ಆರ್.ಬಸವರೆಡ್ಡಿ ಕರೂರು
ಸಿರುಗುಪ್ಪ: ತಾಲೂಕಿನ ಸಾವಿರಾರು ರೈತರ ಜೀವನಾಡಿಯಾಗಿರುವ ವೇದಾವತಿ ಹಗರಿ ನದಿಯು ಬೇಸಿಗೆಗೆ ಮುನ್ನವೇ ಬತ್ತಿಹೋಗಿರುವುದು ಈ ಭಾಗದ ಜನ ಜಾನುವಾರುಗಳು ನದಿ ನೀರನ್ನೇ ನಂಬಿ ಜೀವನ ಮಾಡುತ್ತಿದ್ದು ನದಿ ಬತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಕಳೆದ ಕೆಲವು ವರ್ಷಗಳಿಂದ ನದಿಯಲ್ಲಿ ಮರಳು ಗಣಿಗಾರಿಕೆ ಮಾಡುತ್ತಿರುವುದರಿಂದ ಬೇಸಿಗೆಯಲ್ಲಿ ನೀರು ಬತ್ತಲು ಪ್ರಮುಖ ಕಾರಣವಾಗಿದೆ. ತಾಲೂಕಿನ ತಾಳೂರು, ಊಳೂರು, ಉತ್ತನೂರು, ಮಾಟಸೂಗೂರು, ಕೂರಿಗನೂರು, ಬೂದುಗುಪ್ಪ, ಮೈಲಾಪುರ, ಮೈಲಾಪುರ ಕ್ಯಾಂಪ್, ಕೆ.ಬೆಳಗಲ್ಲು, ಮುದೇನೂರು, ಹೀರೇಹಾಳು, ಕೆ. ಸೂಗೂರು, ರಾರಾವಿ, ಕುರುವಳ್ಳಿ, ನಾಗಲಾಪುರ, ಕುಡುದರಹಾಳು, ಚಿಕ್ಕಬಳ್ಳಾರಿ, 25-ಹಳೇಕೋಟೆ, ಬಲಕುಂದಿ, ಉಪ್ಪಾರಹೊಸಳ್ಳಿ, ಪೊಪ್ಪನಹಾಳು, ಅರಳಿಗನೂರು, ಶಾಲಿಗನೂರು, ಕರ್ಚಿಗನೂರು ಮುಂತಾದ ಗ್ರಾಮಗಳ ರೈತರು, ತಮ್ಮ ಜಮೀನುಗಳಿಗೆ ವೇದಾವತಿ ಹಗರಿ ನದಿಯಿಂದ ನೀರನ್ನುಹರಿಸಿಕೊಂಡು ಹತ್ತಿ, ಮೆಣಸಿನಕಾಯಿ, ಭತ್ತ, ಮೆಕ್ಕೆಜೋಳ, ಬಿಳಿಜೋಳ ಮುಂತಾದ ಬೆಳೆಗಳನ್ನು ಬೇಸಿಗೆ ಹಂಗಾಮಿನಲ್ಲಿ ಬೆಳೆದಿದ್ದಾರೆ.
ಭತ್ತಕ್ಕೆ ಇನ್ನೂ 15ರಿಂದ 20 ದಿನ ನೀರು ಬೇಕಾಗುತ್ತದೆ. ಮೆಣಸಿನಕಾಯಿ ಬೆಳೆಗೂ ನೀರಿನ ಬೇಡಿಕೆ ಇದ್ದು, ನದಿಯಲ್ಲಿ ನೀರು ಬತ್ತಿರುವುದರಿಂದ ಕೆಲ ರೈತರು ನದಿಯಲ್ಲಿಯೇ ಹರಿಗಳನ್ನು ತೆಗೆದು ಸೆಲೆ ಬರುವ ನೀರನ್ನು ಸಂಗ್ರಹಿಸಿ ಹರಿಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ನದಿಯಲ್ಲಿ ರಿಂಗ್‌ಗಳನ್ನು ಅಳವಡಿಸಿ ಅಲ್ಲಿ ಸಂಗ್ರಹವಾಗುವ ನೀರನ್ನು ಪಂಪ್‌ಸೆಟ್‌ಗಳ ಮೂಲಕ ತಮ್ಮ ಬೆಳೆಗಳಿಗೆ ಹರಿಸಿಕೊಂಡು ಬೆಳೆ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ವೇದಾವತಿ ಹಗರಿ ನದಿಯ ದಂಡೆಯಲ್ಲಿರುವ ಗ್ರಾಮಗಳ ಜನ ಮತ್ತು ಜಾನುವಾರುಗಳು ನದಿ ನೀರನ್ನ ಆಶ್ರಯಿಸಿದ್ದಾರೆ.
ನದಿಯಲ್ಲಿ ನೀರು ಇಲ್ಲದಿರುವುದು ಜನ ಮತ್ತು ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗಿದೆ. ನದಿ ದಂಡೆಯ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಕೆರೆಗಳನ್ನು ನಿರ್ಮಿಸಲಾಗಿದೆ. ಆದರೆ ಕೆರೆಗಳಿಂದ ಕುಡಿಯಲು ಮಾತ್ರ ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತದೆ. ಇದರಿಂದಾಗಿ ಬಳಕೆ ನೀರಿಗಾಗಿ ಜನರು ನದಿಯನ್ನೇ ನಂಬಿಕೊಂಡಿದ್ದಾರೆ. ನದಿ ದಂಡೆಯ ಗ್ರಾಮಗಳ ಜಾನುವಾರುಗಳಿಗೆ ನದಿ ನೀರೇ ಮೂಲಾಧಾರವಾಗಿದ್ದು, ಬೇಸಿಗೆಯಲ್ಲಿಯೂ ಜಾನುವಾರುಗಳು, ಸಾವಿರಾರು ಜಿಂಕೆಗಳಿದ್ದು ಇವುಗಳು ಕೂಡ ಹಿಂಡುಹಿಂಡಾಗಿ ತೆರಳಿ ನೀರು ಕುಡಿಯಲು ನದಿಗೆ ಬರುವುದು ಸಾಮಾನ್ಯವಾಗಿದೆ.
ಸುಮಾರು 15ವರ್ಷಗಳ ಹಿಂದೆ ನದಿಯು ಬೇಸಿಗೆಯಲ್ಲಿಯೂ ಬತ್ತದೆ ನೀರು ಹರಿಯುತ್ತಿತ್ತು. ಆದರೆ ಕಳೆದ 14 ವರ್ಷಗಳಿಂದ ವೇದಾವತಿ ಹಗರಿ ನದಿಯಲ್ಲಿ ಮರಳು ಗಣಿಗಾರಿಕೆ ಮಾಡಲು ಅವಕಾಶ ಮಾಡಿಕೊಟ್ಟಿರುವುದರಿಂದ ಬೇಸಿಗೆಗೆ ಮುನ್ನವೇ ನದಿಯು ಬತ್ತಲು ಕಾರಣವಾಗಿದೆ ಎಂದು ನದಿ ದಂಡೆಯ ಗ್ರಾಮಸ್ಥರು ಆರೋಪಿಸಿದ್ದಾರೆ.