ಹೊಸಪೇಟೆ: ಜಿಂದಾಲ್ ಕಂಪನಿಗೆ ಪರಭಾರೆ ಮಾಡಿರುವ 3667 ಎಕರೆ ಭೂಮಿಯನ್ನು ಸರ್ಕಾರ ಮರಳಿ ಪಡೆಯಬೇಕು ಎಂದು ಆಗ್ರಹಿಸಿ, ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿ ಕಾರಿಗಳು ಮಂಗಳವಾರ ತಹಶೀಲ್ದಾರ್ ದ್ವಾರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ನೂರಾರು ವರ್ಷಗಳಿಂದ ಸಾವಿರಾರು ಎಕರೆಗಳಲ್ಲಿ ಅರಣ್ಯ ಭೂಮಿ ಮತ್ತು ಸರ್ಕಾರಿ ಜಮೀನುಗಳಲ್ಲಿ ಅನೇಕ ವರ್ಷಗಳಿಂದ ಸಾಗುವಳಿ ಮಾಡುವ ಮೂಲಕ ದೇಶಕ್ಕೆ ಅನ್ನ ನೀಡುವ ಬಡ ರೈತರ ಕುಟುಂಬಗಳಿಗೆ ಪಟ್ಟ ಪಹಣಿ ನೀಡದೇ ವಿಳಂಬ ನೀತಿ ಅನುಸರಿಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಏಕಾಏಕಿ ಜಿಂದಾಲ್ ಕಂಪನಿಗೆ ಸಾವಿರಾರು ಎಕರೆ ಭೂಮಿ ಪರಪಾರೆ ಮಾಡಿರುವುದು ಸರಿಯಾದ ಕ್ರಮವಲ್ಲ. ಭೂಮಿ ಪರಪಾರೆ ಕಾರಣರಾದ ಸಚಿವರೆಲ್ಲರೂ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಸಮ್ಮಿಶ್ರ ಸರಕಾರ ಆಡಳಿತ ಸಂದರ್ಭದಲ್ಲಿ ಈಗಿನ ಬಿಜೆಪಿ ಪಕ್ಷ ವಿರೋಧ ಪಕ್ಷವಾಗಿ ಪರಭಾರೆ ವಿರುದ್ಧ ಹೋರಾಟ ಮಾಡಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಅವರು ಅಂದಿನ ಸರ್ಕಾರದಲ್ಲಿ ಶಾಸಕರ ಸ್ಥಾನಕ್ಕೆ ರಾಜಿನಾಮೆ ನೀಡಿ ವಿರೋಧ ವ್ಯಕ್ತಪಡಿಸಿದ್ದರು. ಇಂದು ಅವರೇ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರೂ ಕೋವಿಡ್ ನೆಪದಲ್ಲಿ ನುಣುಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಸರ್ಕಾರ ಕೂಡಲೇ ಪರಭಾರೆ ಮಾಡಿರುವ ಭೂಮಿಯನ್ನು ಸರ್ಕಾರ ವಾಪಸ್ಸು ಪಡೆಯುವ ಮೂಲಕ ಜಿಲ್ಲೆಯ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಬೇಡಿಕೆಗಳು: ಜಿಲ್ಲಾ ಉಸ್ತುವಾರಿ ಸಚಿವರು ಈ ಕೂಡಲೇ ಜಿಲ್ಲಾಡಳಿತದ ಜಿಲ್ಲಾ ಧಿಕಾರಿಗೆ ಆದೇಶ ಮಾಡದಂತೆ ಕ್ರಮವಹಿಸಬೇಕು. ಅರಣ್ಯ ಮತ್ತು ಸರಕಾರಿ ಜಮೀನುಗಳಲ್ಲಿ ನೂರಾರು ವರ್ಷಗಳಿಂದ ಸಾಗುವಳಿ ಮಾಡುವ ಸಾವಿರಾರು ಎಕರೆ ರೈತರ ಜಮೀನುಗಳಿಗೆ ಪಟ್ಟಾ ವಿತರಿಸಬೇಕು. ಮುಂಗಾರು ಬಿತ್ತನೆ ಆರಂಭ ಮುನ್ಸೂಚನೆ ಇರುವುದರಿಂದ ಕೃಷಿ ಇಲಾಖೆಯಲ್ಲಿ ಬೀಜ, ರಸಗೊಬ್ಬರ ಸಿ.ಟಿ. ಕಾಂಪ್ಲೆಕ್ಸ್ ಇತ್ಯಾದಿಗಳು ಕಡಿಮೆಯಾಗದಂತೆ ದಾಸ್ತಾನು ಮಾಡಿ ಕೋವಿಡ್ ಇರುವುದರಿಂದ ತಾಲೂಕಿನ ರೈತರಿಗೆ ಉಚಿತವಾಗಿ ನೀಡಬೇಕು.
ಸ್ಥಳೀಯ ಐಎಸ್‌ಆರ್ ಸಕ್ಕರೆ ಕಾರ್ಖಾನೆ ಸರಕಾರದ ಸ್ವಾ ಧೀನದಲ್ಲಿ ಆರಂಭಿಸಲು ಮುಂದಾಗಬೇಕು. ಇತ್ತೀಚಿಗೆ ಆಕಾಲಿಕ ಮಳೆಯಿಂದಾಗಿ ಹಾನಿಗೊಳಗಾದ ಬೆಳೆಗಳಿಗೆ ಸೂಕ್ತ ಪರಿಹಾರ ಮತ್ತು ಆತ್ಮಹತ್ಯೆ ಮಾಡಕೊಂಡ ರೈತ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಆರ್.ಎಸ್. ಬಸವರಾಜ, ಎನ್.ಯಲ್ಲಾಲಿಂಗ ಮತ್ತಿತರರಿದ್ದರು.