ಬಾಳೆಹೊನ್ನೂರು: ಚಾಲಕನ ಸ್ಥಾನದಲ್ಲಿ ಕುಳಿತ ವ್ಯಕ್ತಿ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಿ ಅತ್ಯಂತ ಹೊಣೆಗಾರಿಕೆಯಿಂದ ವಾಹನ ಓಡಿಸಿದರೆ ಬಹಳಷ್ಟು ಸಾವು- ನೋವುಗಳನ್ನು ತಡೆಯಬಹುದು ಎಂದು ಪಿಎಸ್‌ಐ ರವಿಕುಮಾರ್ ಹೇಳಿದರು.
ಪಟ್ಟಣದ ಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ಬಾಳೆಹೊನ್ನೂರು ರೋಟರಿ ಕ್ಲಬ್, ಇನ್ನರ್‌ವ್ಹೀಲ್ ಕ್ಲಬ್ ಹಾಗೂ ದಿವ್ಯ ಭಾರತಿ ಮಹಿಳಾ ಮಂಡಳಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತೆ ಕುರಿತ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಹುತೇಕ ಅಪಘಾತಗಳಿಗೆ ಚಾಲಕರ ಲೋಪವೇ ಕಾರಣ ಎಂಬುದರಲ್ಲಿ ಅನುಮಾನವೇ ಇಲ್ಲ. ಅತೀ ವೇಗದ ಚಾಲನೆ, ಕುಡಿದು ವಾಹನ ಚಾಲನೆ ಮಾಡುವುದು, ಸಮರ್ಪಕ ತರಬೇತಿ ಕೊರತೆ, ಸೀಟ್ ಬೆಲ್ಟ ಧರಿಸದಿರುವುದು, ವಾಹನಗಳ ದುಸ್ಥಿತಿ, ರಸ್ತೆ ಮೇಲೆ ಉಡಾಫೆ ಪ್ರವೃತ್ತಿ ಹೀಗೆ ಹತ್ತು ಹಲವು ಕಾರಣಗಳಿಂದ ಅಪಘಾತ ಸಂಭವಿಸುತ್ತವೆ. ಹಾಗಾಗಿ, ಚಾಲಕರು ಜಾಗರೂಕರಾಗಿ ಜವಾಬ್ದಾರಿಯಿಂದ ವಾಹನ ಚಲಾಯಿಸಬೇಕೆಂದರು.
ಪೊಲೀಸ್ ಇಲಾಖೆಯ ನಂದೀಶ್ ಮಾತನಾಡಿ, ಸಂಚಾರ ಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆಗಳು ಸೂಚಿಸಿರುವ ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದರೆ ಅಪಘಾತಗಳು ಸಂಭವಿಸುವುದಿಲ್ಲ, ಹಾಗಾಗಿ, ರಸ್ತೆ ಸುರಕ್ಷತೆ ನಿಯಮಗಳ ಬಗ್ಗೆ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದರು.
ರೋಟರಿ ಅಧ್ಯಕ್ಷ ಎಂ.ಸಿ.ಯೋಗೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ರಸ್ತೆ ಸುರಕ್ಷತೆ ಪ್ರಾಮುಖ್ಯತೆ, ರಸ್ತೆ ಸಂಕೇತಗಳು, ಚಿನ್ನೆಗಳು, ಸಂಚಾರ ದೀಪಗಳು ಮತ್ತು ಅವುಗಳ ಪಾತ್ರವನ್ನು ಅರಿತು ಸಂಚಾರ ನಿಯಮಗಳ ಪಾಲನೆ ಮಾಡಬೇಕು. ಬಾಳೆಹೊನ್ನೂರಿನ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಸೆ.22ರ ಬಾನುವಾರ ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 2ಗಂಟೆ ವರೆಗೆ ಉಚಿತ ಆರೋಗ್ಯ ಶಿಬಿರವನ್ನು ರೋಟರಿ ಕ್ಲಬ್ ವತಿಯಿಂದ ಆಯೋಜಿಸಿದ್ದು, ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೇಸಿ ಕ್ಲಬ್ ಅಧ್ಯಕ್ಷ ಸಿ.ಪಿ.ರಮೇಶ್, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಸೀಮಾ ಅಶೋಕ್ ಮಾತನಾಡಿದರು. ಝೊನಲ್ ಲೆಫ್ಟಿನೆಂಟ್ ಟಿ.ಸುರೇಶ್, ದಿವ್ಯ ಭಾರತಿ ಮಹಿಳಾ ಮಂಡಳಿ ಅಧ್ಯಕ್ಷೆ ಕವಿತಾ ಕೇಶವ್, ಇನ್ನರ್‌ವ್ಹೀಲ್ ಕ್ಲಬ್ ಕಾರ್ಯದರ್ಶಿ ಸುಚೇತಾ, ಲಯನ್ಸ್ ಕ್ಲಬ್ ಅಧ್ಯಕ್ಷ ಎ.ಸಿ.ಕೃಷ್ಣಮೂರ್ತಿ, ಕಾರ್ಯದರ್ಶಿ ಎನ್.ಸಿ.ಸುಬ್ರಹ್ಮಣ್ಯ, ಬಿ.ಸಿ.ಗೀತಾ, ನವೀನ್ ಲಾಯ್ಡ ಮಿಸ್ಕಿತ್, ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರಳಿಕೊಪ್ಪ ಸತೀಶ್, ಬಿಲ್ಲವ ಸಂಘದ ಅಧ್ಯಕ್ಷ ದಯಾನಂದ್, ಬಾಲಕೃಷ್ಣ ಸೇರಿದಂತೆ ರೋಟರಿ, ಇನ್ನರ್‌ವ್ಹೀಲ್, ಮಹಿಳಾ ಮಂಡಳಿ ಸರ್ವ ಸದಸ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ವೈಶಾಲಿ ಕುಡ್ವ ಪ್ರಾರ್ಥಿಸಿ, ಮಾಗುಂಡಿ ರವಿ ನಿರೂಪಿಸಿ, ರೋಟರಿ ಕಾರ್ಯದರ್ಶಿ ಕೆ.ಕೆ.ರಮೇಶ್ ವಂದಿಸಿದರು.