Advertisement

ಅಗತ್ಯ ಸೇವೆ ಹೊರತುಪಡಿಸಿ ಎಲ್ಲವೂ ಬಂದ್‌

06:57 PM Apr 23, 2021 | Team Udayavani |

ಬಳ್ಳಾರಿ: ಕೋವಿಡ್‌ ಸೋಂಕು ನಿಯಂತ್ರಿಸುವ ಸಲುವಾಗಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲವನ್ನೂ ಬಂದ್‌ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲೂ ಪೊಲೀಸರು ವರ್ತಕರ ಆಕ್ಷೇಪಣೆಗಳ ನಡುವೆಯೂ ವಿವಿಧ ವಾಣಿಜ್ಯ ಮಳಿಗೆಗಳನ್ನು ಗುರುವಾರ ಬಂದ್‌ ಮಾಡಿದರು.

Advertisement

ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ಎರಡನೇ ಅಲೆ ದಿನೇದಿನೆ ಅಬ್ಬರಿಸುತ್ತಿದೆ. ಮೇಲಾಗಿ ಬಳ್ಳಾರಿ ನಗರ, ಹೊಸಪೇಟೆ, ಸಂಡೂರು ತಾಲೂಕಲ್ಲಿ ಅತಿಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಿಸಲು ಜಿಲ್ಲಾಡಳಿತ ಮುಂದಾಗಿದ್ದು, ಹೆಚ್ಚುವರಿ ಎಸ್‌ಪಿ ಬಿ.ಎನ್‌. ಲಾವಣ್ಯ ನೇತೃತ್ವದಲ್ಲಿ ಪೊಲೀಸರು ನಗರದ ಬೆಂಗಳೂರು ರಸ್ತೆಯ ವಿವಿಧ ರೀತಿಯ ವಾಣಿಜ್ಯ ಮಳಿಗೆ ಬಂದ್‌ ಮಾಡಿಸಿದರು. ತರಕಾರಿ, ಹಣ್ಣು, ಹಾಲು, ಕಿರಾಣಿ, ಪೆಟ್ರೋಲ್‌ ಬಂಕ್‌, ಸಿಮೆಂಟ್‌, ಕಬ್ಬಿಣ, ಔಷಧ ಮಳಿಗೆ ಹೊರತುಪಡಿಸಿ, ಉಳಿದಂತೆ ಬಟ್ಟೆ, ಗಾರ್ಮೆಂಟ್ಸ್‌, ಆಭರಣ, ತಂಪು ಪಾನೀಯ, ಸಿಹಿ ತಿನಿಸುಗಳ ಮಳಿಗೆ ಸೇರಿ ಎಲ್ಲವನ್ನೂ ಬಂದ್‌ ಮಾಡಿಸಿದರು. ಆಕ್ಷೇಪ; ವಾಣಿಜ್ಯ ಮಳಿಗೆಗಳನ್ನು ಬಂದ್‌ ಮಾಡುತ್ತಿದ್ದಾಗ ನಗರದ ಜೈನ್‌ ಮಾರುಕಟ್ಟೆ ಆವರಣದಲ್ಲಿ ವರ್ತಕರು ಆಕ್ಷೇಪ ವ್ಯಕ್ತಪಡಿಸಿದರು.

ಜಿಲ್ಲಾಡಳಿತದಿಂದ ಯಾವುದೇ ಮುನ್ಸೂಚನೆ, ಮುನ್ನೆಚ್ಚರಿಕೆ ನೀಡದೆ ಮಳಿಗೆಗಳನ್ನು ಬಂದ್‌ ಮಾಡಲಾಗುತ್ತಿದೆ. ಇದರಿಂದ ಸಾಕಷ್ಟು ನಷ್ಟವಾಗಲಿದೆ. ಚುನಾವಣಾ ಪ್ರಚಾರ ನಡೆಸುತ್ತಿರುವ ರಾಜಕೀಯ ನಾಯಕರಿಗೆ ಯಾವುದೇ ಲಾಕ್‌ಡೌನ್‌ ಮಾಡಲ್ಲ. ನಮ್ಮ ಮಳಿಗೆಗಳನ್ನು ಮಾತ್ರ ಲಾಕ್‌ ಡೌನ್‌ ಮಾಡುತ್ತಿದ್ದೀರಿ ಎಂದು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಎಸ್‌ಪಿ ಬಿ.ಎನ್‌.ಲಾವಣ್ಯ ಅವರು, ಮಳಿಗೆಗಳ ಬಂದ್‌ಗೆ ಸಂಬಂ ಧಿಸಿದಂತೆ ಜಿಲ್ಲಾಡಳಿತದಿಂದ ಮಾಹಿತಿ ನೀಡದಿರುವುದು ತಪ್ಪಾಗಿರಬಹುದು. ಆದರೆ, ಸರ್ಕಾರದ ಆದೇಶವಿದೆ. ಆದೇಶವನ್ನು ನಾವು ಪಾಲಿಸಬೇಕಾಗಿದೆ. ನಮ್ಮ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಅಗತ್ಯವಿದ್ದಲ್ಲಿ ಮೇಲಾಧಿ ಕಾರಿಗಳನ್ನು ಕೇಳಬಹುದು ಎಂದು ಪ್ರತಿಕ್ರಿಯಿಸಿದರು. ಬಳಿಕ ಅಲ್ಲಿಂದ ನಗರದ ಚೇಂಬರ್‌ ಆಫ್‌ ಕಾಮರ್ಸ್‌ ಕಚೇರಿಗೆ ಬಂದು ಅಧ್ಯಕ್ಷ ರವಿಕುಮಾರ್‌ ಅವರ ಗಮನಕ್ಕೆ ತಂದು, ಸರ್ಕಾರ, ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿದ ರವಿಕುಮಾರ್‌, ರಾಜ್ಯ ಸರ್ಕಾರ ಬುಧವಾರ ಸಂಜೆ ಆದೇಶ ಹೊರಡಿಸಿದೆ. ಹಾಗಾಗಿ ಏ.21ರಾತ್ರಿ 9 ಗಂಟೆಯಿಂದ ಮೇ 4 ಬೆಳಗ್ಗೆ 6 ಗಂಟೆಯವರೆಗೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಉಳಿದೆಲ್ಲ ಮಳಿಗೆಗಳು ಬಂದ್‌ ಆಗಲಿವೆ. ವಾರದ ಕೊನೆಯ ಎರಡು ದಿನ (ಶನಿ, ಭಾನುವಾರ)ಗಳು ಮಾತ್ರ ಸಂಪೂರ್ಣವಾಗಿ ಎಲ್ಲವೂ ಬಂದ್‌ ಆಗಲಿದ್ದು, ಸಂಪೂರ್ಣವಾಗಿ ಲಾಕ್‌ಡೌನ್‌ ಆಗಲಿದೆ ಎಂದವರು ವರ್ತಕರಿಗೆ ಮನವರಿಕೆ ಮಾಡಿಕೊಟ್ಟರು.

ನಿಲ್ದಾಣ ಬಿಕೋ; ಕೋವಿಡ್‌ ಸೋಂಕು ಹೆಚ್ಚಿದ ಹಿನ್ನೆಲೆಯಲ್ಲಿ ನಗರದ ಕೇಂದ್ರ ಬಸ್‌ ನಿಲ್ದಾಣ ಪ್ರಯಾಣಿಕರು ಇಲ್ಲದೇ ಗುರುವಾರ ಬಿಕೋ ಎನ್ನುತ್ತಿತ್ತು. ಈಗಾಗಲೇ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಬಸ್‌ ಸಂಚಾರ ಸಮರ್ಪಕವಾಗಿರದ ಹಿನ್ನೆಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನಿಲ್ದಾಣಕ್ಕೆ ಬರದಿದ್ದ ಪ್ರಯಾಣಿಕರು ಕೋವಿಡ್‌ ಸೋಂಕು ಹೆಚ್ಚಿ, ಲಾಕ್‌ಡೌನ್‌ ಮಾಡಿದ ಹಿನ್ನೆಲೆಯಲ್ಲಿ ಗುರುವಾರ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಕ್ಷೀಣಿಸಿದ್ದು, ಪ್ರಯಾಣಿಕರು ಇಲ್ಲದೇ ಬಿಕೋ ಎನ್ನುತ್ತಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next