ಬಳ್ಳಾರಿ: ಸಂಸ್ಕೃತಿಯನ್ನು ಉಳಿಸುವ ಹಳ್ಳಿಜನರ ಬದುಕಿನಲ್ಲಿ ಭಿನ್ನ ಸಂಸ್ಕೃತಿಗಳ ಆಚರಣೆ ಆಗರವೇ ಅಡಗಿದೆ ಎಂದು ವಿಮ್ಸ್ ಆಡಳಿತಾಧಿ ಕಾರಿ ಡಾ| ಎ.ಚನ್ನಪ್ಪ ಅಭಿಪ್ರಾಯ ಪಟ್ಟರು.
ನಗರದ ರೇಡಿಯೋ ಪಾರ್ಕ್‌ನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಪದವಿ ಕಾಲೇಜಿನಲ್ಲಿ ಜಿಲ್ಲಾ ಕಸಾಪ ವತಿಯಿಂದ ಏರ್ಪಡಿಸಲಾಗಿದ್ದ ಡಾ| ಸಂಪಿಗೆ ನಾಗರಾಜರವರ ವೇದಾವತಿ ತೀರದಲ್ಲಿ ಕಾದಂಬರಿ ಕುರಿತ ವಿಚಾರ ಸಂಕಿರಣ
ಉದ್ಘಾಟಿಸಿ ಮಾತನಾಡಿದರು.
ಬಹುಸಂಸ್ಕೃತಿಯ ಗ್ರಾಮೀಣ ಬದುಕಿನಿಂದ ವ್ಯಕ್ತಿಯ ವ್ಯಕ್ತಿತ್ವ ವಿಕಸನವಾಗುವುದು. ಗ್ರಾಮೀಣ ಬದುಕಿನ ಪಲ್ಲಟಗಳ ಆಧುನಿಕತೆಯ ವೇಗವು ಯಾವ ರೀತಿಯಲ್ಲಿ ಬದಲಾವಣೆಗೊಂಡು ಹಳ್ಳಿಗಳು ಸಂಘರ್ಷದ ಹಾದಿಯಲ್ಲಿವೆ ಎಂಬುದನ್ನು ಈ ಕೃತಿಯು ಕಟ್ಟಿಕೊಟ್ಟಿದೆ. ಈ ಕೃತಿಯ ಉದ್ದಕ್ಕೂ ಗಾಂಧಿತತ್ವದ ಬೆಳಕು ಕಂಡು ಬರುತ್ತದೆ. ಈ ಕೃತಿಯು ಒಂದು ಹಳ್ಳಿಯ ಬದುಕನ್ನಷ್ಟೇ ಅಲ್ಲ. ಇಂದಿನ ಗ್ರಾಮ ಭಾರತದ ಜನರ ಮನಸ್ಸಿನ ಧಾವಂತಗಳ ಕನ್ನಡಿಯಾಗಿದೆ ಎಂದರು.
ಕಾದಂಬರಿಯ ಆಶಯಗಳನ್ನು ಕುರಿತು ಮಾತನಾಡಿದ ಉಪನ್ಯಾಸಕ ಟಿ.ಎಂ. ಲಿಂಗರಾಜ, ಮನುಷ್ಯನ ಸಾಮಾಜಿಕ ಬದುಕಿಗೂ ಸಾಹಿತ್ಯ ಪ್ರಕಾರವಾದ ಕಾದಂಬರಿಗೂ ತೀವ್ರ ನಂಟಿದೆ. ವ್ಯವಸ್ಥೆಯಲ್ಲಾಗುವ ಸ್ಥಿತ್ಯಂತರಗಳ ಅಭಿವ್ಯಕ್ತಿಗೆ ಕಾದಂಬರಿ ಸೂಕ್ತವಾಗಿದೆ.
“ವೇದಾವತಿ ತೀರದಲ್ಲಿ’ ಕಾದಂಬರಿಯು ಸಾಮಾಜಿಕ ಪರಿಸರದ ಹಿನ್ನೆಲೆ ಅನುಗುಣವಾಗಿ ಅಲ್ಲಿಯ ತಲೆಮಾರುಗಳಲ್ಲಾಗುವ ಅನೇಕ ಬದಲಾವಣೆಗಳನ್ನು ಚಿತ್ರಿಸುತ್ತದೆ. ಜೀವನದಿ ವೇದಾವತಿಯನ್ನು ಸಂಕೇತವನ್ನಾಗಿರಿಸಿ ಸಾಮಾಜಿಕ ಅಂತಃಕರಣದ ಗ್ರಾಮೀಣ ಪಾತ್ರಗಳು ಹಳ್ಳಿಯನ್ನು ಸಂರಕ್ಷಣೆ ಮಾಡುವ ಕಾರ್ಯವನ್ನು ಹಾಗೂ ಅಲ್ಲಿನ ಆರ್ಥಿಕ ಬದುಕನ್ನು ಸಬಲಗೊಳಿಸುವ ಮತ್ತು ಅಲ್ಲಿನ ಕೆಟ್ಟತನವನ್ನು ಹೋಗಲಾಡಿಸುವಲ್ಲಿ ಶ್ರಮಿಸಿವೆ ಎಂದು ಹೇಳಿದರು.
ಕಾದಂಬರಿಯ ವಸ್ತು ಮತ್ತು ವಿನ್ಯಾಸದ ಕುರಿತು ಮಾತನಾಡಿದ ಚಾಂದ್‌ಪಾಷ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಸಿದ್ದರಾಮಕಲ್ಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾದಂಬರಿಯು ಗಡಿಭಾಗದ ಅನೇಕ ಸಮಸ್ಯೆಗಳನ್ನು ಪ್ರತಿಬಿಂಬಿಸುತ್ತದೆ. ಹೇಗೆ ಹೊರ ರಾಜ್ಯದವರು ಇಲ್ಲಿ ನೆಲೆಸಿ ಗುತ್ತಿಗೆ ಕಾಮಗಾರಿಗಳನ್ನು ನಡೆಸುವ ಮೂಲಕ ದಬ್ಟಾಳಿಕೆ ಮಾಡುತ್ತಾರೆ ಎಂಬುದನ್ನು ಲೇಖಕರು ಸೂಚ್ಯವಾಗಿ ವಿವರಿಸುತ್ತದೆ. ಬಳ್ಳಾರಿ ಜಿಲ್ಲೆಯಲ್ಲಿ ಕೈಗಾರಿಕಾ ಸ್ಥಾಪನೆ, ವಿಮಾನ ನಿಲ್ದಾಣದಂಥ ಸಮಕಾಲೀನ ಸಂಗತಿಗಳ ಮೇಲೆ ಕಾದಂಬರಿ ಬೆಳಕು ಚೆಲ್ಲುತ್ತದೆ ಎಂದರು.
ಕಾದಂಬರಿಕಾರ ಡಾ| ಸಂಪಿಗೆ ನಾಗರಾಜ ಮಾತನಾಡಿದರು. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ| ಕೆ. ಮಲ್ಲಿಕಾರ್ಜುನ, ವಕೀಲ ಬಂಡ್ರಾಳು ಎಂ. ಮೃತ್ಯುಂಜಯ ಸ್ವಾಮಿ, ಯುವ ಮುಖಂಡ ಕೆ.ಆರ್.ಮಲ್ಲೇಶ್, ಲೇಖಕ ಡಾ| ಬಿ.ಆರ್. ಮಂಜುನಾಥ, ಕೆ.ಎಂ.ಮಂಜುನಾಥ, ಗೌರವ ಕೋಶಾಧ್ಯಕ್ಷ ಟಿ.ಎಂ.ಪಂಪಾಪತಿ ಇದ್ದರು. ವಿದ್ಯಾರ್ಥಿನಿ ಸ್ವರ್ಣಾಂಜಲಿ ಪ್ರಾರ್ಥಿಸಿದರು. ಅನಿತ ಉತ್ತನೂರು ಸ್ವಾಗತಿಸಿದರು. ಶ್ರೀದೇವಿ ರೂಪಿಸಿದರು. ಡಾ| ಸಿ.ಕೊಟ್ರಪ್ಪ ವಂದಿಸಿದರು.
ಓದಿ: ನರೇಗಾ ಕೆಲಸದಲ್ಲಿ ಮಹಿಳೆಯರು ಪಾಲ್ಗೊಳ್ಳಲಿ