ಬಳ್ಳಾರಿ: ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ವಿಧಿ ಸಿರುವ “ವೀಕೆಂಡ್ ಲಾಕ್‌ಡೌನ್’ ಬಳ್ಳಾರಿ ನಗರ ಸೇರಿ ಜಿಲ್ಲೆಯಾದ್ಯಂತ ಅಗತ್ಯ ವಸ್ತು, ಸೇವೆಗಳನ್ನು ಹೊರತುಪಡಿಸಿ ಬಹುತೇಕ ಶನಿವಾರ ಸಂಪೂರ್ಣ ಸ್ಥಗಿತವಾಗಿದ್ದು, ಮಳಿಗೆಗಳು ತೆರೆಯದೆ, ವಾಹನಗಳು ರಸ್ತೆಗಿಳಿಯದೆ ಪ್ರಮುಖ ವೃತ್ತ, ರಸ್ತೆಗಳು ಬಿಕೋ ಎನ್ನುತ್ತಿದ್ದವು. ಕೆಎಸ್ಸಾರ್ಟಿಸಿ ಸಾರಿಗೆ ಬಸ್‌ಗಳು, ಔಷಧ ಮಳಿಗೆಗಳು ಮತ್ತು ಬೆಳಗ್ಗೆ ನಿಗದಿತ ಅವಧಿವರೆಗೆ ಹಣ್ಣಿನ ಬಂಡಿ, ಮಳಿಗೆಗಳು, ತರಕಾರಿ ಮಾರುಕಟ್ಟೆ, ಪೆಟ್ರೋಲ್ ಬಂಕ್ ಗಳನ್ನು ಹೊರತುಪಡಿಸಿ, ಚಿತ್ರಮಂದಿರ, ಹೋಟೆಲ್, ಫುಟ್ ವೇರ್, ಬಟ್ಟೆ, ಕಿರಾಣಿ ಅಂಗಡಿ, ಗಾರ್ಮೆಂಟ್ಸ್ ಸೇರಿ ಎಲ್ಲ ರೀತಿಯ ವಾಣಿಜ್ಯ ಮಳಿಗೆಗಳು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿಕೊಳ್ಳುವ ಮೂಲಕ ಕೋವಿಡ್ ಸೋಂಕು ನಿಯಂತ್ರಣಕ್ಕೆ ಸಹಕಾರ ನೀಡಿದಂತಿದ್ದು, ಸದಾ ಜನಜಂಗುಳಿ, ವಾಹನದಟ್ಟಣೆಯಿಂದ ಕಂಗೊಳಿಸುತ್ತಿದ್ದ ನಗರದ ಬೆಂಗಳೂರು ರಸ್ತೆ, ಗಡಗಿ ಚನ್ನಪ್ಪ, ಬ್ರೂಸ್‌ಪೇಟೆ ವೃತ್ತ, ಅನಂತಪುರ ರಸ್ತೆ, ಎಸ್‌ಪಿ ವೃತ್ತ, ಮೋತಿ ವೃತ್ತಗಳು ಬಿಕೋ ಎನ್ನುತ್ತಿದ್ದವು.
ಬ್ಯಾರಿಕೇಡ್ ನಿರ್ಮಾಣ: ವೀಕೆಂಡ್ ಲಾಕ್‌ಡೌನ್ ನಿಮಿತ್ತ ಜಿಲ್ಲಾಡಳಿತ ಅಗತ್ಯ ಕ್ರಮಕೈಗೊಂಡಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ನಗರದ ಪ್ರಮುಖ ಗಡಗಿ ಚನ್ನಪ್ಪ ವೃತ್ತ, ಮೋತಿ ವೃತ್ತ, ಬ್ರೂಸ್‌ಪೇಟೆ ವೃತ್ತ, ಸಂಗಮ್ ವೃತ್ತ, ಎಸ್‌ಪಿ ವೃತ್ತ ಸೇರಿದಂತೆ ಬಹುತೇಕ ವೃತ್ತಗಳಲ್ಲಿ ಬೊಂಬುಗಳಿಂದ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿತ್ತು. ವಿನಾಕಾರಣ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಪೊಲೀಸರು ತಿಳಿಹೇಳಿ ಕಳುಹಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅನಾರೋಗ್ಯ ಸಮಸ್ಯೆ, ಔಷಧ ಮಳಿಗೆಗಳಿಗೆ ಬರುವವರನ್ನು ಹೊರತುಪಡಿಸಿದರೆ ಉಳಿದಂತೆ ಬಹುತೇಕ ಬಳ್ಳಾರಿ ನಗರ ಸ್ತಬ್ದವಾಗಿದ್ದು, ಮತ್ತೂಂದು ಲಾಕ್‌ಡೌನ್‌ನ್ನು ಸ್ಮರಿಸಿತು. ಆದರೂ ಸಹ ಅಲ್ಲೊಂದು ಇಲ್ಲೊಂದು ವಾಹನಗಳು ಕಂಡುಬಂದವು. ಆಟೋ ಸಂಚಾರವೂ ಬಹುತೇಕ ಸ್ಥಗಿತಗೊಂಡಿತ್ತು.
ಲಭ್ಯವಿದ್ದ ಅಗತ್ಯ ವಸ್ತುಗಳು: ವೀಕೆಡ್ ಲಾಕ್‌ಡೌನ್ ಏ. 23 ರಾತ್ರಿ 9 ಗಂಟೆಯಿಂದ ಏ.26 ಬೆಳಗ್ಗೆ 6 ಗಂಟೆಯವರೆಗೆ ಇರಲಿದೆ. ಆದರೂ, ಶನಿವಾರ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ದಿನಸಿ ವಸ್ತುಗಳುಳ್ಳ ಕಿರಾಣಿ ಅಂಗಡಿಗಳು, ಹಣ್ಣು, ತರಕಾರಿ ಮಾರುಕಟ್ಟೆ ತೆರೆಯಲು ಅವಕಾಶ ನೀಡಿದ್ದರಿಂದ ಜನರು ಖರೀದಿಗೆ ಮುಂದಾಗಿದ್ದರು. ನಗರದ ಎಪಿಎಂಸಿಯಲ್ಲಿನ ತರಕಾರಿ ಮಾರುಕಟ್ಟೆಯನ್ನು ವಿಂಗಡಿಸಿ ವಿವಿಧೆಡೆ ಅಳವಡಿಸಿ ದ್ದರೂ ಬಹುತೇಕ ಜನರು ಎಪಿಎಂಸಿಯಲ್ಲಿನ ತರಕಾರಿ ಮಾರುಕಟ್ಟೆಗೆ ತೆರಳಿ ಕೋವಿಡ್ ನಿಯಮವನ್ನು ಉಲ್ಲಂಘಿಸಿದ್ದು, ಕಂಡುಬಂತು. ಇದನ್ನು ನಿಯಂತ್ರಿಸಲು ಮುಂದಾದ ಪೊಲೀಸರು, ನಗರದ ಇನ್ನಿರೆಡೆಗಳಲ್ಲಿ ಅಳವಡಿಸಿರುವ ತರಕಾರಿ ಮಾರುಕಟ್ಟೆಗೆ ತೆರಳುವಂತೆ ಸೂಚಿಸುತ್ತಿದ್ದರು. ಆದರೆ, ತರಕಾರಿ ಖರೀದಿಸಲು ಬರುವ ಜನರನ್ನು ಕಳೆದುಕೊಳ್ಳಲು ಇಷ್ಟವಿಲ್ಲದ ವ್ಯಾಪಾರಿಗಳು ಇತರೆಡೆ ಸೂಕ್ತ ವ್ಯವಸ್ಥೆ ಮಾಡಿಲ್ಲ. ಇಂದು ತರಕಾರಿ ಮಾರಾಟಕ್ಕೆ ಅವಕಾಶಕೊಡಿ ಎಂದು ಪೊಲೀಸರೊಂದಿಗೆ ವಾಗ್ವಾದಕ್ಕಿಳಿಯುತ್ತಿದ್ದ ಕಂಡುಬಂತು.
ದಾಖಲೆ ತೋರಿಸಿ ಮುಂದಕ್ಕೆ: ವೀಕೆಂಡ್ ಲಾಕ್‌ಡೌನ್ ಇದ್ದರೂ ವಿನಾಕಾರಣ ತಿರುಗುತ್ತಿದ್ದವರನ್ನು ತಡೆದು ತಿಳಿಹೇಳುವುದರ ಜತೆಗೆ ಪ್ರಕರಣಗಳನ್ನು ದಾಖಲಿಸುತ್ತಿದ್ದ ಪೊಲೀಸರು, ಮದುವೆ ಸಮಾರಂಭ, ಕೋವಿಡ್ ಟೆಸ್ಟಿಂಗ್, ಲಸಿಕೆ ಹಾಕಿಸಿಕೊಳ್ಳಲು, ಕಾರ್ಖಾನೆಗಳಿಗೆ ತೆರಳುವವರನ್ನು ತಡೆದು ಪಾಸ್ ಅಥವಾ ದಾಖಲೆಗಳನ್ನು ಪರಿಶೀಲಿಸಿ ಕಳುಹಿಸಿಕೊಡುತ್ತಿದ್ದರು. ಅಭ್ಯರ್ಥಿಗಳೇ ಮನೆಮನೆಗೆ: ವೀಕೆಂಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣಾ ಪ್ರಚಾರಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದ್ದು, ಜನಪ್ರತಿನಿ ಗಳ ಅಬ್ಬರದ ಪ್ರಚಾರಕ್ಕೆ ಅಡ್ಡಿಯಾಗಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳೇ ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಮನೆಮನೆಗಳಿಗೆ ತೆರಳಿ ಮತಯಾಚನೆ ಮಾಡುತ್ತಿದ್ದು ಕಂಡುಬಂತು.