ಬಳ್ಳಾರಿ: ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೆಸ್‌ಆರ್‌ಟಿಸಿ ನೌಕರರು ಹಮ್ಮಿಕೊಂಡಿರುವ ಮುಷ್ಕರ ನಾಲ್ಕನೇ ದಿನ ಶನಿವಾರವೂ ಮುಂದುವರೆಯಿತು. ಆದರೆ, ಕೆಲ ಸಿಬ್ಬಂದಿಗಳು ಸ್ವಯಂ ಪ್ರೇರಣೆಯಿಂದ ಬಂದ ಹಿನ್ನೆಲೆಯಲ್ಲಿ ಬೆರಳೆಣಿಕೆಯಷ್ಟು ಕೆಸ್‌ಆರ್‌ಟಿಸಿ ಬಸ್ ಗಳು ಸಂಚಾರ ಆರಂಭಿಸಿದ್ದು, ಜತೆಗೆ ಖಾಸಗಿ ಬಸ್ ಗಳ ಸಂಚಾರವು ಸಹ ಮುಂದುವರೆದಿತ್ತು. ಮುಷ್ಕರದ ನಾಲ್ಕನೇ ದಿನವಾದ ಶನಿವಾರ ಬಳ್ಳಾರಿ ವಿಭಾಗದಿಂದ ಮುಷ್ಕರನಿರತ 52 ಚಾಲಕ, ನಿರ್ವಾಹಕರು ಸ್ವಯಂ ಪ್ರೇರಣೆಯಿಂದ ಕರ್ತವ್ಯಕ್ಕೆ ಹಾಜರಾದ ಹಿನ್ನೆಲೆಯಲ್ಲಿ 26 ಕೆಸ್‌ಆರ್‌ಟಿಸಿ ಬಸ್ ಗಳು ಸಂಚಾರ ಆರಂಭಿಸಿದವು.
ಹೊಸಪೇಟೆ, ಗಂಗಾವತಿ, ಸಿರುಗುಪ್ಪ ತಾಲೂಕುಗಳು ಸೇರಿ ಇನ್ನಿತರೆ ಊರುಗಳಿಗೆ ಸಂಚರಿಸಿದ್ದು, ಸುಮಾರು 60 ಟ್ರಿಪ್ ಸಂಚರಿಸಿವೆ. ಇವುಗಳ ಜತೆಗೆ ನಾಲ್ಕನೇ ದಿನವು 40 ಖಾಸಗಿ ಬಸ್, 25 ಮ್ಯಾಕ್ಸಿಕ್ಯಾಬ್, ಟ್ರಾಕ್ಸ್ ವಾಹನಗಳು ಸೇರಿ ಒಟ್ಟು 170 ಟ್ರಿಪ್‌ಗ್ಳು ಸಂಚರಿಸಿ, ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿದೆ.
ಪ್ರಯಾಣಿಕರ ಕೊರತೆ; ಹೆಚ್ಚಿದ ದರ: ಕೆಸ್‌ಆರ್ ಟಿಸಿ ನೌಕರರು ಮುಷ್ಕರ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಭಾಗಶಃ ಕೆಸ್‌ಆರ್‌ಟಿಸಿ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿವೆ. ಈ ಹಿನ್ನೆಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರಯಾಣಿಕರು ನಿಲ್ದಾಣಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಕೆಸ್‌ಆರ್ ಟಿಸಿ ಸೇರಿ ಖಾಸಗಿ ಬಸ್‌ಗಳಿಗೂ ಪ್ರಯಾಣಿಕರ ಕೊರತೆ ಕಾಡುತ್ತಿದೆ. ಪ್ರಯಾಣಿಕರ ಲಭ್ಯಯನ್ನು ಆಧರಿಸಿ ಬಸ್‌ಗಳನ್ನು ಓಡಿಸುತ್ತಿರುವುದರಿಂದ ಯಾವುದಾದರೂ ಬಸ್‌ನಲ್ಲಿ ಒಂದು ಊರಿಗೆ ತೆರಳುವ ಪ್ರಯಾಣಿಕರನ್ನು ಹತ್ತಿಸಿದಾಗ, ಬಸ್ ಭರ್ತಿಯಾಗುವವರೆಗೂ ಬಸ್ ನಿಲ್ದಾಣ ಬಿಡುತ್ತಿಲ್ಲ. ಇದು ಪ್ರಯಾಣಿಕರಿಗೂ ಒಂದು ರೀತಿಯಲ್ಲಿ ಕಿರಿಕಿರಿ ಉಂಟಾಗಿರುವುದು ಒಂದೆಡೆಯಾದರೆ, ಖಾಸಗಿ ಮತ್ತು ಕೆಸ್‌ಆರ್‌ಟಿಸಿ ಚಾಲಕ, ನಿರ್ವಾಹಕರಿಗೆ ಬಸ್ ಭರ್ತಿ ಮಾಡಿಕೊಳ್ಳುವುದೇ ಹರಸಾಹಸವಾಗಿದೆ. ಹೀಗಾಗಿ ಬಸ್‌ನಲ್ಲಿ ಹತ್ತಿದ್ದ ಪ್ರಯಾಣಿಕರಿಂದಲೇ ನಿಗದಿತ ಟಿಕೆಟ್ ದರಕ್ಕಿಂದ ತುಸು ಹೆಚ್ಚು ಹಣ ಪಡೆಯಲಾಗುತ್ತಿದೆ. ಈ ಹೆಚ್ಚುವರಿ ಹಣ ಒಬ್ಬ ಪ್ರಯಾಣಿಕರಿಗೆ ಹೆಚ್ಚು ಹೊರೆಯಾಗದಿದ್ದರೂ ಕುಟುಂಬ ಸಮೇತ ಸಂಚರಿಸುವ ಪ್ರಯಾಣಿಕರಿಗೆ ಹೆಚ್ಚು ಹೊರೆಯಾಗಲಿದೆ. ಹೊರಗೆ ನಿಗದಿತ ದರ ಹೇಳುವ ಖಾಸಗಿ ಬಸ್‌ಗಳ ಸಿಬ್ಬಂದಿಗಳು ಬಸ್ಸಿನೊಳಗೆ ಹೋದ ಬಳಿಕ ಹೆಚ್ಚಿನ ದರ ಹೇಳಿ ಪಡೆಯುತ್ತಿದ್ದಾರೆ ಎಂದು ಕೆಲವೊಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದರು.
4 ದಿನಗಳಲ್ಲಿ 1 ಕೋಟಿ ನಷ್ಟ: ಕೆಸ್‌ಆರ್‌ಟಿಸಿ ನೌಕರರ ನಾಲ್ಕು ದಿನಗಳ ಮುಷ್ಕರದಿಂದ ಕರ್ನಾಟಕ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ಬಳ್ಳಾರಿ ವಿಭಾಗಕ್ಕೆ ಸರಿ ಸುಮಾರು 1 ಕೋಟಿ ರೂ.ಗೂ ಹೆಚ್ಚು ನಷ್ಟವಾಗಿದೆ. ಕೆಸ್‌ಆರ್‌ಟಿಸಿ ಬಳ್ಳಾರಿ ವಿಭಾಗದಿಂದ ಸಾಮಾನ್ಯ ದಿನಗಳಲ್ಲಿ ಪ್ರತಿದಿನ 350 ಬಸ್‌ಗಳು ಸಂಚರಿಸುತ್ತವೆ. ಪ್ರತಿದಿನ ಸರಾಸರಿ ಒಂದು ಲಕ್ಷ ಪ್ರಯಾಣಿಕರು ಕೆಸ್ ಆರ್‌ಟಿಸಿ ಬಸ್‌ಗಳಲ್ಲಿ ಸಂಚರಿಸುತ್ತಾರೆ. ಈಗ ಮದುವೆ ಸೀಜನ್ ಆಗಿರುವುದರಿಂದ ಪ್ರಯಾಣಿಕರ ಪ್ರಮಾಣ ಒಂದಷ್ಟು ಹೆಚ್ಚಿರುತ್ತಿತ್ತು. ಪ್ರತಿದಿನ ಸರಾಸರಿ 35 ರಿಂದ 38 ಲಕ್ಷ ರೂ. ಆದಾಯ ಬರುತ್ತಿತ್ತು. ಆದರೆ, ಕೆಸ್ ಆರ್‌ಟಿಸಿ ನೌಕರರ ಮುಷ್ಕರದಿಂದಾಗಿ ಕಳೆದ ನಾಲ್ಕು ದಿನಗಳಿಂದ ಕೆಸ್‌ಆರ್‌ಟಿಸಿ ಬಸ್‌ಗಳು ಭಾಗಶಃ ಸಂಚಾರ ಸ್ಥಗಿತಗೊಳಿಸಿರುವುದರಿಂದ ಪ್ರತಿದಿನ ಸರಾಸರಿ ಅಂದಾಜು 32 ಲಕ್ಷ ರೂ. ನಷ್ಟವಾಗಿದ್ದು, ನಾಲ್ಕು ದಿನಗಳಲ್ಲಿ ಸುಮಾರು 1.20 ಕೋಟಿ ರೂ. ಗಳಷ್ಟು ನಷ್ಟವಾಗಿರಬಹುದು ಎಂದು ಕೆಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿ ಕಾರಿ ರಾಜಗೋಪಾಲ್ ಪುರಾಣಿಕ್ ಅವರು ಉದಯವಾಣಿಗೆ ತಿಳಿಸಿದರು.