ಬಳ್ಳಾರಿ: ರಾಜ್ಯದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿರುವುದರ ಹಿನ್ನೆಲೆ ಈಗಾಗಲೇ ಹೊರಡಿಸಲಾಗಿರುವ ಮಾರ್ಗಸೂಚಿಗಳ ಅನುಸಾರ ಕಠಿಣ ಕ್ರಮಗಳನ್ನು ಕೈಗೊಳ್ಳಲು ಎಲ್ಲ ಜಿಲ್ಲೆಗಳ ಜಿಲ್ಲಾ ಧಿಕಾರಿಗಳು ಮುಂದಾಗಬೇಕು. ಕೋವಿಡ್ 2ನೇ ಅಲೆ ತಡೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳದೇ ಬೇರೆ ದಾರಿಯೇ ಇಲ್ಲ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಅಶೋಕ ಮತ್ತು ಆರೋಗ್ಯ ಸಚಿವ ಡಾ| ಕೆ.ಸುಧಾಕರ್ ಸೂಚಿಸಿದ್ದಾರೆ.
ಬಳ್ಳಾರಿ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾ ಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಕೋವಿಡ್‌ಗೆ ಸಂಬಂ ಧಿಸಿದಂತೆ ಇದುವರೆಗೆ ಕೈಗೊಂಡ ಕ್ರಮಗಳು, ಮಾರ್ಗಸೂಚಿಗಳ ಪರಿಣಾಮಕಾರಿ ಅನುಷ್ಠಾನ ಸೇರಿದಂತೆ ವಿವಿಧ ಸಿದ್ಧತಾ ಕ್ರಮಗಳ ವಿವರಗಳನ್ನು ಡಿಸಿಗಳಿಂದ ಪಡೆದುಕೊಂಡು ಅವರು ಮಾತನಾಡಿದರು. ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸೊಂಕಿತರನ್ನ ಸರಿಯಾದ ಸಮಯದಲ್ಲಿ ಪತ್ತೆಹಚ್ಚಿ ಅವರಿಗೆ ಚಿಕಿತ್ಸೆ ನೀಡಬೇಕು ಮತ್ತು ಸಾರಿ ಮತ್ತು ಇಎಲ್‌ಐ ಕಾಯಿಲೆಗಳಿಂದ ಬಳಲುತ್ತಿರುವವರಿಗೂ ಸರಿಯಾಗಿ ತಪಾಸಣೆ ಮಾಡುವಂತೆ ಸೂಚನೆ ನೀಡಿದ ಸಚಿವತ್ರಯರು ಶುಕ್ರವಾರ ಹೊರಡಿಸಲಾದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಉಲ್ಲಂಘಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಗಳನ್ನು ನಿಯಮಾನುಸಾರ ಕ್ರಮಕೈಗೊಳ್ಳಬೇಕು ಎಂದರು.
ಪ್ರತಿ ಜಿಲ್ಲೆಗೂ ಅಲ್ಲಿನ ಅಗತ್ಯ ಟೆಸ್ಟಿಂಗ್, ಕಂಟ್ಯಾಕ್ಟ್ ಟ್ರೇಸಿಂಗ್ ಮತ್ತು ಚಿಕಿತ್ಸೆ ಮಾಹಿತಿ ಪಡೆದ ಅವರು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಬೆಡ್‌ಗಳ ಅವಶ್ಯಕತೆ, ವೈದ್ಯಕೀಯ ಸಮಸ್ಯೆಗಳು ಹಾಗೂ ಇನ್ನಿತರ ಮಾಹಿತಿಗಳನ್ನು ಡಿಸಿಗಳಿಂದ ಪಡೆದುಕೊಂಡರು. ಬಳ್ಳಾರಿಯಲ್ಲಿ 1360 ಸಕ್ರಿಯ ಪ್ರಕರಣಗಳು: ಬಳ್ಳಾರಿ ಜಿಲ್ಲೆಯಲ್ಲಿ ಸದ್ಯ 1360 ಸಕ್ರಿಯ ಪ್ರಕರಣಗಳಿದ್ದು, ಇಂದು(ಶನಿವಾರ) 400ರ ಆಸುಪಾಸಿನಲ್ಲಿ ಕೋವಿಡ್ ಪ್ರಕರಣಗಳು ಬರುವ ಸಾಧ್ಯತೆ ಇದೆ. 274 ಜನರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಧಿಕಾರಿ ಪವನಕುಮಾರ್ ಮಾಲಪಾಟಿ ಅವರು ವಿವರಿಸಿದರು.
ಕೊರೊನಾ ರೋಗಿಗಳಿಗೆ ನೀಡುವ ರೆಮೆಡೆಸಿವಿರ್ ಲಸಿಕೆ ನಮ್ಮಲ್ಲಿ ಲಭ್ಯವಿದ್ದು, ಸಮಸ್ಯೆ ಇಲ್ಲ. 1100 ಆಕ್ಸಿಜನ್ ಬೆಡ್‌ಗಳು ಇವೆ. ಈಗಾಗಲೇ ಟ್ರಾಮಾಕೇರ್ ಆಸ್ಪತ್ರೆಯಲ್ಲಿನ ಬೆಡ್ ಗಳಲ್ಲಿ ಸೊಂಕಿತರು ಭರ್ತಿಯಾದ ನಂತರ ವಿಮ್ಸನಲ್ಲಿ ಸೊಂಕಿತರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುವುದು. ನಂತರ ಜಿಲ್ಲಾಸ್ಪತ್ರೆಯಲ್ಲಿಯೂ ಸೊಂಕಿತರಿಗೆ ಚಿಕಿತ್ಸೆ ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. 20ರಿಂದ 40 ಬೆಡ್‌ಗಳು ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಲಭ್ಯವಿರುವುದನ್ನು ಜಿಲ್ಲಾಧಿಕಾರಿಗಳು ಸಚಿವರಿಗೆ ಖಚಿತಪಡಿಸಿದರು. ಬಳ್ಳಾರಿ ನಗರದಲ್ಲಿ ಮಹಾನಗರ ಪಾಲಿಕೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನೈಟ್‌ಕಫೂ ಪ್ರಸ್ತಾವವನ್ನು ಡಿಸಿ ಅವರು ಸಚಿವರ ಮುಂದಿಟ್ಟರು. ಗೃಹಸಚಿವರಾದ ಬಸವರಾಜ ಬೊಮ್ಮಾಯಿ ಅವರು ಕಳೆದ ಬಾರಿಗಿಂತ ಈ ಬಾರಿ ಡಬಲ್ ಬೆಡ್ ಗಳ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಎಸ್ಪಿ ಸೈದುಲು ಅಡಾವತ್, ಜಿಪಂ ಸಿಇಒ ಕೆ.ಆರ್. ನಂದಿನಿ, ಅಪರ ಜಿಲ್ಲಾ ಧಿಕಾರಿ ಪಿ.ಎಸ್.ಮಂಜುನಾಥ, ಡಿಎಚ್‌ಒ ಡಾ| ಜನಾರ್ಧನ್, ವಿಮ್ಸ್ ನಿರ್ದೇಶಕ ಡಾ| ಗಂಗಾಧರಗೌಡ ಮತ್ತಿತರರು ಇದ್ದರು.