅನುಮತಿಸಲಾಗಿದೆ. ಜಿಲ್ಲೆಯಲ್ಲಿರುವ ಎಲ್ಲ ರೀತಿಯ ಕಾರ್ಖಾನೆಗಳಲ್ಲಿ ಕಾರ್ಖಾನೆ ಆವರಣದ ಒಳಗಡೆ ಇರುವ ಸಿಬ್ಬಂದಿಯನ್ನು ಮಾತ್ರ ಬಳಸತಕ್ಕದ್ದು ಹಾಗೂ ಹೊರಗಡೆಯಿಂದ ಸಿಬ್ಬಂದಿಯನ್ನು ಬಳಸಲು ಅವಕಾಶವಿರುವುದಿಲ್ಲ. ಅನುಮತಿಸಲ್ಪಟ ಕಾರ್ಖಾನೆಗಳಿಗೆ ಸಂಬಂಧಪಟ್ಟಂತೆ ಗೂಡ್ಸ್‌ ವಾಹನಗಳನ್ನು ಹೊರತುಪಡಿಸಿ ಎಲ್ಲ ಇತರೆ ವಾಹನಗಳ(ಸಿಬ್ಬಂದಿ ಸಾಗಿಸುವ ವಾಹನಗಳು) ಸಂಚಾರವನ್ನು ನಿಷೇ ಧಿಸಲಾಗಿದೆ ಎಂದರು.

ವೈದ್ಯಕೀಯ ಕಾರಣಗಳಿಂದ ಆಸ್ಪತ್ರೆಗೆ ಹೋಗುವ ರೋಗಿಗಳಿಗೆ ಹಾಗೂ ರೋಗಿಗಳ ಜೊತೆಯಲ್ಲಿ ಹೋಗುವ ವ್ಯಕ್ತಿಗಳ ಓಡಾಟವನ್ನು ಅನುಮತಿಸಲಾಗಿದೆ. ಪೊಲೀಸ್‌ ಇಲಾಖೆಯು ಅಗತ್ಯ ಕಾರಣಗಳಿಂದ ಸಂಚರಿಸುವ ವ್ಯಕ್ತಿಗಳನ್ನು ದಾಖಲೆಗಳಾನುಸಾರ ಅನುಮತಿಸಲು ತಿಳಿಸಲಾಗಿದೆ. ದಿನ ಪತ್ರಿಕೆ, ದೃಶ್ಯಮಾಧ್ಯಮ ಹಾಗೂ ಎಟಿಎಂ ಸೇವೆಗಳು, ರಾತ್ರಿ ವಸತಿ ರಹಿತ ನಿರ್ಗತಿಕರ ಕೇಂದ್ರ, ವೃದ್ಧಾಶ್ರಮ, ಬಾಲಮಂದಿರ, ಬಾಲಾಶ್ರಮ, ಅನಾಥಾಶ್ರಮಗಳಿಗೆ ಅನುಮತಿಸಲಾಗಿದೆ ಎಂದರು. ನಿರ್ಮಾಣ ಸ್ಥಳದಲ್ಲಿಯೇ ವಾಸವಾಗಿರುವ ಕಾರ್ಮಿಕರನ್ನು ಬಳಸಿಕೊಂಡು ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲು ಅನುಮತಿಸಲಾಗಿದೆ.

ಕೋವಿಡ್‌-19 ಸಂಬಂಧಿ ಸಿದ ಕಾರ್ಯಕ್ಕೆ ನಿಯೋಜಿಸಿದ ಎಲ್ಲ ಕಚೇರಿಗಳು, ಅ ಧಿಕಾರಿಗಳು, ಹಾಗೂ ಸಿಬ್ಬಂದಿಗಳು. ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಸಗಟು ಮಾರಾಟಗಾರರು ತರಕಾರಿ ಹಾಗೂ ಹಣ್ಣುಗಳನ್ನು ಖರೀದಿಸಲು ಹಾಗೂ ಬೇರೆಡೆ ಸಾಗಿಸಲು ಯಾವುದೇ ನಿರ್ಬಂಧವಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಅಡುಗೆ ಅನಿಲ ಕಾರ್ಯನಿರ್ವಹಣೆಯನ್ನು ಮನೆ ಬಾಗಿಲಿಗೆ ತಲುಪಿಸುವ ಷರತ್ತಿಗೊಳಪಟ್ಟು ಕಾರ್ಯನಿರ್ವಹಣೆಯನ್ನು ಅನುಮತಿಸಲಾಗಿದೆ. ಅಗತ್ಯ ಸೇವೆಗಳಾದ ಆಂಬ್ಯುಲೆನ್ಸ್‌, ಅಗ್ನಿಶಾಮಕ ಮತ್ತು ಇತರೆ ತುರ್ತು ವೈದ್ಯಕೀಯ ಸೇವೆಗಳು, ಬ್ಯಾಂಕ್‌, ವಿದ್ಯುತ್‌, ಆಮ್ಲಜನಕ ಉತ್ಪಾದನಾ ಘಟಕ, ಪೆಟ್ರೋಲ್‌ ಪಂಪ್‌, ನೀರು ನೈರ್ಮಲ್ಯ ಸೇವೆಗಳಿಗೆ ಅನುಮತಿಸಲಾಗಿದೆ ಎಂದರು.

ಈ ಚಟುವಟಿಕೆಗಳಿಗೆ ನಿರ್ಬಂಧ: ಕಿರಾಣಿ ಅಂಗಡಿಗಳು, ದಿನಸಿ, ಹಣು ತರಕಾರಿಗಳು, ಮಾಂಸ ಮತ್ತು ಮೀನು, ಮದ್ಯದ ಅಂಗಡಿಗಳು, ಪಶು ಆಹಾರದ ಅಂಗಡಿಗಳು ಹಾಗೂ ಹಣ್ಣು ಮತ್ತು ತರಕಾರಿಗಳ ಮಾರುಕಟ್ಟೆಗಳನ್ನು ಸಂಪೂರ್ಣವಾಗಿ ನಿಷೇ ಧಿಸಲಾಗಿದೆ ಎಂದು ಅವರು ತಿಳಿಸಿದರು. ಈ ಆದೇಶವು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಾದ್ಯಾಂತ ಜಾರಿಯಲ್ಲಿರಲಿದ್ದು, ಈ ಆದೇಶ ಪಾಲನೆಯಲ್ಲಿ ಲೋಪವೆಸಗುವಂಥವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಅನ್ವಯವಾಗಬಹುದಾದ ಇತರೆ ಕಾನೂನು ಉಪಬಂಧಗಳ ಅನುಸಾರ ಕ್ರಮಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಮೇ 25ರ ನಂತರ ಜಿಲ್ಲೆಯಲ್ಲಿ ಕೋವಿಡ್‌-19 ವಾಸ್ತವ ಸ್ಥಿತಿಗತಿಯನ್ನು ಪರಿಶೀಲನೆ ನಂತರ ನಿರ್ಬಂಧಗಳ ಬಗ್ಗೆ ತೀರ್ಮಾನಿಸಲಾಗುವುದು ಎಂದು ಜಿಲ್ಲಾ ಧಿಕಾರಿ ಮಾಲಪಾಟಿ ಅವರು ಸ್ಪಷ್ಟಪಡಿಸಿದರು. ಈ ವೇಳೆ ಎಸ್‌ಪಿ ಸೈದುಲು ಅಡಾವತ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next