ರವಿಕುಮಾರ್.ಎಂ.
ಕೊಟ್ಟೂರು: ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದ್ದು, ಬೆಲೆ ಕುಸಿತದಿಂದ ಇದೀಗ ಹಾಕಿದ್ದ ಬಂಡವಾಳವೂ ಕೈಗೆಟುಕುತ್ತಿಲ್ಲ. ಮತ್ತೂಂದೆಡೆ ಬಿಸಿಲಿನ ಪ್ರಮಾಣ ಅಧಿಕವಾಗಿದ್ದರಿಂದ ಟೊಮೆಟೊ ಬೆಳೆಗೆ ಕೀಟಬಾಧೆ ಹೆಚ್ಚಿದೆ. ಇದರಿಂದ ಸಾಕಷ್ಟು ಟೊಮೆಟೊ ಬೆಳೆ ನಾಶವಾಗಿ ನಿರೀಕ್ಷಿತ ಪ್ರಮಾಣದ ಫಸಲು ಬಾರದ ಕಾರಣ ರೈತರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.
ಕಳೆದ ವರ್ಷ ಮಾರ್ಚ್ ಮತ್ತು ಮೇ ತಿಂಗಳಲ್ಲಿ ಬೆಲೆ ಹೆಚ್ಚಿತ್ತು. ಆದರೆ ಈ ವರ್ಷಪೂರ್ತಿ ದರ ಕುಸಿತವಾಗಿದೆ. ಬೆಲೆ ಕುಸಿತದಿಂದಾಗಿ ಕೊಯ್ಯಲು ಮತ್ತು ಸಾಗಣೆಗೆ ಮಾಡಿದ ವೆಚ್ಚ ಕೂಡ ರೈತರಿಗೆ ಸಿಗುತ್ತಿಲ್ಲ. ಹೀಗಾಗಿ ಹಲವು ರೈತರು ಟೊಮೆಟೊ ಕೊಯ್ಯದೆ ಗಿಡದಲ್ಲೇ ಬಿಟ್ಟಿದ್ದಾರೆ. ಮತ್ತೆ ಕೆಲವರು ನಾಶಪಡಿಸುತ್ತಿದ್ದಾರೆ.
ಟೊಮೆಟೊ ಬೆಳೆಯಲು ರೈತರು ನಾನಾ ಬಗೆಯ ಸರ್ಕಸ್ ಮಾಡಬೇಕು. ಹೀಗಾಗಿ ಖರ್ಚು ಹೆಚ್ಚು. ಟೊಮೆಟೊ ಕೀಳುವ ಕಾರ್ಮಿಕರಿಗೆ ದಿನದ ಕೂಲಿಯೂ ಹೆಚ್ಚು. ಇದೀಗ ಟೊಮೆಟೊ ಧಾರಣೆ ಹಾಕಿದ್ದ ಬಂಡವಾಳಕ್ಕೂ ಸಾಕಾಗುತ್ತಿಲ್ಲ ಎನ್ನುತ್ತಿದ್ದಾರೆ ರೈತರು. ಈ ರೀತಿಯಾದರೆ ನಾವು ಬದುಕುವುದಾದರೂ ಹೇಗೆ. ಬೇರೆ ಜಿಲ್ಲೆಗೆ ಹೋಲಿಸಿದರೆ ಕೊಟ್ಟೂರು ಮತ್ತು ಹರಪನಹಳ್ಳಿ ತಾಲೂಕಲ್ಲಿ 8,800 ಹೆಕ್ಟೇರ್ ಟೊಮೆಟೊ ಬೆಳೆಯಲಾಗುತ್ತಿದೆ.
ಸಾಮಾನ್ಯವಾಗಿ ಬೇಸಿಗೆ ಆರಂಭ ಮುನ್ನವೇ ಮಾರ್ಚ್ ತಿಂಗಳಿಂದ ಜೂನ್ ಅಂತ್ಯದವರೆಗೆ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಬೆಳೆ ಬರುತ್ತದೆ. ಆದರೆ ಈ ವರ್ಷವೂ ಬೆಲೆ ಇಲ್ಲದೇ ಕಷ್ಟವಾಗಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.