ಚಿಕ್ಕಮಗಳೂರು: ಅನೇಕ ವರ್ಷಗಳಿಂದ ಮೂಡಿಗೆರೆ ತಾಲೂಕು ಬಲಿಗೆ ಗುಡ್ಡದ ಗುಹೆಯಲ್ಲಿ ವಾಸವಾಗಿದ್ದ ಅನಂತ ಮತ್ತೆ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾನೆ.
ಈ ಹಿಂದೆ ಉಪವಿಭಾಗಾಧಿಕಾರಿ ಡಾ| ನಾಗರಾಜ್ ಅವರ ನೇತೃತ್ವದಲ್ಲಿ ಅಧಿಕಾರಿಗಳು ಕಲ್ಲಿನ ಗುಹೆಯಲ್ಲಿ ವಾಸವಾಗಿದ್ದ ಅನಂತನ ಮನವೊಲಿಸಿ ಆತನ ಹೆಂಡತಿ ಅನ್ನಪೂರ್ಣಾ ಹಾಗೂ ಮಗಳನ್ನು ಕರೆತಂದು ಮೆಣಸಿನ ಹಾಡ್ಯ ಗಿರಿಜನ ವಸತಿ ಶಾಲೆಯಲ್ಲಿ ಆಶ್ರಯ ಕಲ್ಪಿಸಿದ್ದರು. ಕಾಡು ಮನಷ್ಯನಂತೆ ಬುದುಕುತ್ತಿದ್ದ ಅನಂತನನ್ನು ಸಮಾಜದ ಮುಖ್ಯ ವಾಹಿನಿಗೆ ಕರೆ ತಂದ ಜಿಲ್ಲಾಡಳಿತ ಕ್ರಮಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.
ಆದರೆ, ಮತ್ತೆ ಅನಂತ ತನ್ನ ವರಸೆ ಬದಲಾಗಿದ್ದು, ನಾನು ಈ ನಾಲ್ಕು ಗೋಡೆಗಳ ಮಧ್ಯೆ ಇರುವುದಿಲ್ಲ. ಬಲಿಗೆ ಗುಡ್ಡದ ಗುಹೆಯಲ್ಲೇ ವಾಸವಿರುತ್ತೇನೆ. ನನ್ನ ಹೆಂಡತಿ ಮಗಳನ್ನು ಕಳುಹಿಸಿಕೊಡಿ ಎಂದು ಕ್ಯಾತೆ ತೆಗೆದಿದ್ದು, ಈ ಪ್ರಕರಣ ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಮೆಣಸಿನ ಹಾಡ್ಯ ಗಿರಿಜನ ಶಾಲೆಯಲ್ಲಿ ಆಶ್ರಯ ಪಡೆದುಕೊಂಡ ನಂತರ ಚೆನ್ನಾಗಿಯೇ ಇದ್ದ ಅನಂತ ಕೆಲ ದಿನಗಳಿಂದ ತನ್ನ ವರಸೆ ಬದಲಿಸಿದ್ದಾನೆ. ಅನೇಕ ಬಾರಿ ಗಿರಿಜನ ಆಶ್ರಮ ಶಾಲೆಯಿಂದ ಹೊರ ಬಂದು ಗುಹೆಗೂ ಹೋಗಿ ಬಂದಿದ್ದು, ಇತ್ತೀಚೆಗೆ ಉಪವಿಭಾಗಾಧಿಕಾರಿ ಡಾ| ನಾಗರಾಜ್ ಹಾಗೂ ಅಧಿಕಾರಿಗಳು ತಂಡ ಆತನನ್ನು ಮತ್ತೆ ತಿಳಿವಳಿಕೆ ಹೇಳಿ ಆಶ್ರಮ ಶಾಲೆಯಲ್ಲೇ ಇರುವಂತೆ ಮನವೊಲಿಸಿದ್ದಾರೆ.
ಉಪವಿಭಾಗಾಧಿಕಾರಿ ಭೇಟಿ ನೀಡಿದ ಸಂದರ್ಭದಲ್ಲಿ ಒಮ್ಮೆ ಚೆನ್ನಾಗಿ ಮಾತನಾಡಿದರೆ, ಒಮ್ಮೊಮ್ಮೆ ಸಿಟ್ಟು ಹೊರ ಹಾಕಿದ್ದಾನೆ. ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನ ಬಲಿಗೆ ಗುಹೆಗೆ ಹೋಗಿ ಪೂಜೆ ಸಲ್ಲಿಸಿ ಬರುತ್ತೇನೆ ಎಂದಿದ್ದ. ಮತ್ತೂಮ್ಮೆ ತಹಶೀಲ್ದಾರ್ ಭೇಟಿ ನೀಡಿದ ಸಂದರ್ಭದಲ್ಲಿ ಇಲ್ಲಿ ಇರಲು ಸಾಧ್ಯವೇ ಇಲ್ಲ. ಗುಹೆಗೆ ಹೋಗುತ್ತೇನೆಂದು ಹೇಳಿದ್ದ. ಸೋಮವಾರ ಇದ್ದಕ್ಕಿದ್ದಂತೆ ಕೋಪಗೊಂಡ ಅನಂತ, ಗುಹೆಯಲ್ಲೇ ನಾನು ವಾಸ ಮಾಡುತ್ತೇನೆ… ಅದೇ ಇಷ್ಟ ನನಗೆ… ನಾಲ್ಕು ಗೋಡೆಗಳ ಮಧ್ಯೆ ವಾಸಿಸಲು ನನಗೆ ಸಾಧ್ಯವಿಲ್ಲ…. ಹೆಂಡತಿ ಮಕ್ಕಳನ್ನು ನನ್ನೊಂದಿಗೆ ಕಳುಹಿಸಿಕೊಡಿ ಎಂದು ಆಶ್ರಮ ಶಾಲೆಯಲ್ಲಿದ್ದ ಪೀಠೊಪಕರಣಗಳನ್ನು ಧ್ವಂಸಗೊಳಿಸಿದ್ದಾನೆ. ಶಾಲೆಯ ಮುಂಭಾಗದಲ್ಲಿದ್ದ ಗೇಟ್ ಮುರಿದು ಹಾಕಿದ್ದಾನೆ. ಹೆಂಡತಿ ಮೇಲೆ ಹಲ್ಲೆ ನಡೆಸಿದ್ದಾನೆ. ಶಾಲೆ ಸಿಬ್ಬಂದಿಯನ್ನು ನಿಂದಿಸಿದ್ದಾನೆ.
ಗುಹೆಯಲ್ಲಿ ವಾಸಿಸಲು ಅವಕಾಶ ಮಾಡಿಕೊಡಿ ಇಲ್ಲವೇ, ಬಲಿಗೆ ಗ್ರಾಮದಲ್ಲಿ ಮನೆಕಟ್ಟಿಕೊಡಿ ಇಲ್ಲಿ ಮನೆ ಕಟ್ಟಿಕೊಟ್ಟರೂ ನಾನಿರುವುದಿಲ್ಲ ಬಲಿಗೆ ಗುಡ್ಡದ ಗುಹೆಗೆ ಹೋಗುತ್ತೇನೆ ಎಂದು ಹಠ ಹಿಡಿದು ಕುಳಿತಿದ್ದಾನೆ. ವಿಷಯ ತಿಳಿದ ಉಪವಿಭಾಗಾಧಿಕಾರಿ ಡಾ| ನಾಗರಾಜ್ ಅವರು ಗ್ರಾಮ ಲೆಕ್ಕಿಗ ಹಾಗೂ ಕಂದಾಯ ಅಧಿಕಾರಿಯನ್ನು ಬಲಿಗೆ ಗ್ರಾಮಕ್ಕೆ ಕಳುಹಿಸಿ ಯಾರಾದರೂ ನಿವೇಶನ ನೀಡುವವರಿದ್ದರೆ ವಿಚಾರಿಸುವಂತೆ ತಿಳಿಸಿದ್ದಾರೆ. ನಿವೇಶನ ಸಿಗದಿರುವ ಹಿನ್ನೆಲೆಯಲ್ಲಿ ಬಲಿಗೆ ಗ್ರಾಮದಲ್ಲಿ ಮನೆ ಕಟ್ಟಿಕೊಡುವ ನಿರ್ಧಾರವನ್ನು ಜಿಲ್ಲಾಡಳಿತ ಕೈಬಿಟ್ಟಿದೆ.
ಅನಂತನ ಸಮಸ್ಯೆ ಏನೆಂದು ಅರಿಯುವುದೇ ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿದೆ. ಮಾನಸಿಕ ಸಮಸ್ಯೆ ಎದುರಿಸುತ್ತಿರಬಹುದು ಎಂದು ಅಂದಾಜಿಸಿರುವ
ಜಿಲ್ಲಾಡಳಿತ, ಮಾನಸಿಕ ರೋಗ ತಜ್ಞರಲ್ಲಿ ಚಿಕಿತ್ಸೆ ಕೊಡಿಸಲು ಚಿಂತನೆ ನಡೆಸಲಾಗಿದೆ. ನಂತರವೂ ಸುಧಾರಣೆ ಕಂಡು ಬರದಿದ್ದರೆ ಬೆಂಗಳೂರಿನ ನಿಮ್ಹಾನ್ಸ್‌ಗೆ ದಾಖಲಿಸುವ ಬಗ್ಗೆ ಜಿಲ್ಲಾಡಳಿತ ಯೋಚಿಸಿದೆ. ಅನಾಗರಿಕನಂತೆ ಗುಹೆಯಲ್ಲಿ ವಾಸಿಸುತ್ತಿದ್ದ ಮನುಷ್ಯನನ್ನು ಸಮಾಜದ ಮುಖ್ಯವಾಹಿನಿಗೆ ಕರೆತಂದ ಪ್ರಶಂಸೆಗೆ ಒಳಗಾಗಿದ್ದ ಜಿಲ್ಲಾಡಳಿತಕ್ಕೆ ಅನಂತ ಪುನಃ ಪುನಃ ತನ್ನ ಮನಸ್ಸು ಬದಲಿಸುತ್ತಿರುವುದು ಉಭಯ ಸಂಕಟವಾಗಿದೆ. ಮಾನಸಿಕ ತಜ್ಞರಿಂದ ಚಿಕಿತ್ಸೆಯ ನಂತರ ಸಮಸ್ಯೆ ಬಗೆಹರಿಯಬಹುದೇ ಎಂದು ಕಾದು ನೋಡಬೇಕಿದೆ.
ಪತ್ನಿ-ಮಗಳ ಬೇಸರ : ಗುಹೆಯಲ್ಲಿ ಸಂಕಟದ ಜೀವನ ನಡೆಸುತ್ತಿದ್ದ ಪತ್ನಿ ಅನ್ನಪೂರ್ಣಾ ಹಾಗೂ ಮಗಳು ನಾಗರೀಕ ಸಮಾಜಕ್ಕೆ ಒಗ್ಗಿಕೊಂಡಿದ್ದು, ಮತ್ತೆ ಅನಂತನೊಂದಿಗೆ ಗುಹೆಗೆ ಹೋಗಲು ಒಪ್ಪುತ್ತಿಲ್ಲ. ಅನಂತನಲ್ಲಿನ ಬದಲಾವಣೆಯಿಂದ ಅವರು ಬೇಸತ್ತು ಹೋಗಿದ್ದಾರೆ.
ಅನಂತನ ನಡತೆಯಲ್ಲಿ ಆಗಾಗ ಬದಲಾವಣೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಮಾನಸಿಕ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಅನುಮಾನವಿದೆ. ಈ ಹಿನ್ನೆಲೆಯಲ್ಲಿ ಮಾನಸಿಕ ತಜ್ಞರಲ್ಲಿ ತಪಾಸಣೆಗ ಒಳಪಡಿಸಲು ಚಿಂತಿಸಲಾಗಿದೆ.-
ಡಾ| ನಾಗರಾಜ್, ಉಪವಿಭಾಗಾಧಿಕಾರಿ