Advertisement

ಕೊರೊನಾ ತಡೆಗೆ ಕಠಿಣ ಕ್ರಮ

07:01 PM Apr 23, 2021 | Team Udayavani |

ಹರಪನಹಳ್ಳಿ: ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಹರಪನಹಳ್ಳಿ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ನೈಟ್‌ ಕರ್ಫ್ಯೂ ಕ್ರಮಕೈಗೊಳ್ಳಲು ತೀರ್ಮಾನಿಸಲಾಯಿತು. ಪಟ್ಟಣದ ಸರಕಾರಿ ಪಪೂ ಕಾಲೇಜಿನ ಆವರಣದಲ್ಲಿ ತಾಲೂಕು ಆಡಳಿತ ಮತ್ತು ಪೊಲೀಸ್‌ ಇಲಾಖೆ ಏರ್ಪಡಿಸಿದ್ದ ಜಾಗೃತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ತಹಶೀಲ್ದಾರ್‌ ಎಲ್‌.ಎಂ. ನಂದೀಶ್‌ ಮಾತನಾಡಿ, ಎಲ್ಲ ಧಾರ್ಮಿಕ ಕೇಂದ್ರಗಳು ಬಂದ್‌ ಆಗಲಿವೆ. ಕಲ್ಯಾಣ ಮಂಟಪಕ್ಕೆ ಇಲಾಖೆಯ ಅನುಮತಿ ಪಡೆಯಬೇಕು. 50 ಜನರಿಗೆ ಮಾತ್ರ ಸೀಮಿತವಿರಬೇಕು.

Advertisement

ಗುರುವಾರ ಹಾಗೂ ಭಾನುವಾರ ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಕಾನೂನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು. ಈ ಆದೇಶವನ್ನು ಸಾರ್ವಜನಿಕರು ಮುಂದಿನ ಆದೇಶದವರೆಗೆ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಕೋರಿದರು.

ಡಿವೈಎಸ್ಪಿ ಹಾಲಮೂರ್ತಿರಾವ್‌ ಮಾತನಾಡಿ, ಮೇ 4ರ ವರೆಗೆ ಪ್ರತಿದಿನ ಬಟ್ಟೆ ಅಂಗಡಿ, ಜ್ಯುಯಲರಿ ಶಾಪ್‌ ಗಳು ಬಂದ್‌ ಆಗಲಿವೆ. ಹೋಟೆಲ್‌ಗ‌ಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶವಿದೆ. ಬೀದಿಬದಿ ಅಂಗಡಿಗಳು ಬಂದ್‌ ಆಗಲಿವೆ. ಕೃಷಿ ಚಟುವಟಿಕೆಗಳಿಗೆ ಕಟ್ಟಡ ಕೆಲಸಗಳಿಗೆ ಅವಕಾಶವಿದೆ. ರಂಜಾನ್‌ ಹಬ್ಬ ಇರುವುದರಿಂದ ಮುಸ್ಲಿಂ ಸಮುದಾಯದವರು ರಾತ್ರಿ 9:00ರೊಳಗೆ ಪ್ರಾರ್ಥನೆ ಸಲ್ಲಿಸಿ ಮಸೀದಿಗಳನ್ನು ಬಂದ್‌ ಮಾಡಬೇಕು ಎಂದರು.

ವೃತ್ತ ನಿರೀಕ್ಷಕ ನಾಗರಾಜ್‌ ಎಂ. ಕಮ್ಮಾರ ಮಾತನಾಡಿ, ಹಬ್ಬಗಳನ್ನು ತಮ್ಮ ತಮ್ಮ ಮನೆಗಳಲ್ಲಿ ಆಚರಿಸಿ. ಕೋವಿಡ್‌ ನಿಯಂತ್ರಿಸಲು ಸಹಕಾರ ನೀಡಬೇಕು ಎಂದರು. ಪುರಸಭೆ ಮುಖ್ಯಾ ಧಿಕಾರಿ ಬಿ.ಆರ್‌. ನಾಗರಾಜ  ನಾಯ್ಕ ಮಾತನಾಡಿ, ಪುರಸಭೆಯಿಂದ ಪ್ರತಿದಿನ ನಡೆಯುವ ದಿನವಹಿ ಸಂತೆ ಹಾಗೂ ಶನಿವಾರ ನಡೆಯುವ ವಾರದ ಸಂತೆಯನ್ನು ಹಡಗಲಿ ರಸ್ತೆಯ ಕ್ರೀಡಾಂಗಣಕ್ಕೆ ಸ್ಥಳಾಂತರ ಮಾಡಲಾಗುವುದು. ಕಿರಾಣಿ ಅಂಗಡಿಯವರು ತಮ್ಮ ಅಂಗಡಿಗಳ ಮುಂದೆ ಸಾರ್ವಜನಿಕರಿಗೆ ಗುರುತು ಮಾಡಿ ಗ್ರಾಹಕರನ್ನು ಸಾಮಾಜಿಕ ಅಂತರದಿಂದ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಬೇಕು ಎಂದರು.

ಪುರಸಭೆ ಅಧ್ಯಕ್ಷ ಮಂಜುನಾಥ್‌ ಇಜಾಂತಕರ್‌, ಸದಸ್ಯರಾದ ಕಿರಣ್‌ ಕುಮಾರ್‌, ಪಿಎಸ್‌ಐಗಳಾದ ಸಿ.ಪ್ರಕಾಶ್‌, ಪ್ರಶಾಂತ್‌ ಕುಮಾರ್‌, ಕಿರಣ್‌ಕುಮಾರ್‌, ಚಿಗಟೇರಿ ಎಎಸ್‌ಐ ಕಲಾರಿ, ವಿವಿಧ ಸಮಾಜದ ಮುಖಂಡರು, ವ್ಯಾಪಾರಿಗಳು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next