ಸಿರುಗುಪ್ಪ: ನಗರದಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ನಿರ್ಮಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ವಹಣೆ ಇಲ್ಲದೆ ಹಾಳಾಗಿವೆ. ನಗರದಲ್ಲಿರುವ 31 ವಾರ್ಡ್‌ಗಳ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ 2-3 ವಾಡ್ ಗಳಿಗೆ ಸಮೀಪದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ರೂ. 48ಲಕ್ಷ ಶಾಸಕರ ಅನುದಾನದಲ್ಲಿ ನಿರ್ಮಾಣ ಮಾಡಲಾಗಿದೆ. ಪ್ರತಿ ಘಟಕ ನಿರ್ಮಾಣಕ್ಕೆ ರೂ.8ಲಕ್ಷ ವೆಚ್ಚಮಾಡಲಾಗಿದೆ, ನಗರದ 11, 16, 18, 21, 23, 26 ವಾರ್ಡ್‌ಗಳಲ್ಲಿ ಜನರಿಗೆ ಶುದ್ಧ ಕುಡಿಯುವ ನೀರೊದಗಿಸುವ ಉದ್ದೇಶದಿಂದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದ್ದು, 16, 18ನೇ ವಾರ್ಡ್‌ನಲ್ಲಿ ಮಾತ್ರ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿವೆ.
11, 21, 23, 26ನೇ ವಾರ್ಡ್‌ಗಳಲ್ಲಿ ನಿರ್ಮಾಣವಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಬೇಕಾದ ಬೋರ್ ನೀರಿನ ಸೌಲಭ್ಯವಿಲ್ಲದ ಕಾರಣ ಈ ನಾಲ್ಕು ಘಟಕಗಳು ಸ್ಥಗಿತಗೊಂಡಿವೆ. ಈ ಘಟಕಗಳಿಗೆ ನೀರು ಪೂರೈಕೆ ಮಾಡಲೆಂದು ಹಾಕಲಾಗಿದ್ದ ಬೋರ್‌ವೆಲ್ ಗಳಲ್ಲಿ ಸಂಪೂರ್ಣವಾಗಿ ನೀರು ಬತ್ತಿ ಹೋಗಿದ್ದು, ಘಟಕಗಳ ಸ್ಥಗಿತಕ್ಕೆ ಕಾರಣವೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಹರಿಗೋಲ್ ಘಾಟ್‌ನಿಂದ ನಗರಸಭೆಯವರು ನಗರಕ್ಕೆ ಪೂರೈಕೆ ಮಾಡುವ ನೀರು ಕುಡಿಯಲು ಯೋಗ್ಯವಾಗಿಲ್ಲದ ಕಾರಣ ನಗರದ ಪ್ರತಿಯೊಬ್ಬರು ಕುಡಿಯುವ ನೀರನ್ನು ಶುದ್ಧ ಕುಡಿಯುವ ನೀರಿನ ಘಟಕಗಳಿಂದ ತಂದು ಕುಡಿಯುತ್ತಿದ್ದಾರೆ. ಕಡಿಮೆ ಧರದಲ್ಲಿ ಸ್ಥಳಿಯವಾಗಿಯೇ ಶುದ್ಧ ಕುಡಿಯುವ ನೀರೊದಗಿಸುವ ಉದ್ದೇಶದಿಂದ ನಿರ್ಮಾಣವಾದ ನಾಲ್ಕು ಘಟಕಗಳು ಸ್ಥಗಿತಗೊಂಡಿದ್ದು, 11, 21, 23, 26ನೇ ವಾರ್ಡ್‌ಗಳ ಜನರು ಖಾಸಗಿ ಶುದ್ದ ಕುಡಿಯುವ ನೀರಿನ ಘಟಕಗಳಿಗೆ ತೆರಳಿ ಶುದ್ಧ ಕುಡಿಯುವ ನೀರನ್ನು ತರುತ್ತಿದ್ದಾರೆ. ನಮ್ಮ ವಾರ್ಡ್‌ನಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿದ್ದರೂ ಯಾವುದೇ ಪ್ರಯೋಜನವಿಲ್ಲ, ಸದ್ಯ ಘಟಕ ಸ್ಥಗಿತಗೊಂಡಿದ್ದು, ಕುಡಿಯುವ ನೀರನ್ನು ಬೇರೆಡೆಯಿಂದ ತರುವುದು ಅನಿವಾರ್ಯವಾಗಿದೆ. ಬೇಸಿಗೆಯಲ್ಲಿ ಕುಡಿಯುವ ನೀರು ಹೆಚ್ಚಾಗಿ ಬಳಕೆಯಾಗುತ್ತವೆ, ಶುದ್ಧ ನೀರು ಸಮೀಪ ಸಿಕ್ಕರೆ ಅನುಕೂಲ ಆದರೆ ನಮ್ಮಲ್ಲಿರುವ ಘಟಕದಿಂದ ಯಾವುದೇ ಪ್ರಯೋಜನವಿಲ್ಲದಂತಾಗಿದೆ ಎಂದು 23ನೇವಾರ್ಡಿನ ನಿವಾಸಿಗಳಾದ ಮಾರೆಣ್ಣ, ಹನುಮಂತ, ದುರುಗಪ್ಪ, ಯಲ್ಲಪ್ಪ ಆರೋಪಿಸಿದ್ದಾರೆ.
ನಗರದಲ್ಲಿ ಒಟ್ಟು 6 ಶುದ್ಧ ಕುಡಿಯುವ ನೀರನ ಘಟಕಗಳಿದ್ದು, ಇದರಲ್ಲಿ ಬೋರ್ ನೀರಿನ ಕೊರತೆಯಿಂದ ನಾಲ್ಕು ಘಟಕಗಳು ಸ್ಥಗಿತಗೊಂಡಿದ್ದು, 2 ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ನಗರದಲ್ಲಿ ಶುದ್ಧ ಕುಡಿಯುವ 2 ನೀರಿನ ಘಟಕ ಕಾರ್ಯನಿರ್ವಹಿಸುತ್ತಿದ್ದು, ಇನ್ನುಳಿದ ನಾಲ್ಕು ಘಟಕಗಳು ವಿವಿಧ ಕಾರಣಗಳಿಂದ ಸ್ಥಗಿತಗೊಂಡಿವೆ. ಸುಮಾರು ರೂ.48ಲಕ್ಷ ವೆಚ್ಚದಲ್ಲಿ ಘಟಕಗಳನ್ನು ನಿರ್ಮಾಣ ಮಾಡಲಾಗಿದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು, ಗುತ್ತಿಗೆದಾರರ ನಿರ್ಲಕ್ಷದಿಂದ ಜನರಿಗೆ ಶುದ್ಧ ಕುಡಿಯುವ ನೀರು ದೊರೆಯುತ್ತಿಲ್ಲ. ಆದರೆ ಸರ್ಕಾರದ ಅನುದಾನ ಮಾತ್ರ ಖರ್ಚಾಗಿದೆ. ನಗರದ ವಿವಿಧ ವಾರ್ಡ್‌ಗಳಲ್ಲಿ ನಿರ್ಮಾಣವಾಗಿರುವ 6 ಶುದ್ಧ ಕುಡಿಯುವ ನೀರಿನ ಘಟಕಗಳನ್ನು 5 ವರ್ಷ ನಿರ್ವಹಣೆ ಮಾಡಿ ನಂತರ ಗುತ್ತಿಗೆದಾರರು ನಗರಸಭೆಗೆ ಹಸ್ತಾಂತರ ಮಾಡಬೇಕಾಗಿತ್ತು, ಆದರೆ ಇಲ್ಲಿಯವರೆಗೆ ನಮಗೆ ಹಸ್ತಾಂತರ ಮಾಡಿಲ್ಲ ಎಂದು ನಗರಸಭೆ ಪೌರಾಯುಕ್ತ ಪ್ರೇಮ್‌ಚಾರ್ಲ್ಸ್ ತಿಳಿಸಿದ್ದಾರೆ.
ನಗರದಲ್ಲಿರುವ 6 ಘಟಕಗಳ ಪೈಕಿ 2 ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಇನ್ನುಳಿದ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲವೆಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ವಕ್ರಾಣಿ ತಿಳಿಸಿದ್ದಾರೆ.