ಹೊಸಪೇಟೆ: ಯುಗಾದಿ ಅಮಾವಾಸ್ಯೆ ಅಂಗವಾಗಿ ಐತಿಹಾಸಿಕ ಹಂಪಿ ಶ್ರೀ ವಿರೂಪಾಕ್ಷೇಶ್ವರನಿಗೆ ಸೋಮವಾರ ವಿಶೇಷ ಪೂಜೆ ನೆರವೇರಿಸಲಾಯಿತು. ಶ್ರೀವಿರೂಪಾಕ್ಷೇಶ್ವರ ಸ್ವಾಮಿ ಪ್ರತಿಮೆಗೆ ಅಭಿಷೇಕ, ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಲಾಯಿತು.
ಯುಗಾದಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ನಸುಕಿನಲ್ಲಿ ಹಂಪಿಗೆ ಆಗಮಿಸಿದ್ದ ಭಕ್ತರು ತುಂಗಭದ್ರಾ ನದಿಯಲ್ಲಿ ಸ್ನಾನ-ಸಂಧ್ಯಾವಂದನೆ ಮುಗಿಸಿ ನಂತರ ಸರದಿ ಸಾಲಿನಲ್ಲಿ ದೇವರ ದರ್ಶನ ಪಡೆದರು.
ಹೂ-ಹಣ್ಣು-ಕಾಣಿಕೆ ಸಲ್ಲಿಸಿ ಭಕ್ತಿ ಮೆರೆದರು. ನಂತರ ಪಂಪಾಂಭಿಕೆ, ಭುವನೇಶ್ವರಿ ದೇವಿ, ಗುಲಗುಂಜಿ ಮಹಾದೇವ, ವೆಂಕಟೇಶ್ವರ ಸೇರಿದಂತೆ ಇತರೆ ದೇವರ ದರ್ಶನ ಪಡೆದರು.
ಸುಡುಬಿಸಿಲಿನಲ್ಲಿಯೂ ಹಂಪಿ ಸುತ್ತಾಡಿದ ಭಕ್ತರು, ಸಾಸವಿಕಾಳು ಗಣಪತಿ, ಕಡಲೆಕಾಳು ಗಣಪತಿ, ಕೃಷ್ಣ ದೇವಸ್ಥಾನ, ಯಂತ್ರೋದ್ಧಾರ ಆಂಜನೇಯ, ಚಕ್ರತೀರ್ಥ ಕೊದಂಡರಾಮ ಸ್ವಾಮಿ, ಉದ್ಧಾನ ವೀರಭದ್ರ, ಬಡವಿ ಲಿಂಗ, ಲಕೀÒ$¾ನರಸಿಂಹ, ನೆಲಮಟ್ಟದ ಶಿವಾಲಯ ದೇವಾಲಯ, ಹಜಾರರಾಮ ದೇವಾಲಯ, ಮಹಾನವಮಿ ದಿಬ್ಬ, ಪುಷ್ಕರಣಿ, ರಾಣಿ ಸ್ನಾನಗೃಹ, ಕಮಲ ಮಹಲ್, ಗಜಶಾಲೆ, ವಿಜಯವಿಠಲ ದೇವಾಲಯವನ್ನು ವೀಕ್ಷಣೆ ಮಾಡಿದರು. ಆಂಧ್ರ, ತೆಲಂಗಾಣ, ಬಳ್ಳಾರಿ, ಶಿವಮೊಗ್ಗ, ದಾವಣಗೆರೆ, ರಾಯಚೂರು, ಕೊಪ್ಪಳ ಜಿಲ್ಲೆಗಳಿಂದ ಭಕ್ತರು ಹಂಪಿಗೆ ಆಗಮಿಸಿದ್ದರು.
ಬೆಂಗಳೂರು ಯಲಹಂಕ ಶಾಸಕ ಹಾಗೂ ಬೃಹತ್ ಬೆಂಗಳೂರು ಅಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಎಸ್.ಆರ್. ವಿಶ್ವನಾಥ ಹಂಪಿ ಭೇಟಿ ನೀಡಿ ವಿರೂಪಾಕ್ಷೇಶ್ವರ ಸ್ವಾಮಿ ದರ್ಶನ ಪಡೆದರು.