ಹರಪನಹಳ್ಳಿ: ಪಂಚಮಸಾಲಿ ಸಮಾಜಕ್ಕೆ ಮುಖ್ಯಮಂತ್ರಿ ಸ್ಥಾನ ಮತ್ತು 35 ಜನರನ್ನು ಮಂತ್ರಿ ಮಾಡಿದರೂ ಮೀಸಲಾತಿ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಪಟ್ಟಣದ ತರಳಬಾಳು ಕಲ್ಯಾಣ ಮಂಟಪ ಅವರಣದಲ್ಲಿ ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟದ ಪಾದಯಾತ್ರೆ ಬಹಿರಂಗ ಸಭೆಯಲ್ಲಿ ಮಾತನಾಡಿದ ಶ್ರೀಗಳು, ನಿಮ್ಮ ಸಮಾಜಕ್ಕೆ ಮಂತ್ರಿ ಸ್ತಾನ ಕೊಟ್ಟಿದ್ದಾರೆ ಎನ್ನುತ್ತಿದ್ದಾರೆ. ಇವೆಲ್ಲಾ ಕಣ್ಣೊರೆಸುವ ತಂತ್ರ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ಪಂಚಮಸಾಲಿ ಸಮಾಜ ತ್ಯಾಗ ಮಾಡಿದೆ. ಯಡಿಯೂರಪ್ಪ ಅವ ಯಲ್ಲಿಯೇ ಮೀಸಲಾತಿ
ಪಡೆಯುವ ವಿಶ್ವಾಸವಿದೆ ಎಂದರು.
ಪಾದಯಾತ್ರೆ ಹರಿಹರ ಮುಟ್ಟುವುದರೊಳಗೆ ಸರ್ಕಾರ ನಿರ್ಧಾರ ಪ್ರಕಟಿಸಬೇಕು. ಇಲ್ಲವಾದಲ್ಲಿ ಜ. 28ರಂದು ನಡೆಯುವ ಬಹಿರಂಗ ಸಭೆಯಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಮತ್ತು ಅಲ್ಲಿಯೇ ಅಮರಣಾಂತರ ಉಪವಾಸ ಮಾಡುವ ನಿರ್ಧಾರ ಪ್ರಕಟಿಸಲಿದ್ದೇವೆ. ಬೇವರಿನ ಪಾಲು ಕೇಳುತ್ತಿದ್ದೇವೆಯೇ ಹೊರತು ಯಾರ ವಿರುದ್ಧವೂ ಹೋರಾಟವಲ್ಲ. ಪಂಚಮಸಾಲಿ ಸಮುದಾಯ ಬೇಡುವುದಿಲ್ಲ, ಸ್ವಾಭಿಮಾನದಿಂದ ಬಂದವರು. ಸಮಾಜಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲದು ಎಂದು ಪ್ರತಿಪಾದಿಸಿದರು.
ಹರಿಹರ ಪಂಚಮಸಾಲಿ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ಮಾತನಾಡಿ, ಎರಡು ಪೀಠಗಳು ಒಂದಾಗಿದೆ, ಅದು ಹೇಗೆ ಸರ್ಕಾರ ಮೀಸಲಾತಿ ಕೊಡುವುದಿಲ್ಲವೋ ನಾವು ನೋಡುತ್ತೇವೆ. ಮೀಸಲಾತಿ ಸಿಗುವವರೆಗೂ ಬಿಡುವುದಿಲ್ಲ. ಈ ವೇದಿಕೆಯಿಂದ 2ಎ ಮೀಸಲಾತಿ ಕಹಳೆ ಮೊಳಗಿದೆ. ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ಹಾರ್ಡ್‌ವೇರ್ ಆಗಿದ್ದರೆ ಪಾದಯಾತ್ರೆ ಮಾಡುತ್ತಿದ್ದರೆ, ನಾವು ಪಾದಯಾತ್ರೆಗೆ ಬಾರದಿದ್ದರೂ ನಾವು ಸಾಫ್ಟವೇರ್ ಆಗಿ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.
ಶಾಸಕ ಜಿ. ಕರುಣಾಕರರೆಡ್ಡಿ ಮಾತನಾಡಿ, ಪಂಚಮಸಾಲಿ ಸಮಾಜದ ಹರಿದು ತಿನ್ನುವ ಸಂಸ್ಕೃತಿ ಅಲ್ಲ, ಹಂಚಿ ತಿನ್ನುವ ಸಮಾಜವಾಗಿದೆ. ಸಮಾಜದ ಹೋರಾಟಕ್ಕೆ ನನ್ನ ಬೆಂಬಲವಿದೆ. ಹೋರಾಟ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇವೆ ಎಂದು ಭರವಸೆ ನೀಡಿದರು.
ಸಂಸದ ವೈ.ದೇವೇಂದ್ರಪ್ಪ, ಮಾಜಿ ಶಾಸಕರಾದ ವಿಜಯನಂದ ಕಾಶಪ್ಪನವರ್, ಹೆಚ್.ಎಸ್.ಶಿವಶಂಕರ್, ನಂದಿಹಳ್ಳಿ ಹಾಲಪ್ಪ, ವೀಣಾ ಕಾಶಪ್ಪನವರ್, ಅರಸೀಕೆರೆ ಎನ್. ಕೊಟ್ರೇಶ್, ಶಶಿಧರ್ ಪೂಜಾರ್, ಎಸ್.ಪಿ.ಪ್ರಭಾಕರಗೌಡ, ಎಂ.ಟಿ.ಸುಭಾಷಚಂದ್ರ, ಜಿ.ನಂಜನಗೌಡ, ಪೂಜಾರ ಚಂದ್ರಶೇಖರ್, ಎಂ.ರಾಜಶೇಖರ, ಎಂ.ಪಿ.ವೀಣಾ ಮಹಾಂತೇಶ್, ಹೆಚ್. ಎಸ್.ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
ಓದಿ : ಅನಧಿಕೃತ ಸಿಗಡಿ ಕೃಷಿಗೆ ಕಡಿವಾಣ ಹಾಕಿ