ಮರಿಯಮ್ಮನಹಳ್ಳಿ: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಭಾನುವಾರದಿಂದ ಮಂಗಳವಾರದವರೆಗೆ ಮತ್ತೆ 39 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿರುವುದು ಗೋಚರಿಸುತ್ತಿದೆ. ಪ್ರತೀ ವರ್ಷ ಶ್ರೀರಾಮನವಮಿಗೆ ಜರುಗುವ ಲಕೀÒ$¾ನಾರಾಯಣಸ್ವಾಮಿ ಹಾಗೂ ಆಂಜನೇಯಸ್ವಾಮಿ ಜೋಡಿ ರಥೋತ್ಸವ ಕಳೆದ ವರ್ಷದಿಂದ ಕೊರೊನಾ ಕಾರಣದಿಂದಾಗಿ ರದ್ದಾಗಿದೆ. ಈ ವರ್ಷ ಪೊಲೀಸರ ಬಿಗಿ ಬಂದೋಬಸ್ತಿನಲ್ಲಿ ಭಕ್ತಾದಿಗಳಿಗೆ ದೇವರದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ರಥಗಳ ಬಳಿಯೂ ಪೊಲೀಸರು ಜನಸಂದಣಿಯಾಗದಂತೆ ನೋಡಿಕೊಂಡಿದ್ದಾರೆ.
ಕಳೆದ ವರ್ಷ ದೇವಸ್ಥಾನಕ್ಕೆ ಇಡೀ ದೇವಸ್ಥಾನ ಬಂದ್ ಮಾಡಿ ಬಿಗಹಾಕಲಾಗಿತ್ತು. ಕಳೆದ ವರ್ಷ ಕೊರೊನಾ ಪ್ರಕರಣಗಳು ಒಂಟಿ ಅಂಕಿಗಳಲ್ಲಿ ಇದ್ದವು. ಆದರೆ ಈ ವರ್ಷ ಕೊರೊನಾ ಎರಡನೆ ಅಲೆ ಆರಂಭವಾಗಿ ಪಟ್ಟಣ ಸೇರಿದಂತೆ ವೆಂಕಟಾಪುರ, ಡಣಾಪುರ, ಹನುಮನಹಳ್ಳಿ, ಹಂಪಿನಕಟ್ಟಿ, ವ್ಯಾಸನಕೆರೆ ಗ್ರಾಮಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದು 20 ದಿನಗಳಲ್ಲಿ 86 ಜನರಿಗೆ ಸೋಂಕು ತಗುಲಿದೆ. ಈ ವರ್ಷ ರಥೋತ್ಸವ ರದ್ದಾದರೂ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದ್ದು ಸೋಂಕು ಹರಡುವುದನ್ನು ತಡೆಗಟ್ಟುವ ಮುನ್ನೆಚ್ಚರಿಕೆ ದೃಷ್ಟಿಯಿಂದ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಸಾನಿಟೈಸರ್, ಮಾಸ್ಕ್ ವಿತರಣೆ ಮಾಡಲಾಯಿತು.
ಪಟ್ಟಣದಲ್ಲಿ 9ಜನರಿಗೆ ಸೋಂಕು: ತಾಂಡಾದಲ್ಲಿ 8 ವರ್ಷದ ಬಾಲಕ ಹಾಗೂ 23 ವರ್ಷದ ಮಹಿಳೆ, 9ನೇ ವಾರ್ಡಿನಲ್ಲಿ 26 ವರ್ಷದ ಪುರುಷ ಮತ್ತು 24 ವರ್ಷದ ಮಹಿಳೆ, 35 ವರ್ಷದ ಪುರುಷ, ಪಟ್ಟಣ ಪಂಚಾಯಿತಿ ಸಿಬ್ಬಂದಿ ಪೈಕಿ 42 ವರ್ಷದ ಪುರುಷ, ಆರೋಗ್ಯ ಇಲಾಖೆಯ 50 ವರ್ಷದ ಪುರುಷರೊಬ್ಬರು ಸೇರಿದಂತೆ ಒಟ್ಟು 9 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ವೆಂಕಟಾಪುರ ಕೊರೊನಾ ಹಾಟ್‌ಸ್ಪಾಟ್: ಮರಿಯಮ್ಮನಹಳ್ಳಿ ಹೋಬಳಿಯ ವೆಂಕಟಾಪುರ ಎಂಬ ಪುಟ್ಟ ಗ್ರಾಮವು ಈಗ ಕೊರೊನಾ ಹಾಟ್‌ಸ್ಪಾಟ್ ಆಗುತ್ತಿದೆನಾ ಎಂಬ ಶಂಕೆ ಎಲ್ಲರಲ್ಲಿ ಮೂಡುತ್ತಿದೆ. ಏಕೆಂದರೆ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಭಾನುವಾರದದಿಂದ ಮಂಗಳವಾರದವರೆಗೆ ಮತ್ತೆ ವೆಂಕಟಾಪುರದಲ್ಲಿ 28 ಜನ ಸೋಂಕಿತರು ಪತ್ತೆಯಾಗಿದ್ದಾರೆ. ಪಕ್ಕದ ವ್ಯಾಸನಕೆರೆ ಗ್ರಾಮದಲ್ಲಿ ಈಗ ಎರಡು ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರಲ್ಲಿ 16 ಜನ ಪುರುಷರು, 11 ಜನ ಮಹಿಳೆಯರು, 3 ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ. 114 ಡಣಾಪುರ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ 20 ದಿನಗಳಲ್ಲಿ ಸುಮಾರು 65 ಪ್ರಕರಣಗಳು ಬೆಳಕಿಗೆ ಬಂದಿವೆ.