ಬಳ್ಳಾರಿ: ಮಹಾಮಾರಿ ಕೋವಿಡ್ ಸೋಂಕು ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ಮೇ 10ರಸೋಮವಾರದಿಂದ 24ರ ವರೆಗೆ ಸಂಪೂರ್ಣ ಕಠಿಣ ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ ನಗರದ ಜನರು ಭಾನುವಾರವೇ ವಿವಿಧ ವಸ್ತುಗಳನ್ನು ಖರೀದಿಸಿದ್ದು, ವಾಣಿಜ್ಯ ಮಳಿಗೆ, ರಸ್ತೆಗಳು ಜನಜಂಗುಳಿಯಿಂದ ಕಂಗೊಳಿಸಿದವು. ಸೋಮವಾರದಿಂದ ಬೆಳಗ್ಗೆ ನಿಗದಿತ ಅವ ಧಿಯಲ್ಲಿ ಅಗತ್ಯ ವಸ್ತುಗಳಾದ ತರಕಾರಿ, ಹಣ್ಣು, ಹಾಲು, ಕಿರಾಣಿ ಮಳಿಗೆಗಳನ್ನು ಹೊರತುಪಡಿಸಿ ಉಳಿದಂತೆ ಬಟ್ಟೆ, ಫುಟ್‌ವೇರ್, ರೆಡಿಮೇಡ್ ಗಾರ್ಮೆಂಟ್ಸ್ ಸೇರಿ ಎಲ್ಲ ಅಂಗಡಿ, ವಾಣಿಜ್ಯ ಮಳಿಗೆಗಳು ಬಂದ್ ಆಗಲಿವೆ.
ಈ ಮುಂದಿನ 14 ದಿನಗಳ ಕಾಲ ಈ ಮಳಿಗೆಗಳು ತೆರೆಯದ ಹಿನ್ನೆಲೆಯಲ್ಲಿ ಮುಂಜಾಗ್ರತೆ ವಹಿಸಿರುವ ಜನರು, ಕಠಿಣ ನಿರ್ಬಂಧ ಮುನ್ನಾ ದಿನವಾದ ಭಾನುವಾರ ಅಡುಗೆ ಎಣ್ಣೆ, ಬೇಳೆ, ಇನ್ನಿತರೆ ದಿನಸಿ ವಸ್ತುಗಳನ್ನು ಜನರು ಖರೀದಿಸಲು ಮುಂದಾಗಿದ್ದಾರೆ.
ಪಾಲನೆಯಾಗದ ಅಂತರ: ಬಳ್ಳಾರಿ ನಗರ ಸೇರಿ ಜಿಲ್ಲೆಯಲ್ಲಿ ಮಹಮ್ಮಾರಿ ಕೋವಿಡ್ ಸೋಂಕು ಅಬ್ಬರಿಸುತ್ತಿದೆ. ಪ್ರತಿದಿನ 20ಕ್ಕೂ ಹೆಚ್ಚು ಜನರು ಬಲಿಯಾಗುತ್ತಿದ್ದು, ಸಾವಿರಾರು ಜನರು ಸೋಂಕು ಪತ್ತೆಯಾಗುತ್ತಿದೆ. ಇಷ್ಟೆಲ್ಲ ಆದರೂ, ವಾಣಿಜ್ಯ ಮಳಿಗೆಗಳ ಮುಂದೆ ಅಗತ್ಯ ವಸ್ತುಗಳನ್ನು ಖರೀದಿಸುವ ಜನರಲ್ಲಿ ಸಾಮಾಜಿಕ ಅಂತರವೇ ಕಾಣುತ್ತಿಲ್ಲ. ಮೊದಲ ಅವ ಧಿಯಲ್ಲಿದ್ದಂತೆ ಮಳಿಗೆಗಳ ಮುಂದೆ ಗ್ರಾಹಕರು ನಿಲ್ಲಲು ಬಣ್ಣದಿಂದ ವೃತ್ತಗಳನ್ನು ಸಹ ಬರೆದಿಲ್ಲ. ಹಾಗಾಗಿ ಮಳಿಗೆಗಳ ಮುಂದೆ ಜನರು ಗುಂಪುಗುಂಪಾಗಿ ನಿಲ್ಲುತ್ತಿದ್ದು ಸಾಮಾಜಿಕ ಅಂತರವನ್ನು ಗಾಳಿಗೆ ತೂರಿದ್ದಾರೆ.
ಹಳ್ಳಿ ಜನರಿಗೆ ಸಮಸ್ಯೆ: ಕಠಿಣ ನಿರ್ಬಂಧ ಅವಧಿ ಯಲ್ಲಿ ಅಗತ್ಯ ವಸ್ತುಗಳ ಮಳಿಗೆಗಳು ತೆರೆಯಲು ಅವಧಿ ನಿಗದಿಪಡಿಸಿದ ಹಿನ್ನೆಲೆಯಲ್ಲಿ ನಗರದ ಜನರಿಗೆ ಅಷ್ಟಾಗಿ ತೊಂದರೆ ಎನಿಸದಿದ್ದರೂ ನಗರಕ್ಕೆ ಸುತ್ತಮುತ್ತಲಿರುವ ಗ್ರಾಮಗಳ ಜನರಿಗೆ ತೊಂದರೆಯಾಗಲಿದೆ. ಸುತ್ತಮುತ್ತಲಿನ ಗ್ರಾಮಗಳ ಜನರು ವಾರಕ್ಕೆ ಅಥವಾ ಹದಿನೈದು ದಿನಕ್ಕೋ ಅಥವಾ ತಿಂಗಳಿಗೊಮ್ಮೆ ರಜಾ ದಿನವಾದ ಭಾನುವಾರ ನಗರಕ್ಕೆ ಆಗಮಿಸಿ ಒಂದಷ್ಟು ದಿನಕ್ಕೆ ಆಗುವಷ್ಟು ಅಗತ್ಯ ವಸ್ತುಗಳನ್ನು ಖರೀದಿಸುವುದು ವಾಡಿಕೆ.
ಹಾಗಾಗಿ ಸೋಮವಾರದಿಂದ ಕಠಿಣ ನಿರ್ಬಂಧ ಆರಂಭವಾಗುವುದರಿಂದ ಬೆಳ್ಳಂಬೆಳಗ್ಗೆ ನಗರಕ್ಕೆ ಬರಲು ಆಗದ ಹಿನ್ನೆಲೆಯಲ್ಲಿ ಮುನ್ನಾದಿನವಾದ ಭಾನುವಾರ ನಗರಕ್ಕೆ ಆಗಮಿಸಿ ಅಗತ್ಯ ವಸ್ತುಗಳನ್ನು ಖರೀದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ನಗರದ ವಾಣಿಜ್ಯ ಮಳಿಗೆಗಳುಳ್ಳ ಬೆಂಗಳೂರು ರಸ್ತೆ, ಕಾರ್ ಬೀದಿ, ಬ್ರೂಸ್‌ಪೇಟೆ ವೃತ್ತ, ಗ್ರಾಹಂ ರಸ್ತೆ ಸೇರಿ ಇನ್ನಿತರೆ ರಸ್ತೆಗಳು ಜನಜಂಗುಳಿ, ವಾಹನ ದಟ್ಟಣೆಯಿಂದ ಕಂಡುಬಂತು.
ಅಂಗಡಿಗಳಿಗೆ ಫೋನ್ ನಂಬರ್: ಮೇ 10ರಿಂದ 14 ದಿನಗಳ ಕಾಲ ಕಠಿಣ ನಿರ್ಬಂಧ ಇರುವುದರಿಂದ ಬಟ್ಟೆ, ಗಾರ್ಮೆಂಟ್ಸ್, ಫುಟ್‌ವೇರ್ ಅಂಗಡಿಗಳು ಸಂಪೂರ್ಣ ಬಂದ್ ಆಗಲಿವೆ. ಆದರೆ, ಇದೇ ಮೇ 13ರಂದು ರಂಜಾನ್ ಹಬ್ಬ ಇರುವುದರಿಂದ ಬಟ್ಟೆ, ಗಾರ್ಮೆಂಟ್ಸ್, ಫುಟ್‌ವೇರ್ ಸೇರಿ ಇನ್ನಿತರೆ ಅಲಂಕಾರಿಕ ಮಳಿಗೆಗಳಿಗೆ ಹೆಚ್ಚು ವ್ಯಾಪಾರವಾಗಲಿದೆ. ರಂಜಾನ್ ಹಬ್ಬ ಮುಸಲ್ಮಾನರ ಪವಿತ್ರ ಹಾಗೂ ದೊಡ್ಡ ಹಬ್ಬವಾಗಿರುವುದರಿಂದ ತಲೆಯಲ್ಲಿ ಟೋಪಿಯಿಂದ ಹಿಡಿದು ಕಾಲಲ್ಲಿ ಚಪ್ಪಲಿಗಳವರೆಗೆ ಎಲ್ಲವನ್ನೂ ಹೊಸದನ್ನೇ ಖರೀದಿಸುತ್ತಾರೆ.
ಇದು ಬಟ್ಟೆ, ಗಾರ್ಮೆಂಟ್ಸ್, ಫುಟ್‌ವೇರ್ ಮಳಿಗೆಗಳಿಗೆ ಉತ್ತಮ ವ್ಯಾಪಾರ ವಹಿವಾಟು ಆಗುವುದರ ಜತೆಗೆ ಅಷ್ಟೇ ಲಾಭವನ್ನು ಸಹ ತಂದುಕೊಡಲಿದೆ. ಆದರೆ ರಂಜಾನ್ ಹಬ್ಬವನ್ನೇ ನೆಚ್ಚಿಕೊಂಡಿರುವ ಮಳಿಗೆಗಳ ಮಾಲೀಕರಿಗೆ ಕಠಿಣ ನಿರ್ಬಂಧದಿಂದ ನಷ್ಟ ಎದುರಿಸುವಂತಾಗಿದೆ. ಹೀಗಾಗಿ ಮಳಿಗೆಗಳ ಮುಂದೆ ಮಾಲೀಕರು ತಮ್ಮ ತಮ್ಮ ಮೊಬೈಲ್ ನಂಬರ್‌ಗಳನ್ನು ಬರೆದು ಸಂಪರ್ಕಿಸುವಂತೆ ಕೋರಿದ್ದಾರೆ.