Advertisement

ಭಾವೈಕ್ಯ ಪ್ರತೀಕ ಯಮನೂರು ಸ್ವಾಮಿ ಉರುಸ

05:38 PM Apr 03, 2021 | Team Udayavani |

ಹೂವಿನಹಡಗಲಿ: ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ಹಜರತ್‌ ರಾಜಾಬಾಗ್‌ ಸವಾರ್‌ ಉರುಸ ಪ್ರಾರಂಭವಾಗಿದೆ. ಯಮನೂರು ಸ್ವಾಮಿ ದರ್ಗಾದಿಂದ ಭವ್ಯ ಮೆರವಣಿಗೆ ಮೂಲಕವಾಗಿ ಪಟ್ಟಣದ ಹಳ್ಳದವರೆಗೂ ಮೆರವಣಿಗೆ ಜರುಗಿದ್ದು ಮಣ್ಣಿನ ಹೊಸದಾದ ಮಡಿಕೆಯಲ್ಲಿ ನೀರು ತರುವ ಮೂಲಕವಾಗಿ ಆ ನೀರಿನಲ್ಲಿ ಪವಾಡ ಪುರುಷ ಯುಮನೂರು ಸ್ವಾಮಿ ದರ್ಗಾದಲ್ಲಿ ದೀಪ ಬೆಳಗಿಸಲಾಯಿತು. ನಂತರ ಶುಕ್ರವಾರ ಬೆಳಗ್ಗೆಯಿಂದ ಯಮನೂರು ಸ್ವಾಮಿ ದರ್ಗಾಕ್ಕೆ ಸಕ್ಕರೆ ಓದಿಕೆ ಮಾಡುವುದು ಸಂಪ್ರದಾಯವಾಗಿದ್ದು ಈ ಸಕ್ಕರೆ ಓದಿಕೆಯಲ್ಲಿ ಹಿಂದೂಗಳು, ಮುಸ್ಲಿಂ ಜನಾಂಗದವರು ಯಾವುದೇ ಜಾತಿ ಬೇಧವಿಲ್ಲದೆ ಪರಸ್ಪರರು ಸಕ್ಕರೆ ಓದಿಕೆ ಮಾಡಿಸುವುದು ವಿಶೇಷವಾಗಿದೆ.

Advertisement

ಸಕ್ಕರೆ ಓದಿಕೆ ಸಮಯದಲ್ಲಿ ಯಮನೂರು ಸ್ವಾಮಿಗೆ ತಮ್ಮ ವಿವಿಧ ಕಷ್ಟಗಳನ್ನು ಹಾಗೂ ಸಮಸ್ಯೆಗಳನ್ನು ಪರಿಹಾರ ಮಾಡುವ ಹರಕೆ ಹೊತ್ತುಕೊಂಡು ಈ ಹರಕೆಯನ್ನು ಉರುಸ ಸಮಯದಲ್ಲಿ ತೀರಿಸುವುದು ಸಂಪ್ರದಾಯವಾಗಿದೆ. ಕೊಬ್ಬರಿ ಸುಡುವುದು, ಬೆಳ್ಳಿ ಕುದುರೆ ನೀಡುವುದು, ದೀಡ್‌ ನಮಸ್ಕಾರ ಹಾಕುವುದು ಹೀಗೆ ಹತ್ತು ಹಲವಾರು ಬಗೆಯಲ್ಲಿ ಭಕ್ತರು ಹರಕೆ ತೀರಿಸುತ್ತಾರೆ.

ಐತಿಹಾಸಿಕ ಸಂಪ್ರದಾಯ: ಹಡಗಲಿ ರಾಜ್‌ಬಾಗ್‌ ಸವಾರ್‌ ಉರುಸ (ಯಮನೂರು ಸ್ವಾಮಿ) ಗೆ ತನ್ನದೇ ಆದ ಐತಿಹಾಸಿಕ ಪರಂಪರೆ ಇದೆ. ಮುಸ್ಲಿಂ ಜನಾಂಗದ ಧರ್ಮಗುರು ಹಜರತ್‌ ಸೈಯದ್‌ ತಾಜುದ್ದಿನ್‌ ಬಾಬಾ, ಪವಾಡ ಪುರುಷ ಧರ್ಮ ಪ್ರಚಾರಕ್ಕಾಗಿ ನಾಡಿನ ವಿವಿಧ ಕಡೆಯಲ್ಲಿ ಹುಲಿ ಮೇಲೆ ಸಂಚರಿಸಿ ಹೂವಿನಹಡಗಲಿಗೆ ಆಗಮಿಸುತ್ತಾರೆ.

ಇದರ ಕುರುಹಾಗಿ ಇಲ್ಲೊಂದು ದರ್ಗಾ ಪ್ರಾರಂಭಿಸುತ್ತಾರೆ. ಅವರ ಒಂದು ನೆನಪಿಗಾಗಿ ಅಂದಿನಿಂದ ಈ ತನಕ ಇಲ್ಲಿ ಆ ದಿವಸದಂದು ಯಮನೂರು ಸ್ವಾಮಿ ಉರುಸ ಆಚರಣೆ ಮಾಡುತ್ತ ಬಂದಿದ್ದಾರೆ. ಸುಮಾರು 8-10 ದಿನಗಳ ಕಾಲ ವಿವಿಧ ರೀತಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿದ್ದು ತಾಲೂಕು ಒಳಗೊಂಡಂತೆ ಸುತ್ತಮುತ್ತಲ ತಾಲೂಕಿನ ಜನತೆಯು ಸಹ ಹಜರತ್‌ ರಾಜಾಬಾಗ್‌ ಸವಾರ್‌ ಉರುಸ(ಯಮನೂರು ಸ್ವಾಮಿ) ಗೆ ಆಗಮಿಸುತ್ತಿದ್ದು ಇದೊಂದು ಸೌಹಾರ್ದತೆಯ ಸಂಕೇತವಾಗಿದೆ.

ಸರಳ ಆಚರಣೆ: ಪ್ರತಿ ವರ್ಷವೂ ಯಮನೂರು ಸ್ವಾಮಿ ಉರುಸನ್ನು ಹಿಂದೂ-ಮುಸ್ಲಿಂ ಜನಾಂಗದವರು ಕೂಡಿಕೊಂಡು ಆತ್ಯಂತ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದರು. ಪಟ್ಟಣದಲ್ಲಿ ಸವಾಲ್‌ ಪದಗಳು, ರಸಮಂಜರಿ, ಸರ್ವಧರ್ಮ ಸಭೆಗಳು, ಟಗರಿನ ಕಾಳಗ, ಕುಸ್ತಿ ಪಂದ್ಯಗಳು ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳು ಜರುಗುತ್ತಿದ್ದು ಪಟ್ಟಣದಲ್ಲಿ ಹಬ್ಬದ ಸಂಭ್ರಮ ಮನೆ ಮಾಡುತ್ತಿತ್ತು. ಆದರೆ ಈ ಭಾರಿ ಮಹಾಮಾರಿ ಕೊರೊನಾ ಹಾವಳಿಯಿಂದಾಗಿ ಸರ್ಕಾದ ಆದೇಶದ ಮೇರೆಗೆ ಅತ್ಯಂತ ಸರಳವಾಗಿ ಧಾರ್ಮಿಕ ವಿಧಿವಿಧಾನಗಳನ್ನು ಮಾತ್ರ ಪೂರೈಕೆ ಮಾಡುವ ಮೂಲಕವಾಗಿ ಸರಳವಾದ ಉರುಸ ಆಚರಣೆ ಮಾಡಲಾಗುತ್ತಿದೆ.

Advertisement

-ವಿಶ್ವನಾಥ ಹಳ್ಳಿಗುಡಿ

Advertisement

Udayavani is now on Telegram. Click here to join our channel and stay updated with the latest news.

Next