ಆರ್.ಬಸವರೆಡ್ಡಿ ಕರೂರು
ಸಿರುಗುಪ್ಪ: ಮದುವೆ, ಜಾತ್ರೆ ಸೇರಿದಂತೆ ವಿವಿಧ ಸಮಾರಂಭಗಳ ಅಂದ ಹೆಚ್ಚಿಸುತ್ತಿದ್ದ ಶಾಮಿಯಾನ ಉದ್ಯಮ ಕೊರೊನಾ 2ನೇ ಅಲೆಗೆ ತತ್ತರಿಸಿಹೋಗಿದ್ದು, ತಾಲೂಕಿನಲ್ಲಿ ಸುಮಾರು 500ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಶಾಮಿಯಾನ ಉದ್ಯಮದಲ್ಲಿ ಕೆಲಸ ಮಾಡುವ ಕಾರ್ಮಿಕರಿದ್ದಾರೆ. ತಾಲೂಕಿನಲ್ಲಿ 200ಕ್ಕೂ ಹೆಚ್ಚು ಶಾಮಿಯಾನ ಅಂಗಡಿಗಳಿದ್ದು, ಅದರಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಬದುಕು ಈಗ ಅತಂತ್ರವಾಗಿದ್ದು ಕೊರೊನಾ 2ನೇ ಅಲೆ ತೀವ್ರ ಹೊಡೆತ ನೀಡಿದೆ. ಪ್ರತಿವರ್ಷ ಜನವರಿ ನಂತರ ಸಾಲು ಸಾಲು ಮದುವೆ, ಜಾತ್ರೆಗಳು ನಡೆಯುತ್ತವೆ. ಇದರಿಂದ ಸಮಾರಂಭಗಳಿಗೆ ಶಾಮೀಯಾನ, ಕುರ್ಚಿ, ಲೈಟ್, ವೇದಿಕೆ ಸಿದ್ಧತೆ ಮಾಡುವ ಶಾಮಿಯಾನ ಮಾಲೀಕರಿಗೆ ಒಂದು ರೀತಿಯ ಸುಗ್ಗಿಕಾಲವೇ ಆಗಿರುತ್ತದೆ. ಆದರೆ ಕೊರೊನಾ 2ನೇ ಅಲೆ ಹೆಚ್ಚಾಗುತ್ತಿರುವುದರಿಂದ ಶಾಮಿಯಾನ ಮಾಲೀಕರು ಮತ್ತು ಅದನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಕಾರ್ಮಿಕರ ಬದುಕಿಗೆ ಕೊಳ್ಳಿ ಇಟ್ಟಂತಾಗಿದೆ. ಕಳೆದ ಜನವರಿಯಿಂದ ಮಾರ್ಚ್‌ವರೆಗೆ ಒಂದಷ್ಟು ಕೆಲಸ ದೊರೆತಿದ್ದು, ಇನ್ನೇನು ಆರ್ಥಿಕ ಸಂಕಷ್ಟ ಮುಗಿಯುತ್ತದೆ ಎನ್ನುವ ಸಂದರ್ಭದಲ್ಲಿಯೇ ಸಭೆ, ಸಮಾರಂಭ, ಜಾತ್ರೆ, ಮದುವೆಗಳಿಗೆ ಸರ್ಕಾರ ಕಠಿಣ ನಿಬಂಧನೆಗಳನ್ನು ಹೇರಿದ್ದರಿಂದ ಮತ್ತೆ ಶಾಮಿಯಾನ ಮಾಲೀಕರು ಮತ್ತು ಕಾರ್ಮಿಕರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ತಾಲೂಕಿನಲ್ಲಿ 200ಕ್ಕೂ ಹೆಚ್ಚು ಶಾಮಿಯಾನ ಅಂಗಡಿಗಳಿದ್ದು, ಏಪ್ರಿಲ್, ಮೇ, ಜೂನ್, ಜುಲೈ ಮತ್ತು ಅಕ್ಟೋಬರ್‌ನಲ್ಲಿ ಹೆಚ್ಚಾಗಿ ಮದುವೆ ಸಮಾರಂಭಗಳು ನಡೆಯುತ್ತವೆ. ಅದಕ್ಕಾಗಿ ಜನವರಿ, ಫೆಬ್ರವರಿಯಲ್ಲಿ ಬಹುತೇಕ ಬುಕ್ಕಿಂಗ್ ಆಗಿರುತ್ತವೆ. ಆದರೆ ಕೊರೊನಾ 2ನೇ ಅಲೆ ನಿಯಂತ್ರಿಸುವ ಉದ್ದೇಶದಿಂದ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಅದ್ಧೂರಿ ಸಭೆ, ಸಮಾರಂಭಗಳು, ಮದುವೆಗಳ ಮೇಲೆ ನಿಯಂತ್ರಣ ಹೇರಿದ ಪರಿಣಾಮ ಮುಂಗಡ ಬುಕ್ಕಿಂಗ್‌ಗಳನ್ನು ರದ್ದುಮಾಡಿದ್ದಾರೆ.
ಕೊರೊನಾದಿಂದ ನಲುಗಿರುವ ಜನರು ಕೂಡ ಅದ್ಧೂರಿ ಮದುವೆಗೆ ಹಿಂದೇಟು ಹಾಕಿದ್ದು, ಬುಕ್ಕಿಂಗ್ ರದ್ದು ಮಾಡಿಸಿದ್ದಾರೆ. ಅಲ್ಲದೆ ಮುಂಗಡ ಹಣ ವಾಪಸಾತಿಗೆ ಬೇಡಿಕೆ ಇಟ್ಟಿದ್ದಾರೆ. ಆದರೆ ಮದುವೆ ಸಿದ್ಧತೆಗೆ ಬೇಕಾದ ವಸ್ತುಗಳನ್ನು ತಯಾರಿಸಲು ಹಣ ನೀಡಿದ್ದರಿಂದ ಬುಕ್ಕಿಂಗ್ ಮಾಡಿಸಿದವರಿಗೆ ಹಣ ವಾಪಸ್Õಕೊಡುವುದು ಕಿರಿಕಿರಿಯಾಗಿದೆ ಎಂದು ಶಾಮಿಯಾನ ಅಂಗಡಿಗಳ ಮಾಲೀಕರು ಅಭಿಪ್ರಾಯ ಪಟ್ಟಿದ್ದಾರೆ. ಶಾಮಿಯಾನದವರ ಕಾರ್ಯ 6 ತಿಂಗಳ ಮೊದಲೇ ಪ್ರಾರಂಭವಾಗುತ್ತವೆ. ಒಂದು ಶಾಮಿಯಾನ ಅಂಗಡಿಗೆ ಸುಮಾರು 50ಕ್ಕೂ ಹೆಚ್ಚು ಕಾರ್ಯಕ್ರಮಗಳು ಬುಕ್ ಆಗಿರುತ್ತವೆ. ಆದರೆ ಈ ಬಾರಿ ಎಲ್ಲ ಕಾರ್ಯಕ್ರಮಗಳು ರದ್ದಾದ ಕಾರಣ ಸುಮಾರು 20ರಿಂದ 30ಲಕ್ಷದಷ್ಟು ಆದಾಯ ನಷ್ಟವಾಗಿದೆ ಎಂದು ಶಾಮಿಯಾನದ ಮಾಲೀಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ಕೆಲವರು ಒಂದು ಅಂಗಡಿಯನ್ನು ಬಾಡಿಗೆ ನೀಡಿ ಅದನ್ನೇ ನಂಬಿಕೊಂಡು ಜೀವನ ಸಾಗಿಸುವ ಕುಟುಂಬಗಳಿಗೆ ಸರ್ಕಾರದ ಆದೇಶ ಮುಟ್ಟುತ್ತಿಲ್ಲ. ಇಂಥ ಬಾಡಿಗೆಯಲ್ಲಿರುವ ಶಾಮಿಯಾನ ಮಾಲೀಕರಿಗೆ ಬಾಡಿಗೆ ಕಟ್ಟುವ ಹಣ ಶಾಪವಾಗಿ ಕಾಡುತ್ತಿದೆ. ಒಂದು ರೂಪಾಯಿ ಸಂಪಾದನೆ ಇಲ್ಲದಿರುವ ಸಮಯದಲ್ಲಿ ಸಾವಿರಾರು ರೂ.ಬಾಡಿಗೆ ನೀಡುವುದು ಹೇಗೆ ಎಂದು ಮಾಲೀಕರು ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ. ಶಾಮಿಯಾನ ಹಾಕುವ ಕೆಲಸಗಾರರು ದಿನಪೂರ್ತಿ ಕಷ್ಟಪಟ್ಟು ದುಡಿಯುತ್ತಾರೆ.
ಅವರೆಲ್ಲರೂ ಇದನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಬೇರೆ ಕೆಲಸದ ಅನುಭವ ಇರುವುದಿಲ್ಲ. ಆದರೆ ಇವರಿಗೆ ಈಗ ಸಂಬಳ ನೀಡಲೇಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕೆಲಸಕ್ಕೆ ಬರುವುದಿಲ್ಲ, ಆದಾಯವಿಲ್ಲದೆ ಸಂಬಳ ನೀಡುವುದು ಕಷ್ಟವಾಗಿದೆ ಎಂದು ಶಾಮಿಯಾನ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ನಾಗರಾಜಸ್ವಾಮಿ ತಿಳಿಸಿದ್ದಾರೆ. ಕೊರೊನಾ 2ನೇ ಅಲೆಯಿಂದಾಗಿ ನಮಗೆ ಕೆಲಸವಿಲ್ಲದಂತಾಗಿದೆ. ಶಾಮಿಯಾನ ಹಾಕುವುದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. ಅದರಿಂದ ಬರುವ ಹಣದಲ್ಲಿಯೇ ಮನೆ ನಿರ್ವಹಣೆ, ಸಾಲ ತೀರಿಸುವುದನ್ನು ಮಾಡುತ್ತಿದ್ದೇವು. ಆದರೆ ಈಗ ಕೆಲಸವಿಲ್ಲದಿರುವುದರಿಂದ ಬದುಕು ನಡೆಸುವುದು ಕಷ್ಟವಾಗಿದೆ. ಇನ್ನೂ ನಮ್ಮ ಮಾಲೀಕರು ಒಂದಷ್ಟು ಸಹಾಯ ನೀಡುವ ನಿರೀಕ್ಷೆಯಲ್ಲಿದ್ದೇವೆಂದು ಶಾಮಿಯಾನ ಹಾಕುವ ಕಾರ್ಮಿಕರಾದ ಶೇವಲಿ, ಚನ್ನಕೇಶವ ತಿಳಿಸಿದ್ದಾರೆ.