Advertisement

ಹಾಸ್ಟೆಲ್‌ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

05:41 PM Feb 25, 2021 | Team Udayavani |

ಹರಪನಹಳ್ಳಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಬಿಸಿಎಂ ಹಾಸ್ಟೆಲ್‌ಗ‌ಳಿಗಾಗಿ ಒತ್ತಾಯಿಸಿ ಎಐಎಸ್‌ಎಫ್‌ ನೇತೃತ್ವದಲ್ಲಿ ತಾಲೂಕಿನ ಅರಸೀಕೆರೆ ಹೋಬಳಿಯಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

Advertisement

ಅರಸೀಕೆರೆ ಗ್ರಾಮದ ಸರಕಾರಿ ಆಸ್ಪತ್ರೆ ಮುಂಭಾಗದಿಂದ ಹೊರಟ ನೂರಾರು ಸಂಖ್ಯೆಯ ವಿದ್ಯಾರ್ಥಿಗಳ ಪ್ರತಿಭಟನಾ ಮೆರವಣಿಗೆ ಹರಪನಹಳ್ಳಿ ರಸ್ತೆಯ ಮೂಲಕ ಆಗಮಿಸಿ ಬಸ್‌ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನಂತರ
ಉಪತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು.

ಅರಸೀಕೆರೆ ಹೋಬಳಿಯು 11 ಗ್ರಾ.ಪಂಗಳನ್ನು ಒಳಗೊಂಡಿದ್ದು, ಬಡತನ ಕುಟುಂಬಗಳ ಸಾವಿರಾರು ವಿದ್ಯಾರ್ಥಿಗಳಿಗೆ ಸೂಕ್ತ ಸಾರಿಗೆ ವ್ಯವಸ್ಥೆಯೂ ಇಲ್ಲದೇ ಪರದಾಟ ನಡೆಸುತ್ತಿದ್ದಾರೆ. ಗ್ರಾಮದ 3 ಕಾಲೇಜುಗಳ ಹಾಗೂ ಒಂದು ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಕೇವಲ ಒಂದು ಸರಕಾರಿ ಬಾಲಕರ ಎಸ್ಸಿ-ಎಸ್ಟಿ ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯವಿದೆ. ಆದರೆ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್‌ ಸೌಲಭ್ಯವೇ ಇಲ್ಲವಾಗಿದೆ. ಹೀಗಾಗಿ ವಿದ್ಯಾರ್ಥಿನಿಯರು ಕಾಲೇಜಿಗೆ ಬರಲು ಬಸ್‌ ಸೌಲಭ್ಯವಿದೇ ಇತ್ತ ಹಾಸ್ಟೆಲ್‌ ಸೌಲಭ್ಯವಿಲ್ಲದೇ ಅಭ್ಯಾಸ ನಿಲ್ಲಿಸುವಂತಹ ಪರಿಸ್ಥಿತಿ ಇದೆ ಎಂದು ಕಿಡಿಕಾರಿದರು.

ಶ್ರೀಮಂತ ವರ್ಗದ ಪೋಷಕರು ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆ, ಪೇಯಿಂಗ್‌ ಗೆಸ್ಟ್‌ಗಳಲ್ಲಿ ಶಿಕ್ಷಣ ಕೊಡಿಸುತ್ತಿದ್ದಾರೆ. ಆದರೆ ಗ್ರಾಮೀಣ ಭಾಗದಲ್ಲಿನ ಬಡವರ್ಗದ ಪೋಷಕರಿಗೆ ಅದರಲ್ಲೂ ಪ್ರಸಕ್ತವಾಗಿ ಕೋವಿಡ್‌ ಆಕ್ರಮಣದಿಂದ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ. ದೇಶಕ್ಕೆ ಸ್ವಾತಂತ್ರ್ಯ ದೊರಕಿ 7 ದಶಕಗಳು ಗತಿಸಿದರೂ ಸಮರ್ಪಕವಾಗಿ ಶಿಕ್ಷಣ ಕಲಿಕೆಯ ಪೂರಕವಾದ ಸುಸಜ್ಜಿತ ವಿದ್ಯಾರ್ಥಿ ನಿಲಯಗಳನ್ನು ಕಲ್ಪಿಸದಿರುವುದು ದುರಂತದ ಸಂಗತಿಯಾಗಿದೆ. ಜನಪ್ರತಿನಿಧಿಗಳು,
ಅಧಿಕಾರಿಗಳು ವಿದ್ಯಾರ್ಥಿಗಳ ಸಮಸ್ಯೆಗಳು ಕಾಣುತ್ತಿದ್ದರೂ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅರಸೀಕೆರೆ ಹೋಬಳಿಯಲ್ಲಿ ಸುಸಜ್ಜಿತ ಬಾಲಕ ಹಾಗೂ ಬಾಲಕಿಯರ ಮೆಟ್ರಿಕ್‌ ಪೂರ್ವ ಮತ್ತು ಮೆಟ್ರಿಕ್‌ ನಂತರದ ಸುಸಜ್ಜಿತ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ
ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ವೇಳೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಆನಂದ ಡೊಳ್ಳಿನ ಹಾಗೂ ಬಿಸಿಎಂ ಇಲಾಖೆಯ ಬಿ.ಹೆಚ್‌. ಚಂದ್ರಪ್ಪ ಅವರು ಮನವಿ ಸ್ವೀಕರಿಸಿ ಸಮಸ್ಯೆಯನ್ನು ಮೇಲಧಿಕಾರಿಗಳ
ಗಮನಕ್ಕೆ ತಂದು ಹಾಸ್ಟೆಲ್‌ಗ‌ಳ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸಿಪಿಐ ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್‌, ಎಐಎಸ್‌ಎಫ್‌ನ ರಾಜ್ಯ ಮುಖಂಡರಾದ ಚಂದ್ರನಾಯ್ಕ, ಮಾದಿಹಳ್ಳಿ ಮಂಜುನಾಥ್‌, ಬಳಿಗನೂರು ಕೊಟ್ರೇಶ್‌, ಡಿಎಸ್‌ಎಸ್‌ ಮುಖಂಡರಾದ ಕಬ್ಬಳ್ಳಿ ಮೈಲಪ್ಪ, ಪುಣಬಗಟ್ಟಿ ಮಂಜಪ್ಪ, ಬೂದಿಹಾಳ್‌ ಶಿವರಾಜ್‌, ಪ್ರಗತಿಪರ ಸಂಘಟನೆಗಳ ಮುಖಂಡರಾದ ಕಬ್ಬಳ್ಳಿ ಬಸವರಾಜ್‌, ಎಐಎಸ್‌ಎಫ್‌ ತಾಲೂಕು ಮುಖಂಡ ದೊಡ್ಡಬಸಪ್ಪ, ಶಿವರಾಜ್‌, ಸಾವಿತ್ರಿ, ವಿದ್ಯಾಶ್ರೀ, ಪಲ್ಲವಿ ಮತ್ತಿತರರು ಭಾಗವಹಿಸಿದ್ದರು.

Advertisement

ಓದಿ : ಬಿಸಿನೀರಿನ ಬುಗ್ಗಿ ಸುತ್ತ ಅಭಿವೃದ್ಧಿಯ ಸುಗ್ಗಿ

 

Advertisement

Udayavani is now on Telegram. Click here to join our channel and stay updated with the latest news.

Next