ದುರಂತ ಸ್ಥಳಕ್ಕೆ ಧಾವಿಸಿದ್ದ ಸ್ಥಳೀಯರು ಹಾಗೂ ರಕ್ಷಣ ಕಾರ್ಯಕರ್ತರು “ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಮಂದಿಯ ಜೀವ ಉಳಿಸೋಣ’ ಎಂಬ ಶಪಥದೊಂದಿಗೆ ಶುಕ್ರವಾರ ರಾತ್ರಿಯಿಂದ ಶನಿವಾರ ಸಂಜೆಯವರೆಗೂ ರಕ್ಷಣ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಒಂದರ ಮೇಲೊಂದರಂತೆ ಬಿದ್ದಿದ್ದ ಬೋಗಿಗಳ ಒಳಗೆ ನುಗ್ಗಿ, ಅವಶೇಷಗಳಡಿ ಸಿಲುಕಿದವರನ್ನು ರಕ್ಷಿಸುವ ಕೆಲಸ ಮಾಡಿದರು. ಬರೋಬ್ಬರಿ 14 ತಾಸುಗಳ ಕಾಲ ಈ ಕಾರ್ಯಾಚರಣೆ ನಡೆಯಿತು. ಗ್ಯಾಸ್ ಕಟ್ಟರ್ಗಳು, ಟಾರ್ಚುಗಳು, ಎಲೆಕ್ಟ್ರಿಕ್ ಕಟ್ಟರ್ಗಳು, ಪೊಲೀಸ್ ಶ್ವಾನಗಳು ಇವರಿಗೆ ಸಾಥ್ ನೀಡಿದವು. ಸೇನೆಯೂ ಕಾರ್ಯಾಚರಣೆಗಿಳಿಯಿತು. ಎಂಐ-17 ಹೆಲಿಕಾಪ್ಟರ್ಗಳು ಪರಿಹಾರ, ರಕ್ಷಣ ಕಾರ್ಯಕ್ಕೆ ಧಾವಿಸಿದವು. ಅನೇಕ ಯುವಕರು ಬಾಲಸೋರ್ ಆಸ್ಪತ್ರೆಯ ಹೊರಗೆ ಸರತಿಯಲ್ಲಿ ನಿಂತು ರಕ್ತದಾನ ಮಾಡಿದ್ದೂ ಕಂಡುಬಂತು. ನೋವಿನ ನಡುವೆ ಈ ಮಾನವೀಯ ಕಾರ್ಯಗಳು ಎಲ್ಲರ ಕಣ್ಣುಗಳನ್ನು ತೇವಗೊಳಿಸಿದವು.
ಘಟನೆ ನಡೆದದ್ದು ಹೇಗೆ?
1. ಶಾಲಿಮರ್-ಚೆನ್ನೈ ಕೋರಮಂಡಲ್ ಎಕ್ಸ್ಪ್ರಸ್ (12841) ರೈಲು ಸಂಜೆ 6.30ಕ್ಕೆ ಬಾಲಸೋರ್ ತಲುಪಿ ಮುಂದುವರಿಯುತ್ತಿತ್ತು.
Related Articles
2. ಇದೇ ಸಮಯದಲ್ಲಿ ಲೂಪ್ ಲೈನ್(ಬೇರೆ ರೈಲು ಪಾಸಿಂಗ್ಗೆ ಇರುವ ಹೆಚ್ಚುವರಿ ಲೈನ್)ನಲ್ಲಿ ಸರಕು ಸಾಗಣೆ ರೈಲೊಂದು ನಿಂತಿತ್ತು.
3. ಸಿಗ್ನಲ್ ನೀಡುವ ಸಹಾಯಕ ಸ್ಟೇಷನ್ ಮ್ಯಾನೇಜರ್ ಕೋರಮಂಡಲ್ ಎಕ್ಸ್ಪ್ರಸ್ಗೆ ಗ್ರೀನ್ ಸಿಗ್ನಲ್ ನೀಡಿದರು. ತತ್ಕ್ಷಣ ಅವರಿಗೆ ತಾವು ಮಾಡಿದ ಎಡವಟ್ಟು (ಫೇಸಿಂಗ್ ಪಾಯಿಂಟ್ ರಿಲೀಸ್ ಮಾಡದಿದ್ದುದು)ಅರಿವಿಗೆ ಬಂದು, ಕೂಡಲೇ ಗ್ರೀನ್ ಸಿಗ್ನಲ್ ಆಫ್ ಮಾಡಿ ರೆಡ್ ಸಿಗ್ನಲ್ ನೀಡಿದರು.
4. ಆದರೆ ಗಂಟೆಗೆ 128 ಕಿ.ಮೀ. ವೇಗದಲ್ಲಿದ್ದ ಕೋರಮಂಡಲ್ ಎಕ್ಸ್ಪ್ರಸ್ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ಸಹಜವಾಗಿ ಮುಂದೆ ಸಾಗಿಯಾಗಿತ್ತು.
5. ವೇಗವಾಗಿ ಸಾಗಿದ ಕೋರಮಂಡಲ್ ಎಕ್ಸ್ಪ್ರಸ್ ಲೂಪ್ ಲೈನ್ಗೆ ತಿರುಗಿ ಮುಂದೆ ನಿಂತಿದ್ದ ಸರಕು ಸಾಗಣೆ ರೈಲಿಗೆ ಢಿಕ್ಕಿ ಹೊಡೆಯಿತು.
6. ಅಪ್ಪಳಿಸಿದ ತೀವ್ರತೆಗೆ ಕೋರಮಂಡಲ್ನ 10-12 ಬೋಗಿಗಳು ಹಳಿ ತಪ್ಪಿ, ಪಕ್ಕದ ಹಳಿಗಳ ಮೇಲೆ ಬಿದ್ದವು.
7. ಇದೇ ಸಮಯದಲ್ಲಿ ಪಕ್ಕದ ಹಳಿಯಲ್ಲಿ ಯಶವಂತಪುರ-ಹೌರಾ ಸೂಪರ್ಫಾಸ್ಟ್ ಎಕ್ಸ್ಪ್ರಸ್ (12864) ರೈಲು ಸಾಗುತ್ತಿತ್ತು.
8. ಹಳಿ ತಪ್ಪಿದ ಕೋರಮಂಡಲ್ನ ಬೋಗಿಗಳು ಯಶವಂತಪುರ-ಹೌರಾ ಎಕ್ಸ್ಪ್ರಸ್ನ ಕೊನೆಯ ಕೆಲವು ಬೋಗಿಗಳಿಗೆ ಢಿಕ್ಕಿಯಾದವು. ಯಶವಂತಪುರ -ಹೌರಾ ರೈಲಿನ 3 ಬೋಗಿಗಳೂ ಹಳಿ ತಪ್ಪಿದವು.
9. ಕ್ಷಣಮಾತ್ರದ ಎಡವಟ್ಟಿನಿಂದ ಕೆಲವೇ ನಿಮಿಷಗಳ ಅವಧಿಯಲ್ಲಿ 3 ರೈಲುಗಳ ನಡುವೆ ಅಪಘಾತ ಸಂಭವಿಸಿ, 280ಕ್ಕೂ ಹೆಚ್ಚು ಜೀವಗಳು ಬಲಿಯಾದವು.