ಬಳ್ಳಾರಿ: ಕೋವಿಡ್ ಸೋಂಕು ಎರಡನೇ ಅಲೆಯಲ್ಲೂ ಅಬ್ಬರಿಸುತ್ತಿದ್ದು, ಖಾಸಗಿ ಆಸ್ಪತ್ರೆಗಳು ಜನರಿಂದ ಸುಲಿಗೆ ಮಾಡುತ್ತಿದ್ದು, ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತು ಖಾಸಗಿ ಆಸ್ಪತ್ರೆಗಳನ್ನು ವಶಕ್ಕೆ ಪಡೆದುಕೊಂಡು ನಿರ್ವಹಿಸಬೇಕು. ಕೋವಿಡ್ ಸೋಂಕಿತರಿಗೆ ಶೇ.50ರಷ್ಟು ಬೆಡ್ ಮೀಸಲಿಡಬೇಕು ಎಂದು ಸಿಪಿಐ(ಎಂ) ಕಾರ್ಯದರ್ಶಿ ಯು.ಬಸವರಾಜ್ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸೋಂಕನ್ನು ನಿಯಂತ್ರಿಸಲು ಸರ್ಕಾರ ಸಾರ್ವಜನಿಕ ಆಸ್ಪತ್ರೆಗಳನ್ನು ಬಲಪಡಿಸಬೇಕು. ಖಾಸಗಿ ಆಸ್ಪತ್ರೆಗಳನ್ನು ಸರ್ಕಾರ ವಶಕ್ಕೆ ಪಡೆದು ನಿಭಾಯಿಸುವಂತೆ ಮೊದಲ ಅವ ಧಿಯಲ್ಲೇ ಸರ್ಕಾರವನ್ನು ಒತ್ತಾಯಿಸಲಾಗಿತ್ತು. ಆದರೆ, ಸರ್ಕಾರದಿಂದ ಆ ಕ್ರಮ ಆಗಿಲ್ಲ. ಇದೀಗ ಎರಡನೇ ಅಲೆಯಲ್ಲೂ ಕೋವಿಡ್ ಅಬ್ಬರ ಹೆಚ್ಚಾಗಿದ್ದು, ಖಾಸಗಿ ಆಸ್ಪತ್ರೆಗಳು ಕೋವಿಡ್ ನೆಪದಲ್ಲಿ ಸಾರ್ವಜನಿಕರಿಂದ ದುಬಾರಿ ಹಣ ಸುಲಿಗೆ ಮಾಡುತ್ತಿವೆ ಎಂದು ಆಪಾದಿಸಿದರು. ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಅನುಗುಣವಾಗಿ ಹಾಸಿಗೆ, ವೆಂಟಿಲೇಟರ್‌ಗಳು ಲಭ್ಯವಿಲ್ಲ. ಕೊರೊನಾ ಎರಡನೇ ಅಲೆ ನಿಯಂತ್ರಿಸುವಲ್ಲಿ ಸರ್ಕಾರ ನಿರ್ಲಕ್ಷ ವಹಿಸಿದೆ. ಈಗಲೂ ಬೆಡ್, ವೆಂಟಿಲೇಟರ್ ಇಲ್ಲದೆ ಜನ ಸಾಯುತ್ತಿದ್ದಾರೆ. ಸರ್ಕಾರ ಕೇವಲ ಮೇಲ್ನೋಟಕ್ಕೆ ಮಾತ್ರ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಎಂಬ ಬಾಯಿ ಮಾತುಗಳನ್ನು ಹೇಳುತ್ತಿದ್ದೆಯೇ ಹೊರತು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ದೂರಿದರು.
ಖಾಸಗಿ ಆಸ್ಪತ್ರೆ ವಶಕ್ಕೆ ಪಡೆಯಿರಿ: ಕೋವಿಡ್ ತುರ್ತು ಪರಿಸ್ಥಿತಿ ಘೋಷಿಸಿ ಕೂಡಲೇ ತಾತ್ಕಾಲಿಕವಾಗಿ ಖಾಸಗಿ ಆಸ್ಪತ್ರೆಗಳನ್ನು ವಶಕ್ಕೆ ಪಡೆದು ಕೋವಿಡ್ ತಡೆಗೆ ಬಳಸಿಕೊಳ್ಳಬೇಕು. ಎಲ್ಲ ಆಸ್ಪತ್ರೆಗಳಲ್ಲಿ ಶೇ.50 ರಷ್ಟು ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿಡಬೇಕು. ಈ ಮೂಲಕ ಸುಲಿಗೆ ತಡೆಯಲು ಮುಂದಾಗಬೇಕು. ಮೊದಲನೇ ಅಲೆಯಲ್ಲಿ ಗಂಭೀರ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ಪರಿಸ್ಥಿತಿ ಕೈ ಮೀರಿತ್ತಾದರೂ, ರಾಜ್ಯ ಸರ್ಕಾರ ಈಗಲೂ ಅದೇ ರಾಗ ಹಾಡುತ್ತಿದೆ ಎಂದು ವ್ಯಂಗ್ಯವಾಡಿದರು.
ಕೋವಿಡ್ ನಿಯಂತ್ರಿಸುವ ಲಸಿಕೆಯನ್ನು ಪಡೆದ 28 ದಿನಗಳ ಬಳಿಕ ಎರಡನೇ ಡೋಸ್ ನೀಡಬೇಕು. ನಂತರ ಮೂರು ವಾರಗಳ ಬಳಿಕ 3ನೇ ಡೋಸ್ ಪಡೆಯಬೇಕು. ಆದರೆ, ಇದೀಗ ಎರಡನೇ ಡೋಸ್ ನೀಡುವ ಅವ ಯನ್ನು ಮತ್ತಷ್ಟು ದೀರ್ಘಗೊಳಿಸಲಾಗುತ್ತಿದೆ. 30,35 ದಿನಗಳವರೆಗೆ ನೀಡುತ್ತಿಲ್ಲ. ಹಾಗಾಗಿ ಅವ ಧಿಯನ್ನು ದೀರ್ಘಗೊಳಿಸದೇ ನಿಗದಿತ ಅವಧಿಯೊಳಗೆ ನೀಡಬೇಕು. ಲಸಿಕೆ ಕೊರತೆಯಿಂದ ಈ ರೀತಿ ಆಗುತ್ತಿದೆ. ಸಮರ್ಪಕವಾಗಿ ಅಗತ್ಯ ಲಸಿಕೆ ಪೂರೈಸಬೇಕು. ಕೈಗಾರಿಕೆಗಳು ಉತ್ಪಾದನೆ ನಿಲ್ಲಿಸಿ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಬೇಕು. ಅಗತ್ಯ ಸೇವೆಯಲ್ಲಿಯೂ ಶೇ.50ರಷ್ಟು ಸಿಬ್ಬಂದಿಯನ್ನು ಕೋವಿಡ್ ಸುರಕ್ಷತಾ ಕ್ರಮದೊಂದಿಗೆ ಬಳಸಬೇಕು. ಕಾರ್ಮಿಕರಿಗೆ ನರೇಗಾ ಉದ್ಯೋಗ ನೀಡಬೇಕು. ರಾಜ್ಯ ಸರ್ಕಾರ ಬಾಯಿ ಪ್ರಚಾರದ ಮಾತುಗಳನ್ನು ಬಿಡಬೇಕು ಎಂದು ಟೀಕಿಸಿದರು. ಕೋವಿಡ್ ಸಂದಭರ್ದಲ್ಲಿ ಎರಡೂ ಸರಕಾರಗಳು ಜನರನ್ನು ಲೂಟಿ ಮಾಡುತ್ತಿವೆ. ಕಾರ್ಪೋರೆಟ್ ಶಕ್ತಿಗಳಿಗೆ ಅನುಕೂಲ ಮಾಡಲು ಕಾಯಿದೆಗಳನ್ನು ಜಾರಿಗೆ ತಂದರು.
ಕೋವಿಡ್ ತಡೆಯಲು ರೈತರು ಹೋರಾಟದಿಂದ ಹಿಂದೆ ಸರಿಯುವಂತೆ ಮಾಡಲು ಕೃಷಿ ಕಾಯಿದೆಗಳನ್ನು ತಾತ್ಕಾಲಿಕವಾಗಿ ಹಿಂಪಡೆಯಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಿ ಖರೀದಿಸಬೇಕು. ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ಎಲ್ಲ ಕುಟುಂಬಗಳ ಸಾಲಗಳನ್ನು ಕೂಡಲೇ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಸತ್ಯಬಾಬು, ಚಂದ್ರಕುಮಾರಿ ಇದ್ದರು.