ಬಳ್ಳಾರಿ: ವೇತನ ಪರಿಷ್ಕರಣೆ, ಆರನೇ ವೇತನ ಜಾರಿಗಾಗಿ ಆಗ್ರಹಿಸಿ ರಾಜ್ಯಾದ್ಯಂತ ಕರೆ ನೀಡಿರುವ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರದಿಂದಾಗಿ ಬಳ್ಳಾರಿಯಲ್ಲೂ ಬಹುತೇಕ ಸಾರಿಗೆ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿದ್ದು, ಜಿಲ್ಲಾಡಳಿತ ಸೂಚನೆ ಮೇರೆಗೆ ಪೊಲೀಸ್ ಭದ್ರತೆಯಲ್ಲಿ ಖಾಸಗಿ ಬಸ್‌ಗಳ ಮೂಲಕ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಯಿತು. ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ದೂರದೂರುಗಳಿಂದ ಬಂದ ಬಸ್‌ಗಳು ಬೆಳಗ್ಗೆ 6 ಗಂಟೆಯೊಳಗೆ ಡಿಪೋ ಸೇರಿದವು.
ಜತೆಗೆ ಬಳ್ಳಾರಿ ವಿಭಾಗದಿಂದ ಯಾವೊಂದು ಬಸ್‌ಗಳು ಸಂಚಾರವನ್ನು ಆರಂಭಿಸಲಿಲ್ಲ. ಇಲಾಖೆಯ ವಿಭಾಗೀಯ ನಿಯಂತ್ರಣಾಧಿ ಕಾರಿಗಳು, ಜಿಲ್ಲಾಡಳಿತ ಪ್ರಯಾಣಿಕರ ದೃಷ್ಟಿಯಿಂದ ಬಸ್ ಗಳನ್ನು ಓಡಿಸಲು ಸಿದ್ಧರಿದ್ದರೂ, ಮುಷ್ಕರ ನಿರತ ನೌಕರರು ಬಾರದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಖಾಸಗಿ ಬಸ್‌ಗಳನ್ನು ಬಳಸಬೇಕಾಯಿತು. ಪರಿಣಾಮ ಪ್ರತಿದಿನ ಸಾರಿಗೆ ಬಸ್ ನಿಲ್ದಾಣದಿಂದ ಅಂತರ ಕಾಯ್ದುಕೊಳ್ಳುತ್ತಿದ್ದ ಖಾಸಗಿ ಬಸ್‌ಗಳು ಮುಷ್ಕರದ ನಿಮಿತ್ತ ನಿಲ್ದಾಣದಿಂದಲೇ ಪ್ರಯಾಣಿಕರನ್ನು ಹತ್ತಿಕೊಂಡು ಹೋಗುತ್ತಿದ್ದರು.
ಸಾರಿಗೆ ಬಸ್ 37, ಖಾಸಗಿ ಬಸ್ 147 ಟ್ರಿಪ್ ಸಂಚಾರ: ನಗರದ ಹೊಸ ಬಸ್ ನಿಲ್ದಾಣದಿಂದ ಟೆಂಪೊ, ಟ್ರಾಕ್ಸ್, ಬಸ್ ಮತ್ತು ಇತರ ಪ್ರಯಾಣಿಕ ವಾಹನಗಳು ಸೇರಿ ಒಟ್ಟು 70ಕ್ಕೂ ಹೆಚ್ಚು ಖಾಸಗಿ ವಾಹನಗಳನ್ನು ಬಳಸಿಕೊಂಡಿರುವ ಸಾರಿಗೆ ಇಲಾಖೆ, ಅವುಗಳಿಂದ ಸುಮಾರು 147ಕ್ಕೂ ಹೆಚ್ಚು ಟ್ರಿಪ್ ಸಂಚರಿಸಿವೆ. ಖಾಸಗಿ ವಾಹನಗಳ ಸಂಚಾರದಿಂದ ಯಾವುದೇ ಅಹಿತಕರ ಘಟನೆ ನಡೆಯದ ಹಿನ್ನೆಲೆಯಲ್ಲಿ ತಡವಾಗಿ ಸಾರಿಗೆ ಬಸ್ ಗಳನ್ನು ಅ ಧಿಕಾರಿಗಳು ರಸ್ತೆಗಿಳಿಸಲಾಯಿತು. ಬಳ್ಳಾರಿ, ಕುಡತಿನಿ, ಕುರುಗೋಡಿನಿಂದ ಸುಮಾರು 37 ಟ್ರಿಪ್‌ಗ್ಳನ್ನು ಸಾರಿಗೆ ಬಸ್ ಗಳು ಸಂಚರಿಸಿವೆ ಎಂದು ಸಾರಿಗೆ ವಿಭಾಗೀಯ ನಿಯಂತ್ರಣಾಧಿ ಕಾರಿ ರಾಜಗೋಪಾಲ್ ಪುರಾಣಿಕ್ ತಿಳಿಸಿದರು.
ನಿಗದಿತ ದರಕ್ಕೆ ಸಂಚಾರ: ಮುಷ್ಕರ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಬಳಸಲಾದ ಖಾಸಗಿ ವಾಹನಗಳು, ಇದೇ ಅವಕಾಶವನ್ನು ಬಳಸಿಕೊಂಡು ಪ್ರಯಾಣಿಕರಿಂದ ಬೇಕಾಬಿಟ್ಟಿ ಹಣವನ್ನು (ಟಿಕೆಟ್ ದರ) ಪಡೆಯಲು ಅವಕಾಶ ನೀಡಿರಲಿಲ್ಲ. ನಿಲ್ದಾಣಕ್ಕೆ ಬರುತ್ತಿದ್ದ ಪ್ರಯಾಣಿಕರನ್ನು ಸಾರಿಗೆ ಅಧಿ ಕಾರಿ, ಸಿಬ್ಬಂದಿಗಳೇ ಅವರನ್ನು ಕೇಳಿ ಖಾಸಗಿ ಬಸ್‌ನ್ನು ವ್ಯವಸ್ಥೆ ಮಾಡಿ ಕಳುಹಿಸುತ್ತಿದ್ದರು. ಜತೆಗೆ ಬಸ್ ಸಂಖ್ಯೆಯನ್ನು ನೋಂದಣಿ ಮಾಡಿಕೊಳ್ಳುವುದರ ಜತೆಗೆ ಪ್ರಯಾಣದ ದರ ಪಟ್ಟಿ ಸಹ ನೀಡಿದ್ದರು. ಖಾಸಗಿ ಬಸ್ ಸೇರಿ ವಾಹನಗಳು ಪಟ್ಟಿಯಲ್ಲಿ ನಿಗದಿಪಡಿಸಿದಷ್ಟೇ ಪ್ರಯಾಣಿಕರಿಂದ ಟಿಕೆಟ್ ದರವನ್ನು ಪಡೆಯಬೇಕು. ಇದನ್ನೇ ಅವಕಾಶವನ್ನಾಗಿ ಬಳಸಿಕೊಂಡು ಹೆಚ್ಚು ಹಣ ಪಡೆದಲ್ಲಿ ಈ ಕುರಿತು ಜಿಲ್ಲಾಡಳಿತಕ್ಕೆ ದೂರು ಬಂದಲ್ಲಿ ಸಂಬಂಧಪಟ್ಟ ಖಾಸಗಿ ವಾಹನಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಾರಿಗೆ ಸಿಬ್ಬಂದಿ ತಿಳಿಸಿದರು.
ಸಾರಿಗೆ ನೌಕರರ ಮುಷ್ಕರ, ಬಸ್ ಸಂಚಾರ ಸ್ಥಗಿತಗೊಳಿಸುವ ಕುರಿತು ಜನರಲ್ಲಿ ಜಾಗೃತಿ ಮೂಡಿದ ಹಿನ್ನೆಲೆಯಲ್ಲಿ ಪ್ರಯಾಣಿಕರು ನಿರೀಕ್ಷಿತ ಪ್ರಮಾಣದಲ್ಲಿ ನಿಲ್ದಾಣಕ್ಕೆ ಬರಲಿಲ್ಲ. ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಸಹ ಅಧಿ ಕಾರಿಗಳು ಸೂಚಿಸಿದ ಬಸ್‌ನಲ್ಲಿ ಕೂತರೂ ಬಸ್ ಭರ್ತಿಯಾಗುವವರೆಗೂ ಬಿಡದೆ ಕಾದು ಕಾದು ಸುಸ್ತಾದರು. ದೂರದೂರುಗಳಿಗೆ ಹೋಗುವ ಪ್ರಯಾಣಿಕರು ನಿಲ್ದಾಣದಲ್ಲೇ ಕಾದು ಕುಳಿತರೆ ಸಮೀಪದ ಹಳ್ಳಿಗಳಿಗೆ ಹೋಗುವ ಪ್ರಯಾಣಿಕರು ಖಾಸಗಿ ವಾಹನಗಳಿಗಾಗಿ ಪರದಾಡಿದರು. ಬಸ್ ನಿಲ್ದಾಣವೂ ನಿರೀಕ್ಷಿತ ಪ್ರಯಾಣಿಕರಿಲ್ಲದೇ ಖಾಲಿಖಾಲಿಯಾಗಿ ಕಂಡುಬಂತು.