Advertisement

ಆಕ್ಸಿಜನ್‌ ಬೆಡ್‌ಗಳ ಕೊರತೆ ಇಲ್ಲ : ಮಾಲಪಾಟಿ

10:46 PM May 03, 2021 | Team Udayavani |

ಬಳ್ಳಾರಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಿಗೆ ಆಕ್ಸಿಜನ್‌ ಬೆಡ್‌ಗಳ ಕೊರತೆ ಇಲ್ಲ. ಜನರು ಈ ಬಗ್ಗೆ ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು ಎಂದು ಜಿಲ್ಲಾ ಧಿಕಾರಿ ಪವನಕುಮಾರ್‌ ಮಾಲಪಾಟಿ ಸ್ಪಷ್ಟಪಡಿಸಿದರು. ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸದ್ಯ 1228 ಆಕ್ಸಿಜನ್‌ ಬೆಡ್‌ಗಳಿವೆ. ಅವುಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲು ಜಿಲ್ಲಾಡಳಿತ ಸಕಲ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಿದೆ. ಜಿಂದಾಲ್‌ ಎದುರುಗಡೆಯ ವಿಶಾಲ ಮೈದಾನದಲ್ಲಿ 1 ಸಾವಿರ ಆಕ್ಸಿಜನ್‌ ಬೆಡ್‌ಗಳ ತಾತ್ಕಾಲಿಕ ಆಸ್ಪತ್ರೆ ನಿರ್ಮಿಸಲಾಗುತ್ತಿದ್ದು, ಮೇ 9ರ ವೇಳೆಗೆ ಈ ಆವರಣದಲ್ಲಿ 220 ಬೆಡ್‌ಗಳು ಲಭ್ಯವಾಗಲಿವೆ.

Advertisement

ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿಯೂ ತಲಾ 50 ಆಕ್ಸಿಜನ್‌ ಬೆಡ್‌ಗಳಿವೆ. ನಮ್ಮಲ್ಲಿ ಸದ್ಯಕ್ಕೆ ಲಭ್ಯವಿರುವ ಆಕ್ಸಿಜನ್‌ ಬೆಡ್‌ಗಳಿಗೆ ಪ್ರತಿನಿತ್ಯ 27 ಟನ್‌ ಆಕ್ಸಿಜನ್‌ ಬೇಕಾಗುತ್ತಿದ್ದು, ಸಮರ್ಪಕ ಪ್ರಮಾಣದಲ್ಲಿದೆ. ಯಾವುದೇ ರೀತಿಯ ಆಕ್ಸಿಜನ್‌ ಕೊರತೆ ಜಿಲ್ಲೆಯಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದ ಡಿಸಿ ಮಾಲಪಾಟಿ ಅವರು, ಜನರು ಆಕ್ಸಿಜನ್‌ ಬೆಡ್‌ಗಳು ಮತ್ತು ಆಕ್ಸಿಜನ್‌ ಕೊರತೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡಬಾರದು. ಜತೆಗೆ ಜನರು ರೋಗಲಕ್ಷಣ ನಿರ್ಲಕ್ಷಿಸದೆ ಕಡ್ಡಾಯವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು ಮತ್ತು ಅಗತ್ಯ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಸದ್ಯ ಬಳ್ಳಾರಿಯ ಟ್ರೋಮಾ ಕೇರ್‌ ಸೆಂಟರ್‌, ಜಿಂದಾಲ್‌ ಸಂಜೀವಿನಿ ಮತ್ತು ಬಳ್ಳಾರಿ ಜಿಲ್ಲಾ ಆಸ್ಪತ್ರೆಗಳಲ್ಲಿ 108 ಐಸಿಯು ಬೆಡ್‌ಗಳ ವ್ಯವಸ್ಥೆ ಇದೆ. 70 ವೆಂಟಿಲೇಟರ್‌ಗಳಿದ್ದು, ಇನ್ನೂ 50 ವೆಂಟಿಲೇಟರ್‌ ಗಳು ವಾರದೊಳಗೆ ಜಿಲ್ಲಾಡಳಿತಕ್ಕೆ ಸರ್ಕಾರದಿಂದ ಬರಲಿವೆ ಎಂದರು. ಸದ್ಯ ಜಿಲ್ಲೆಯಲ್ಲಿ 9531 ಸಕ್ರಿಯ ಪ್ರಕರಣಗಳಿದ್ದು, 829 ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 5 ಸಾವಿರಕ್ಕೂ ಹೆಚ್ಚು ಜನರು ಹೋಮ್‌ ಐಸೊಲೇಷನ್‌ ನಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದು, ನಮ್ಮ ಆರ್‌ ಆರ್‌ಟಿ ತಂಡಗಳು ಸದಾ ಅವರ ಆರೋಗ್ಯದ ಮೇಲೆ ನಿಗಾವಹಿಸಿವೆ ಎಂದರು. ಕಳೆದ ಏಪ್ರಿಲ್‌ ಎರಡನೇ ವಾರದಿಂದ ಸೋಂಕು ಹರಡುವುದು ಹೆಚ್ಚಾಗಿದೆ.

ಸೊಂಕಿನ ಬಗ್ಗೆ ನಿರ್ಲಕ್ಷé ಮತ್ತು ಸೋಂಕಿನಿಂದ ಬಳಲಿ ತಡವಾಗಿ ಚಿಕಿತ್ಸೆಗೆ ಬರುತ್ತಿರುವುದರಿಂದ ಮರಣಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು. ಜಿಲ್ಲೆಯಲ್ಲಿ ಆಕ್ಸಿಜನ್‌ ಬೆಡ್‌ ಸೇರಿದಂತೆ ಎಲ್ಲ ರೀತಿಯ ಬೆಡ್‌ಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಜನರು ಯಾವುದೇ ರೀತಿಯಲಿ ಹೆದರುವುದು ಬೇಡ ಎಂದು ಡಿಸಿ ಮಾಲಪಾಟಿ ಹೇಳಿದರು.

ಸಾಮರ್ಥ್ಯ ಹೆಚ್ಚಳಕ್ಕೆ ಕ್ರಮ: ರೋಗಲಕ್ಷಣವಿರುವವರ ತಪಾಸಣೆ ಮಾಡಲಾದ ಸ್ವಾ ಬ್‌ಗಳನ್ನು ಪರೀಕ್ಷಿಸಲು ಸದ್ಯ ವಿಮ್ಸ್‌ನಲ್ಲಿ ವೈಯಕ್ತಿಕ 1600 ಮತ್ತು ಪೂಲಿಂಗ್‌ ಮಾಡಿದ್ರೆ 2 ಸಾವಿರದವರೆಗೆ ಪರೀಕ್ಷಿಸಬಹುದಾಗಿದೆ. ಬಳ್ಳಾರಿ, ಸಂಡೂರು ಮತ್ತು ಹೊಸಪೇಟೆಯಲ್ಲಿ ಹೆಚ್ಚಿನ ಕೊರೊನಾ ಪ್ರಕರಣಗಳು ವರದಿಯಾಗುತ್ತಿರುವುದರಿಂದ ಇಲ್ಲಿಯ ಸ್ವಾಬ್‌ ಗಳನ್ನು ಪೂಲಿಂಗ್‌ ಮಾಡದೇ ವೈಯಕ್ತಿಕವಾಗಿಯೇ ಪರೀಕ್ಷಿಸಬೇಕಾಗಿದೆ. ಉಳಿದವುಗಳನ್ನು ಬೇರೆಡೆ ಲ್ಯಾಬ್‌ಗ ಕಳುಹಿಸಿಕೊಡಲಾಗುತ್ತಿರುವುದು ಸ್ವಲ್ಪ ಫಲಿತಾಂಶ ಬರುವುದು ತಡವಾಗುತ್ತಿದೆ ಎಂದು ಡಿಸಿ ತಿಳಿಸಿದರು. ಅಜೀಂ ಫ್ರೇಮಜೀ ಫೌಂಡೇಶನ್‌ನವರು ಉಚಿತವಾಗಿ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಅಳವಡಿಸುವುದಕ್ಕಾಗಿ ಕೊರೊನಾ ಸಂಬಂ ಧಿತ ಆರ್‌ಟಿಪಿಸಿಆರ್‌ ಮಷಿನ್‌ ನೀಡಿದ್ದು, ಟೆಕ್ನಿಶಿಯನ್‌ ರಿಗೆ ತರಬೇತಿ ನೀಡಲಾಗುತ್ತಿದೆ. ಇನ್ನೂ ಮೂರು ದಿನಗಳಲ್ಲಿ ಈ ಪ್ರಯೋಗ ಕಾರ್ಯಾರಂಭ ಮಾಡಲಿದೆ.

Advertisement

ಇದರ ಜತೆಗೆ ಜಿಲ್ಲಾಡಳಿತ ಎರಡು ಆರ್‌ಟಿಪಿಸಿಆರ್‌ ಮಷಿನ್‌ಗಳ ಖರೀದಿಗೆ ನಿರ್ಧರಿಸಿದ್ದು, ಅವುಗಳು ಒಂದು ವಾರದೊಳಗೆ ಬಳ್ಳಾರಿಗೆ ಬರಲಿದ್ದು, ಅವುಗಳು ಕಾರ್ಯಾರಂಭ ಮಾಡಿದರೇ 3500 ರವರೆಗೆ ಸ್ವಾಬ್‌ಗಳನ್ನು ಪರೀಕ್ಷಿಸಿ ತಕ್ಷಣ ವರದಿ ಪಡೆಯಲು ಮತ್ತು ಚಿಕಿತ್ಸೆ ನೀಡಲು ಅನುಕೂಲಕರವಾಗಲಿದೆ ಎಂದರು. ಹೆಚ್ಚಿನ ದರ ವಿಧಿಸಿದರೆ ಕ್ರಮ: ಜಿಲ್ಲೆಯಲ್ಲಿ ನಗರದ ಶಾವಿ, ಅನುಷ್ಕಾ, ವಾಯ್ಸ, ಆರುಣೋದಯ, ನವೋದಯ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿರುವ ಡಿಸಿ ಮಾಲಪಾಟಿ ಅವರು, ಈ ಆಸ್ಪತ್ರೆಗಳಲ್ಲಿ ಹೆಚ್ಚಿನ ದರ ವಿ ಧಿಸುತ್ತಿರುವ ಬಗ್ಗೆ ದೂರುಗಳು ಬಂದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಹೆಚ್ಚಿನ ಸೋಂಕಿತರು ಕಂಡು ಬರುತ್ತಿರುವ ಬಳ್ಳಾರಿ, ಸಂಡೂರು ಮತ್ತು ಹೊಸಪೇಟೆ ತಾಲೂಕುಗಳಲ್ಲಿ ಜಿಲ್ಲಾಡಳಿತವು ಮನೆ-ಮನೆ ಸಮೀಕ್ಷೆ ನಡೆಸಿ ಜನರ ಆರೋಗ್ಯ ತಪಾಸಣೆಗೆ ಮುಂದಾಗಿದೆ. ಸೋಂಕಿನ ಲಕ್ಷಣಗಳು ಕಂಡು ಬಂದವರನ್ನು ತಪಾಸಣೆ ನಡೆಸಿ ಅವರಿಗೆ ಅಗತ್ಯ ಚಿಕಿತ್ಸೆಗೆ ಕ್ರಮ ವಹಿಸಲಾಗುತ್ತಿದೆ ಎಂದರು.

ಎಸ್‌ಪಿ ಸೈದುಲು ಅಡಾವತ್‌, ಎಡಿಸಿ ಪಿ.ಎಸ್‌.ಮಂಜುನಾಥ, ಡಿಎಚ್‌ಒ ಡಾ.ಜನಾರ್ದನ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next