ಹೊಸಪೇಟೆ: ಸಾರಿಗೆ ನಿಗಮಗಳ ನೌಕರರನ್ನು ಸರಕಾರಿ ನೌಕರರೆಂದು ಪರಿಗಣಿಸುವುದು ಸೇರಿದಂತೆ 6ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸಾರಿಗೆ ನೌಕರರು ಹಮ್ಮಿಕೊಂಡಿರುವ ಮುಷ್ಕರಕ್ಕೆ ಸಾರಿಗೆ ನೌಕರರು ಬುಧವಾರ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಸಾರಿಗೆ ನೌಕರರ ಮುಷ್ಕರಕ್ಕೆ ಪರ್ಯಾಯವಾಗಿ ಬಸ್‌ನಿಲ್ದಾಣದಿಂದಲೇ ಖಾಸಗಿ ಬಸ್ ಹಾಗೂ ಟ್ರಾಕ್ಸ್, ಟಂಟಂ ವಾಹನ ಓಡಿಸಲಾಯಿತು. ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಡಿದರು. ಈ ಹಿನ್ನೆಲೆಯಲ್ಲಿ ಆರ್‌ಟಿಒ ಇಲಾಖೆ ನೀಡಿದ ಒಂದು ತಿಂಗಳ ತಾತ್ಕಾಲಿಕ ಪರ್ಮಿಟ್ ಆಧಾರದ ಮೇಲೆ ಖಾಸಗಿ ಬಸ್ ಹಾಗೂ ವಾಹನಗಳನ್ನು ಕೆಲ ರೂಟ್‌ಗಳಿಗೆ ಓಡಿಸಲಾಯಿತು. ನಿಲ್ದಾಣದಿಂದಲೇ ಖಾಸಗಿ ವಾಹನಗಳು ಕಾರ್ಯಾಚರಿಸಿದವು. ಇಲ್ಲಿನ ಸಾರಿಗೆ ವಿಭಾಗದಲ್ಲಿ 1290 ಡ್ರೈವರ್, ಕಂಡಕ್ಟರ್‌ಗಳಿದ್ದು 280 ಸಿಬ್ಬಂದಿ ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದರು.
ಬರೋಬ್ಬರಿ 1010 ಸಿಬ್ಬಂದಿ ಗೈರಾಗಿದ್ದರು. ಹಾಜರಾಗಿರುವ ಸಿಬ್ಬಂದಿಗಳಲ್ಲಿ 230 ಸಿಬ್ಬಂದಿ ಡ್ನೂಟಿ ಬುಧವಾರ ರಾತ್ರಿ ಮುಗಿಯಲಿದೆ. ಬೇರೆ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಬೇಕಿದೆ. ಹೀಗಾಗಿ ಈಗ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಇದೊಂದು ಹೊಸ ತಲೆನೋವಾಗಿ ಪರಿಣಮಿಸಿದೆ. ಇಲ್ಲಿನ ಸಾರಿಗೆ ವಿಭಾಗದಡಿ 452 ಬಸ್‌ಗಳಿದ್ದು, ಬರೀ 139 ಬಸ್‌ಗಳು ಮಾತ್ರ ಈ ದಿನ ಸಂಚರಿಸಿವೆ.
31 ಖಾಸಗಿ ಬಸ್ ಮತ್ತು 170 ಟ್ರಾಕ್ಸ್ ಮತ್ತು ಟಂಟಂ ವಾಹನಗಳು ಚಲಿಸಿವೆ. ಬಳ್ಳಾರಿ, ಕೊಪ್ಪಳ, ಚಿತ್ರದುರ್ಗ, ಹಗರಿಬೊಮ್ಮನಹಳ್ಳಿ, ಹಂಪಿಗೆ ಖಾಸಗಿ ಹಾಗೂ ಸರಕಾರಿ ಬಸ್‌ಗಳು ಚಲಿಸಿದ್ದು, ಹಲವು ಕಡೆ ಬಸ್‌ಗಳಿಲ್ಲದೇ ಪ್ರಯಾಣಿಕರು ಪರದಾಡಿದರು. ಇನ್ನೂ ಗ್ರಾಮೀಣ ಭಾಗಕ್ಕೆ ಬಸ್‌ಗಳೇ ಸಂಚರಿಸದ್ದರಿಂದ ಪ್ರಯಾಣಿಕರು ಪರದಾಡುವಂತಾಗಿತ್ತು. ಇಲ್ಲಿನ ಸಾರಿಗೆ ವಿಭಾಗ ನಿತ್ಯ 45ರಿಂದ 50 ಲಕ್ಷ ರು. ವರೆಗೆ ದಿನವಹಿ ವಹಿವಾಟು ನಡೆಸುತ್ತದೆ. ಆದರೆ, ಈ ದಿನ ಬಸ್‌ಗಳ ಸಂಚಾರದಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆ ಕಂಡ ಹಿನ್ನೆಲೆಯಲ್ಲಿ ಅಂದಾಜು 20 ಲಕ್ಷ ರು. ಹಾನಿಯಾಗಲಿದೆ ಎಂದು ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶೀನಯ್ಯ ತಿಳಿಸಿದರು.
ನಗರದ ಬಸ್‌ನಿಲ್ದಾಣಕ್ಕೆ ಸಹಾಯಕ ಆಯುಕ್ತ ಸಿದ್ದರಾಮೇಶ್ವರ ಭೇಟಿ ನೀಡಿ ಪರಿಶೀಲಿಸಿದರು. ಪ್ರಯಾಣಿಕರಿಂದ ಮಾಹಿತಿ ಪಡೆದರು. ಇಲ್ಲಿನ ಬಸ್ ನಿಲ್ದಾಣದಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು. ಮುಷ್ಕರದ ನಡುವೆ ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿಗಳನ್ನು ಸಾರಿಗೆ ವಿಭಾಗಾಧಿಕಾರಿ ಜಿ. ಶೀನಯ್ಯ ಅವರು ಹೂವಿನ ಹಾರ ಹಾಕಿ ಸನ್ಮಾನ ಮಾಡಿದರು. ಕೋವಿಡ್ ಹಿನ್ನೆಲೆಯಲ್ಲಿ ಸದ್ಯ ಈಶಾನ್ಯ ಸಾರಿಗೆ ಸಂಸ್ಥೆ ಸಂಕಷ್ಟದಲ್ಲಿದೆ. ನೌಕರರು ಮುಷ್ಕರ ಕೈಬಿಟ್ಟು ಕೆಲಸ ಮಾಡಬೇಕು ಎಂದು ಮನವಿ ಮಾಡಿಕೊಂಡರು.