ಬಳ್ಳಾರಿ: ಇಲ್ಲಿನ ಬಳ್ಳಾರಿ ಮಹಾನಗರ ಪಾಲಿಕೆಗೆ ಇದೇ ಏ.27 ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಮತ್ತೂಮ್ಮೆ ಅಧಿ ಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ, ಈ ಬಾರಿಯ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬಹುತೇಕ ಯುವಕರು, ವಿದ್ಯಾವಂತರಿಗೆ ಟಿಕೆಟ್ ನೀಡಲಾಗಿದ್ದು, ಎಲ್ಲರೂ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಸ್ಪ ರ್ಧಿಸಿರುವ 39 ಅಭ್ಯರ್ಥಿಗಳಲ್ಲಿ 17 ಜನ ಪದವೀಧರರು, ಮೂವರು ಪಿಯುಸಿ, 7 ಜನ ಎಸ್‌ಎಸ್ ಎಲ್‌ಸಿ, 12 ಜನರು ಪ್ರೌಢಶಾಲೆ ವ್ಯಾಸಂಗ ಮಾಡಿದವರಾಗಿದ್ದಾರೆ ಎಂದು ತಿಳಿಸಿದರು.
ಈಗಾಗಲೇ ಜಿಲ್ಲಾ ಖನಿಜ ನಿ ಧಿಯಿಂದ ನಗರದಲ್ಲಿ 120 ರಸ್ತೆಗಳನ್ನು ಡಾಂಬರೀಕರಣ ಮಾಡಲಾಗಿದೆ. ನಗರಕ್ಕೆ ಅಗತ್ಯ ಕುಡಿವ ನೀರಿನ ಸಂಗ್ರಹವಿದೆ. ಆದರೆ, ಸಮರ್ಪಕ ವಿತರಣೆಯಿಲ್ಲ. 24/7 ಯೋಜನೆ ಮಾಡುವ ಪ್ರಯತ್ನ ಇದೆ. ಸ್ವತ್ಛತೆಗೆ ಆದ್ಯತೆ ನೀಡಲಾಗುವುದು. ಬಳ್ಳಾರಿ ಬೆಟ್ಟದ ಮೇಲೆ ತಿಮ್ಮಪ್ಪನ ದೇವಸ್ಥಾನ ನಿರ್ಮಿಸಿ ಪ್ರವಾಸಿ ತಾಣವಾಗಿ ಮಾಡಲು ಕೇಬಲ್ ಕಾರ್ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುವುದು. ವಿದ್ಯುತ್ ಚಿತಾಗಾರ ನಿರ್ಮಿಸಲಾಗುವುದು ಎಂದು ಹೇಳಿದರು.
ಟಿಕೆಟ್ ಮಾರಾಟ ಆರೋಪ: ಪಾಲಿಕೆಯ 5ನೇ ವಾರ್ಡ್ ಟಿಕೆಟ್‌ನ್ನು ಮಾರಾಟ ಮಾಡಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅಲ್ಲಂ ವೀರಭದ್ರಪ್ಪ, 5ನೇ ವಾರ್ಡ್‌ನ ಅಭ್ಯರ್ಥಿ ಬಡವನಾಗಿದ್ದಾನೆ. ಅವನ ಗೆಲುವಿಗೆ ಸ್ಥಳೀಯ ನಿವಾಸಿಗಳೇ ಹಣ ಖರ್ಚು ಮಾಡುವುದಾಗಿ ಮುಂದೆ ಬಂದಿದ್ದ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್ ನೀಡಲಾಗಿದೆ. ಅಷ್ಟೇ ಹೊರತು, ಇದರಲ್ಲಿ ಯಾವುದೇ ಹಣ ಪಡೆದಿಲ್ಲ. ಪಟ್ಟಿಯಲ್ಲಿ ಡಿ.ನಾರಾಯಣಪ್ಪರ ಹೆಸರಿದ್ದರೆ ಅದನ್ನು ಕೆಪಿಸಿಸಿಯವರನ್ನು ಕೇಳಬೇಕು ಎಂದು ಸ್ಪಷ್ಟಪಡಿಸಿದರು. ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ಕೋವಿಡ್ ಸೋಂಕಿನ ಕ್ಲಿಷ್ಟ ಪರಿಸ್ಥಿತಿಯಲ್ಲಿ ಚುನಾವಣೆ ಬಂದಿದೆ. ಅಬ್ಬರಕ್ಕಿಂತ ಬದ್ಧತೆ ಮತ್ತು ವಿಚಾರಧಾರೆ ಮೇಲೆ ಚುನಾವಣೆ ನಡೆಯಬೇಕಿದೆ. 5 ಜನರಿಗಿಂತ ಹೆಚ್ಚು ಸೇರಿ ಪ್ರಚಾರ ಮಾಡಬಾರದು. ಮೆರವಣಿಗೆ ಮಾಡಬಾರದು. ಸಾರ್ವಜನಿಕ ಸಭೆ ನಡೆಸಬಾರದು ಎಂದು ಆಯೋಗ ಹೇಳಿದೆ. ಇದರಿಂದ ಜೀವನ ಮುಖ್ಯ. ಪಕ್ಷದ ಎಲ್ಲ ಕಾರ್ಯಕರ್ತರು ಮಾಸ್ಕ್ ಧರಿಸಿ ಮನೆ ಮನೆ ಪ್ರಚಾರಕ್ಕೆ ಒತ್ತು ನೀಡಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ಕಾಂಗ್ರೆಸ್ ಮತ್ತೆ ಅಧಿ ಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ಮುಖಂಡ ನಿರಂಜನ್ ನಾಯ್ಡು, ಮಾಜಿ ಶಾಸಕ ಅನಿಲ್ ಲಾಡ್, ಜಿಲ್ಲಾಧ್ಯಕ್ಷ ಮಹ್ಮದ್ ಜಿ.ಎಸ್.ರಫಿಕ್, ಪಾಲಿಕೆ ಚುನಾವಣಾ ಸಂಯೋಜಕ ಜೆ.ಎಸ್. ಆಂಜನೇಯಲು, ವಿಲ್ಸನ್ ಸೇರಿ ಹಲವರು ಇದ್ದರು. ಜನಪ್ರತಿನಿಧಿ ಗಳಿಲ್ಲ ಅವಕಾಶ: ಕೇಂದ್ರ ಸರ್ಕಾರ ಮೈನ್ಸ್ ಆ್ಯಂಡ್ ಮಿನರಲ್ಸ್ ಅಮೆಂಡ0ಟ್ ಬಿಲ್ ಗೆ ತಿದ್ದುಪಡಿ ತಂದಿದ್ದು, ಅದರಲ್ಲಿ ಸ್ಥಳೀಯ ಜನಪ್ರತಿನಿ ಧಿಗಳಿಗೆ ಅವಕಾಶವಿಲ್ಲ. ಡಿಎಂಎಫ್ ಅನುದಾನವನ್ನು ಕೇಂದ್ರ ಸರ್ಕಾರವೇ ನಿಭಾಯಿಸಲಿದೆ. ಜನಪ್ರತಿನಿಧಿ ಗಳನ್ನು ಹೊರಗಿಟ್ಟು, ಬಳ್ಳಾರಿಯಲ್ಲಿನ ಸಮಸ್ಯೆಗಳ ಬಗ್ಗೆ ದೆಹಲಿಯಿಂದ ಹೇಗೆ ಪರಿಹರಿಸಲಾಗುತ್ತದೆ. ಈ ಕುರಿತು ವಿರೋಧ ವ್ಯಕ್ತಪಡಿಸಿ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ ಎಂದವರು ತಿಳಿಸಿದರು.