ಬಳ್ಳಾರಿ: ಕೋವಿಡ್ ಕರ್ತವ್ಯನಿರತ ವೈದ್ಯರು ಹಾಗೂ ತಜ್ಞ ವೈದ್ಯರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗೃಹಕಚೇರಿ ಕೃಷ್ಣಾದಿಂದ ವರ್ಚುವಲ್ ಮೂಲಕ ಶನಿವಾರ ಸಂವಾದ ನಡೆಸಿದರು. ಕೋವಿಡ್ ನಿಯಂತ್ರಣಕ್ಕೆ ತಜ್ಞವೈದ್ಯರ ಸಲಹೆಗಳನ್ನು ಕೇಳಿದರು.
ಬೆಂಗಳೂರಿನ ಡಾ| ಲಕ್ಷ್ಮೀಪತಿ, ಮಣಿಪಾಲ್‌ನ ಡಾ| ಶಶಿಕಿರಣ ಉಮಾಕಾಂತ, ಬಳ್ಳಾರಿಯ ಅರಿವಳಿಕೆ ತಜ್ಞರು ಹಾಗೂ ತೀವ್ರಚಿಕಿತ್ಸಾ ತಜ್ಞ ಡಾ| ಶ್ರೀನಿವಾಸಲು, ವಿಜಯಪುರದ ಡಾ| ಮೀನಾಕ್ಷಿ ಮುತ್ತಪ್ಪನವರ್, ಮಂಗಳೂರಿನ ಡಾ| ಶರತ್ ಬಾಬು, ಗೋಕಾಕ್‌ನ ಡಾ| ಮಹಾಂತೇಶ ಶೆಟ್ಟಪ್ಪನವರ್, ಅರಕಲಗೂಡಿನ ಡಾ| ದೀಪಕ್, ಮೈಸೂರಿನ ಡಾ| ತ್ರೀವೇಣಿ, ತುಮಕೂರಿನ ಡಾ| ಭಾನುಪ್ರಕಾಶ, ಕಲಬುರಗಿಯ ಡಾ| ಧನರಾಜ್, ತೀರ್ಥಹಳ್ಳಿಯ ಡಾ| ಗಣೇಶ ಭಟ್ ಅವರು ಈ ವರ್ಚುವಲ್ ಸಂವಾದದಲ್ಲಿ ಭಾಗಿಯಾಗಿದ್ದರು.
ಬಳ್ಳಾರಿಯ ಅರಿವಳಿಕೆ ತಜ್ಞರು ಹಾಗೂ ತೀವ್ರಚಿಕಿತ್ಸಾ ತಜ್ಞ ಡಾ| ಶ್ರೀನಿವಾಸಲು ಅವರು ಜಿಲ್ಲೆಯಲ್ಲಿ ಕೋವಿಡ್ ಸ್ಥಿತಿಗತಿ, ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳು ಹಾಗೂ ಇನ್ನಿತರೆ ಪ್ರಮುಖ ವಿಷಯಗಳ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದರು. ಜಿಲ್ಲೆಯಲ್ಲಿ 207 ಐಸಿಯು ಬೆಡ್‌ಗಳಿದ್ದು, ಅವುಗಳಲ್ಲಿ 101 ವೆಂಟಿಲೇಟರ್ ಸೌಲಭ್ಯಗಳಿವೆ. 1268 ಎಚ್‌ಡಿಯು/ ಎಚ್‌ಎಫ್‌ಯು ಸೌಲಭ್ಯವಿರುವ ಬೆಡ್‌ಗಳಿವೆ ಮತ್ತು 378 ಸಾಮಾನ್ಯ ಹಾಸಿಗೆಗಳಿವೆ ಎಂದು ಅವರು ವಿವರಿಸಿದರು. ಜಿಂದಾಲ್‌ನಲ್ಲಿ ನಿತ್ಯ 1 ಸಾವಿರ ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದಿಸಲಾಗುತ್ತಿದ್ದು, ಇಲ್ಲಿಂದಲೇ ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳಿಗೆ ಆಕ್ಸಿಜನ್ ಪೂರೈಸಲಾಗುತ್ತಿದೆ. ನಮ್ಮ ಜಿಲ್ಲೆಗೆ ನಿತ್ಯ 33.7 ಕೆಎಲ್ ಆಕ್ಸಿಜನ್ ಅಗತ್ಯವಿದ್ದು, ಯಾವುದೇ ರೀತಿಯ ಆಕ್ಸಿಜನ್ ಸಮಸ್ಯೆ ನಮ್ಮ ಜಿಲ್ಲೆಯಲ್ಲಿ ಇಲ್ಲ ಎಂದು ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಸಮನ್ವಯದ ಮೂಲಕ ಅಗತ್ಯ ಇರುವೆಡೆ ಆಕ್ಸಿಜನ್ ಒದಗಿಸುವ ಕೆಲಸವನ್ನು ಬಳ್ಳಾರಿ ಜಿಲ್ಲಾಡಳಿತ ಮಾಡುತ್ತಿದೆ ಎಂದರು. ಜಿಂದಾಲ್ ಎದುರುಗಡೆ 1 ಸಾವಿರ ಆಕ್ಸಿಜನ್ ಬೆಡ್‌ಗಳ ತಾತ್ಕಾಲಿಕ ಆಸ್ಪತ್ರೆ ನಿರ್ಮಿಸಲಾಗುತ್ತಿದ್ದು, ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇರುವುದನ್ನು ಸಿಎಂ ಅವರ ಗಮನಕ್ಕೆ ತಂದರು.
ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ತಾತ್ಕಾಲಿಕ ಆಸ್ಪತ್ರೆಗೆ ವೈದ್ಯರು ಹಾಗೂ ಸಿಬ್ಬಂದಿ ನೇಮಕಾತಿಗೆ ಪ್ರಕಟಣೆ ಹೊರಡಿಸಿದಾಗಿಯೂ ನಿರೀಕ್ಷಿಸಿದಷ್ಟು ಅರ್ಜಿಗಳು ಬರದ ಹಿನ್ನೆಲೆಯಲ್ಲಿ ಕೊರತೆಯಾದ ಕಾರಣ ವಿಮ್ಸ್‌ನಿಂದ ವೈದ್ಯರು ಹಾಗೂ ಸಿಬ್ಬಂದಿಗಳನ್ನು ತಾತ್ಕಾಲಿಕವಾಗಿ ನಿಯೋಜಿಸಲು ಉದ್ದೇಶಿಸಲಾಗಿದೆ ಎಂದರು. ಮುಖ್ಯಮಂತ್ರಿಗಳು ಇದಕ್ಕೆ ಸಮ್ಮತಿ ವ್ಯಕ್ತಪಡಿಸಿದರು.
ಅಂತಿಮ ವರ್ಷದ ವಿದ್ಯಾರ್ಥಿಗಳ ಬಳಕೆ: ಕೋವಿಡ್ ಕೆಲಸಕ್ಕೆ ಅಂತಿಮ ವರ್ಷದ ವೈದ್ಯಕೀಯ ಮತ್ತು ನರ್ಸಿಂಗ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಿಳಿಸಿದರು.
ನುರಿತ ವೈದ್ಯರ ಮುಂದಾಳತ್ವದಲ್ಲಿ ಅಂತಿಮ ವರ್ಷದ ವೈದ್ಯ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳ ಸೇವೆಯನ್ನು ಬಳಸಿಕೊಳ್ಳಲಾಗುವುದು ಎಂದರು. ವೈದ್ಯಕೀಯ ಸಿಬ್ಬಂದಿ ರಕ್ಷಣೆಗೆ ಸರ್ಕಾರ ಬದ್ಧವಿದೆ.
ಸೋಂಕು ತೀವ್ರಗೊಳ್ಳುತ್ತಿರುವ ಈ ಸಂದರ್ಭದಲ್ಲಿ ವೈದ್ಯರು ಮಾನವೀಯತೆಯ ನೆಲೆಗಟ್ಟಿನಲ್ಲಿ ಕೆಲಸ ಮಾಡಬೇಕು ಎಂದ ಸಿಎಂ ಬಿಎಸ್‌ವೈ, ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು ಎಂದು ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಾರ್ತಾ ಇಲಾಖೆಯ ಆಯುಕ್ತ ಡಾ| ಪಿ.ಎಸ್.ಹರ್ಷ ಮತ್ತಿತರರು ಇದ್ದರು.