Advertisement

ರಸ್ತೆ ರಿಪೇರಿ ಬರದಲ್ಲಿ ಬುಡ್ಡೆಕಲ್ಲು ಮಾಯ!

06:19 PM Apr 18, 2021 | Team Udayavani |

„ಆರ್‌.ಬಸವರೆಡ್ಡಿ ಕರೂರು

Advertisement

ಸಿರುಗುಪ್ಪ: ದೇಶನೂರು ಮುಖ್ಯರಸ್ತೆಯನ್ನು ಅನೇಕಬಾರಿ ರಿಪೇರಿ ಮಾಡಿ ಎತ್ತರಿಸಿರುವುದರಿಂದ ನೆಲಮಟ್ಟದಲ್ಲಿದ್ದ ಬುಡ್ಡೆಕಲ್ಲು ಈಗ ಸಂಪೂರ್ಣವಾಗಿ ಕಾಣದಂತಾಗಿದ್ದು, ಬುಡ್ಡೆಕಲ್ಲು ಎಲ್ಲಿದೆ ಎಂದು ಹುಡುಕಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸುಮಾರು 100 ವರ್ಷಗಳ ಹಿಂದೆ ಗ್ರಾಮದ ಮಧ್ಯದಲ್ಲಿ ಬುಡ್ಡೆಕಲ್ಲನ್ನು ಸ್ಥಾಪನೆ ಮಾಡಲಾಗಿತ್ತು. ಗ್ರಾಮಸ್ಥರು ತಮ್ಮ ಯಾವುದೇ ಕೆಲಸ ಕಾರ್ಯಗಳಿಗಾಗಿ ಬೇರೆ ಊರಿಗೆ ತೆರಳುವಾಗ ತಮ್ಮ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲಿ, ಅಂದುಕೊಂಡ ಕೆಲಸಗಳು ನಡೆಯಲಿ ಎಂದು ಬುಡ್ಡೆಕಲ್ಲಪ್ಪನಿಗೆ ನಮಸ್ಕರಿಸಿ ಹೋಗುವುದು ವಾಡಿಕೆಯಾಗಿತ್ತು.

ಬೇರೆ ಊರಿನ ಜನರು ಈ ಗ್ರಾಮವನ್ನು ಪ್ರವೇಶಿಸುವಾಗ ತಮ್ಮ ಕೆಲಸಗಳು ಯಾವುದೇ ವಿಘ್ನಗಳಾಗದೆ ನಡೆಯಬೇಕೆಂದು ಪ್ರಾರ್ಥಿಸಿ, ನಮಸ್ಕರಿಸಿ ಊರನ್ನು ಪ್ರವೇಶಿಸುತ್ತಿದ್ದರು.

ಈ ಮಾರ್ಗವಾಗಿ ಬೇರೆ ಊರಿಗೆ ತೆರಳುವ ಸಾರ್ವಜನಿಕರು, ವ್ಯಾಪಾರಿಗಳು, ರೈತರು ಬುಡ್ಡೆಕಲ್ಲಿಗೆ ನಮಸ್ಕರಿಸಿ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡಿ ತೆರಳುತ್ತಿದ್ದರು. ಬುಡ್ಡೆಕಲ್ಲಿಗೆ ಪ್ರತಿನಿತ್ಯವೂ ಅನೇಕ ಜನ ಕೊಡಗಳಲ್ಲಿ ನೀರು ತಂದು ಹಾಕಿ ಅರಿಶಿಣ, ಕುಂಕುಮ ಹಚ್ಚಿ ಊದುಬತ್ತಿ ಬೆಳಗಿ ನಮಸ್ಕರಿಸುತ್ತಿದ್ದರು.

Advertisement

ಊರಲ್ಲಿ ಮಳೆ ಬಾರದೆ ಇದ್ದಾಗ 101 ಕೊಡ ನೀರನ್ನು ತುಂಗಭದ್ರಾ ನದಿಯಿಂದ ಹೊತ್ತು ತಂದು ಬುಡ್ಡೆಕಲ್ಲಿಗೆ ಹಾಕಿ ಮಳೆ ಕರುಣಿಸಬೇಕೆಂದು ಪೂಜಿಸುತ್ತಿದ್ದರು. ಹೀಗೆ ಮಾಡುವುದರಿಂದ ಬುಡ್ಡೆಕಲ್ಲು ದೇವರು ಶಾಂತವಾಗಿ ವರದ ರೂಪದಲ್ಲಿ ಮಳೆಯನ್ನು ಕರುಣಿಸುತ್ತಿದ್ದ ಎಂಬ ಪ್ರತೀತಿ ಇದೆ. ಆದರೆ ಈಗ ಬುಡ್ಡೆಕಲ್ಲು ಸಿಸಿ ರಸ್ತೆ ನಿರ್ಮಾಣದಿಂದಾಗಿ ನೆಲದಾಳದಲ್ಲಿ ಹುದುಗಿ ಹೋಗಿದ್ದು, ಬುಡ್ಡೆಕಲ್ಲಪ್ಪನನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನಾದರು ಬುಡ್ಡೆಕಲ್ಲಪ್ಪನನ್ನು ನೆಲದಾಳದಿಂದ ಹೊರತೆಗೆದು ಪೂಜಿಸಲು ಅನುವು ಮಾಡಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next