ಬಳ್ಳಾರಿ: ದಿನೇದಿನೆ ರಂಗೇರುತ್ತಿರುವ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 39 ವಾರ್ಡ್‌ಗಳಿಗೆ ಅಂತಿಮವಾಗಿ 65 ಪಕ್ಷೇತರರು ಸೇರಿ ಒಟ್ಟು 186 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. 19 ನಾಮಪತ್ರ ತಿರಸ್ಕೃತ, 39 ಜನರು ತಮ್ಮ ಉಮೇದುವಾರಿಕೆಯನ್ನು ಹಿಂದಕ್ಕೆ ಪಡೆದಿದ್ದು, ಬಹುತೇಕ ವಾರ್ಡ್‌ಗಳಲ್ಲಿ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಫೈಟ್ ನಡೆಯಲಿದ್ದು, ಸ್ವತಂತ್ರ, ಬಂಡಾಯ ಅಭ್ಯರ್ಥಿಗಳಿರುವ ವಾಡ್ ಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ.
ಬಳ್ಳಾರಿ ಮಹಾನಗರ ಪಾಲಿಕೆಯ 39 ವಾರ್ಡ್‌ಗಳಿಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಎಎಪಿ, ಎನ್‌ಸಿಪಿ ಸೇರಿ ವಿವಿಧ ಪಕ್ಷಗಳು, ಸ್ವತಂತ್ರ ಅಭ್ಯರ್ಥಿಗಳು ಸೇರಿ ಒಟ್ಟು 244 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ವಿವಿಧ ಕಾರಣಗಳಿಂದ 19 ಜನರ ನಾಮಪತ್ರಗಳು ತಿರಸ್ಕೃತಗೊಂಡಿದ್ದವು. ಕಣದಲ್ಲಿ 225 ಜನರು ಉಳಿದಿದ್ದರಾದರೂ, ಕಾಂಗ್ರೆಸ್ -ಬಿಜೆಪಿ ಪಕ್ಷಗಳಿಂದ ಟಿಕೇಟ್ ಸಿಗದೇ ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಹಲವರು ಸೇರಿ ಒಟ್ಟು 39 ಅಭ್ಯರ್ಥಿಗಳು ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದು, ಅಂತಿಮವಾಗಿ 186 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು, ಚುನಾವಣಾ ಕಣ ನಿಧಾನವಾಗಿ ರಂಗೇರುತ್ತಿದೆ. ಚುನಾವಣೆಯಲ್ಲಿ 39 ವಾರ್ಡ್‌ಗಳಿಗೂ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. 5 ವಾಡ್ ìಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಜನಹಿತ ಪಕ್ಷ 5, ಎನ್‌ಸಿಪಿ 9, ಕೆಜೆಪಿ 2, ಶಿವಸೇನೆ 2, ಕರ್ನಾಟಕ ರಾಷ್ಟ್ರ ಸಮಿತಿ 2, ಆಮ್ ಆದ್ಮಿ ಪಾರ್ಟಿ 6, ಸಮಾಜ ವಾದಿ ಪಕ್ಷ 4, ಕೆಆರ್‌ಎಸ್ 4, ಎಐಎಂಐಎಂ 4 ವಾರ್ಡ್‌ಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. 39 ವಾಡ್ ìಗಳ ಪೈಕಿ ಬಹುತೇಕ ವಾರ್ಡ್‌ಗಳಲ್ಲಿ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದು, ಕೆಲವೊಂದು ವಾರ್ಡ್‌ಗಳಲ್ಲಿ ಟಿಕೆಟ್ ವಂಚಿತ ಬಂಡಾಯ ಅಭ್ಯರ್ಥಿಗಳು ರಾಷ್ಟ್ರೀಯ ಪಕ್ಷಗಳಿಗೆ ಮುಳುವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಹೆಚ್ಚಿದ ಬಂಡಾಯ: ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕಿಂತ ಕಾಂಗ್ರೆಸ್ ಪಕ್ಷದಲ್ಲೇ ಬಂಡಾಯದ ಬಿಸಿ ಹೆಚ್ಚಾಗಿ ಕೇಳಿಬರುತ್ತಿದೆ. 3ನೇ ವಾರ್ಡ್‌ನ ಟಿಕೆಟ್ ಆಕಾಂಕ್ಷಿಗಳಾಗಿದ್ದ ಎಂ.ಪ್ರಭಂಜನ್ ಕುಮಾರ್, ಅಲಿವೇಲು ಸುರೇಶ್, 9ನೇ ವಾರ್ಡ್‌ನ ಕಣೇಕಲ್ ಮಾಬುಸಾಬ್, 35ನೇ ವಾರ್ಡ್‌ನ ಮಿಂಚು ಶ್ರೀನಿವಾಸ್, 17ನೇ ವಾರ್ಡ್‌ನ ಹೊನ್ನಪ್ಪ, 21ನೇ ವಾಡ್ ನ ದಿವಾಕರಗೌಡ, 12ನೇ ವಾರ್ಡ್‌ನ ಜಿಲ್ಲೆ ಹನುಮಂತಪ್ಪ ಅವರು ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ. ಅದೇ ರೀತಿ ಕೆಲವೊಂದು ವಾರ್ಡ್‌ಗಳಲ್ಲೂ ಬಿಜೆಪಿಯಿಂದಲೂ ಬಂಡಾಯ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಈ ವಾರ್ಡ್‌ಗಳಲ್ಲಿ ತ್ರಿಕೋಣ ಸ್ಪರ್ಧೆಗಳು ಏರ್ಪಡುವ ಸಾಧ್ಯತೆಯಿದೆ.
3, 35ನೇ ವಾರ್ಡ್‌ಗಳಲ್ಲಿ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಿಗೆ ಪಕ್ಷೇತರ ಅಭ್ಯರ್ಥಿಗಳಾದ ಎಂ. ಪ್ರಭಂಜನ್ ಕುಮಾರ್, ಮಿಂಚು ಶ್ರೀನಿವಾಸ್ ಅವರು ಹೆಚ್ಚು ಪೈಪೋಟಿ ನೀಡುವ ಸಾಧ್ಯತೆಯಿದ್ದು, ಅದೃಷ್ಟ ಖುಲಾಯಿಸಿ ಅಲ್ಪ ಮತಗಳ ಅಂತರದಿಂದ ಗೆದ್ದರೂ ಅಚ್ಚರಿಪಡುವಂತಿಲ್ಲ. ಇನ್ನುಳಿದಂತೆ ವಿವಿಧ ರಾಜಕೀಯ ಪಕ್ಷಗಳಿಂದ ಕಣಕ್ಕಿಳಿದಿರುವ ಅಭ್ಯರ್ಥಿಗಳು ತಾವು ಸಹ ಗೆಲ್ಲಲೇಬೇಕೆಂಬ ಹಂಬಲ ಮತ್ತು ತಮಗೆಷ್ಟು ಜನಬೆಂಬಲವಿದೆ. ಎಷ್ಟು ಮತಗಳು ಲಭಿಸಲಿವೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲದಿಂದ ಕಣದಲ್ಲಿ ಉಳಿದಿದ್ದಾರೆ. ಇವರ ಕುತೂಹಲವೆಷ್ಟು ಎಂಬುದನ್ನು ಮತದಾರರು ಫಲಿತಾಂಶದಲ್ಲಿ ತಿಳಿಸಲಿದ್ದಾರೆ.
ಈಗಾಗಲೇ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಅವರ ಮುಖಂಡರು ನಾಯಕರು ಕಳೆದ ಹಲವು ದಿನಗಳಿಂದ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಇದೀಗ ಪಕ್ಷೇತರ ಅಭ್ಯರ್ಥಿಗಳಿಗೆ ಸೋಮವಾರ ಸಂಜೆ ಚಿಹ್ನೆಗಳನ್ನು ನೀಡಿದ್ದು, ಅವರೆಲ್ಲರೂ ಕೂಡಲೇ ತಮ್ಮ ಚಿಹ್ನೆಯುಳ್ಳ ಕರಪತ್ರಗಳನ್ನು ಮುದ್ರಿಸಿ ಇಂದಿನಿಂದಲೇ ಮನೆಮನೆಗೆ ತೆರಳಿ ಪ್ರಚಾರ ಕೈಗೊಳ್ಳುತ್ತಿದ್ದು, ಚುನಾವಣಾ ಕಣ ಮತ್ತಷ್ಟು ರಂಗೇರಿದೆ.