ಸಂಡೂರು: ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಿದಾಗ ಮಾತ್ರ ಕೊರೊನಾ ತಡೆಯಲು ಸಾಧ್ಯ. ಆದ್ದರಿಂದ ಎಲ್ಲ ಅಧಿ ಕಾರಿಗಳು ಕಡ್ಡಾಯವಾಗಿ ಕಾರ್ಯಪ್ರವೃತ್ತರಾಗಿ ತಮಗೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಶಾಸಕ ಈ. ತುಕಾರಾಂ ತಿಳಿಸಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕುಮಟ್ಟದ ಎಲ್ಲ ಅಧಿ ಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿ, ತಾಲೂಕಿನಾದ್ಯಂತ 2000ಕ್ಕಿಂತಲೂ ಹೆಚ್ಚು ಕೊರೊನಾ ಕೇಸುಗಳು ಬಂದಿದ್ದು ಅದರಲ್ಲಿ ಜಿಂದಾಲ್ ಕಂಪನಿ ಸಂಪರ್ಕಿತರ ಪ್ರಮಾಣವೇ ಅತಿ ಹೆಚ್ಚಾಗಿದೆ. ಆದ್ದರಿಂದ ತಹಶೀಲ್ದಾರ್ ಮತ್ತು ವೈದ್ಯರ ತಂಡ ತೋರಣಗಲ್ಲು ಭಾಗದಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸುವ ಮೂಲಕ ಕೊರೊನಾ ತಡೆಯುವ ಕಾರ್ಯ ಮಾಡಬೇಕು. ಸಾರ್ವಜನಿಕರಿಗೆ ಅಮ್ಲಜನಕದ ಕೊರತೆ, ಬೆಡ್ ಗಳ ಕೊರತೆ, ಔಷ ಧಿ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು.
ಅಧಿ ಕಾರಿಗಳಿಗೆ ಸೋಂಕು ಕಾಣಿಸಿಕೊಂಡಲ್ಲಿ ತಕ್ಷಣ ಅವರಿಗಾಗಿಯೇ ಜಿಂದಾಲ್ ಓಪಿಜೆಯಲ್ಲಿ 30ಕ್ಕೂ ಹೆಚ್ಚು ಬೆಡ್‌ಗಳನ್ನು ರಿಸರ್ವ್ ಇಡಬೇಕು ಎಂದು ಸೂಚಿಸಿದರು. ಡಿವೈಎಸ್‌ಪಿ ಹರೀಶ್‌ರಡ್ಡಿ ಮಾತನಾಡಿ, 10 ಗಂಟೆಗೆ ಅಂಗಡಿಗಳನ್ನು ಮುಚ್ಚಲು ವ್ಯವಸ್ಥೆ ಮಾಡಬೇಕು. ತರಕಾರಿ, ಹಣ್ಣು ವ್ಯಾಪಾರಿಗಳನ್ನು ವಾರ್ಡ್‌ವಾರು ಹಂಚಿಕೆ ಮಾಡಿ ಅವರು ತಿರುಗಾಡದಂತೆ ಮಾಡಿದಾಗಲೂ ಸಹ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ. ಅದಿರು ಲಾರಿಗಳ ಸಾಗಾಟದ ಸಂದರ್ಭದಲ್ಲಿ ಲಾರಿಯಲ್ಲಿ ಬರೀ ಚಾಲಕ ಇರುವ ಬಗ್ಗೆ ಚರ್ಚಿಸಲಾಗುವುದು. ಜಿಂದಾಲ್ ಪ್ರದೇಶದಲ್ಲಿ ಅತಿ ಹೆಚ್ಚು ಕಾರ್ಮಿಕರು ಓಡಾಟ ನಡೆಸುತ್ತಿದ್ದು ತಹಶೀಲ್ದಾರ್ ಮತ್ತು ಇತರ ಅಧಿ ಕಾರಿಗಳಿಗೆ ಈ ಬಗ್ಗೆ ಕ್ರಮವಹಿಸುವ ಬಗ್ಗೆ ತಿಳಿಸಿದರು.
ಸಿಪಿಐ ಉಮೇಶ್ ಮಾಹಿತಿ ನೀಡಿ, ಕೊರೊನಾ ನಿಯಮ ಮೀರಿದವರ ವಿರುದ್ಧ 1400 ಕೇಸುಗಳನ್ನು ದಾಖಲಿಸಿ, ಒಟ್ಟು 45 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ, ಐಪಿಸಿ ಸೆಕ್ಷನ್ ಅಡಿಯಲ್ಲಿ ತೋರಣಗಲ್ಲು, ಸಂಡೂರಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು. ಡಾ| ರಾಮಶೆಟ್ಟಿ ಮಾತನಾಡಿ, ಆಕ್ಸಿಜನ್ ಕೊರತೆ ಇಲ್ಲ, ಆದರೂ ಇನ್ನೂ 15 ಸಿಲಿಂಡರ್ ವ್ಯವಸ್ಥೆ ಮಾಡಬೇಕು. ಕೋವಿಡ್ ಆಸ್ಪತ್ರೆಗೆ ಹೆಚ್ಚಿನ ವೈದ್ಯರ ಬೇಡಿಕೆ ಇದೆ. ನಿತ್ಯ ಬರುವ ಹೆರಿಗೆ, ಸಾಮಾನ್ಯ ನೆಗಡಿ ಕೆಮ್ಮು ರೋಗಿಗಳಿಗೂ ಚಿಕಿತ್ಸೆ ನೀಡಬೇಕು. ನಿತ್ಯ 200ರಿಂದ 250ರೋಗಿಗಳು ಬರುತ್ತಾರೆ. ಅದರ ಜೊತೆಯಲ್ಲಿ ಕೊರೊನಾ ರೋಗಿಗಳಿಗು ಚಿಕಿತ್ಸೆ ನೀಡಬೇಕಾಗುತ್ತದೆ. ಆದ್ದರಿಂದ ಅಮೃತವಾಹಿನಿ ವೈದ್ಯರನ್ನು ಬಳಸಿಕೊಳ್ಳಲಾಗುವುದು. ರೆಮ್ ಡಿಸಿವಿಯರ್ ಚುಚ್ಚುಮದ್ದು ಕೊರತೆ ನಮ್ಮಲ್ಲಿ ಇಲ್ಲ. ಈಗಾಗಲೇ 9 ರೋಗಿಗಳಿಗೆ ನೀಡಲಾಗಿದೆ. ಸಂಗ್ರಹವೂ ಇದೆ. ಆಸ್ಪತ್ರೆಗೆ ಬೇಕಾದ ಪಿಪಿ ಕಿಟ್, ಮಾಸ್ಕ್ ಇತರ ಅಂಶಗಳ ಬಗ್ಗೆ ಬೇಡಿಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಕಡ್ಡಾಯವಾಗಿ ತಾಲೂಕಿನಾದ್ಯಂತ ಮುನ್ನೇಚ್ಚರಿಕೆಯಾಗಿ ಫಾಗಿಂಗ್ ಮಾಡಲಾಗುತ್ತಿದೆ. ಹೋಂ ಕ್ವಾರಂಟೈನ್ ಆದವರಿಗೆ ಆಹಾರ ಸಾಮಾಗ್ರಿಗಳ ಕಿಟ್ ನೀಡುವುದು, ಸಾರ್ವಜನಿಕವಾಗಿ ಜಾಗೃತಿ ಮೂಡಿಸುವುದು, ಲಸಿಕೆ ಹಾಕಿಸಿಕೊಳ್ಳುವ ಬಗ್ಗೆಯೂ ಜಾಗೃತಿ ಮೂಡಿಸಿ ಎಂದು ಶಾಸಕರು ತಿಳಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿ ಕಾರಿ ಪರಿಣಿಕ ಪವನರಾಮ, ತಹಶೀಲ್ದಾರ್ ರಶ್ಮಿ, ಡಿವೈಎಸ್‌ಪಿ ಹರೀಶ್ ರಡ್ಡಿ, ಸಿಪಿಐ ಉಮೇಶ್, ಪುರಸಭೆ ಅಧ್ಯಕ್ಷೆ ಅನಿತಾ ವಸಂತಕುಮಾರ್, ಉಪಾಧ್ಯಕ್ಷ ಈರೇಶ್ ಸಿಂದೇ ಉಪಸ್ಥಿತರಿದ್ದರು.