Advertisement
ಬೆಳಗಾವಿ: ಕಳೆದ ನಾಲ್ಕು ಚುನಾವಣೆಗಳಿಂದ ಬಿಜೆಪಿಯ ಭದ್ರಕೋಟೆಯಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಮರಳಿ ತನ್ನ ವಶ ಮಾಡಿಕೊಳ್ಳಲಿದೆಯೇ? ಜಾತಿ ಲೆಕ್ಕಾಚಾರ, ಅನುಭವದ ರಾಜಕಾರಣ ಮತ್ತು ಅನುಕಂಪದ ಅಲೆಯಲ್ಲಿ ಯಾವುದಕ್ಕೆ ಮತದಾರ ಮಣೆ ಹಾಕಿದ್ದಾನೆ? ಅನುಭವ ಮತ್ತು ಅನುಕಂಪದ ನಡುವೆ ಯಾವುದು ಮಂಕಾಗಲಿದೆ? – ಇದು ಗಡಿ ಜಿಲ್ಲೆ ಬೆಳಗಾವಿಯಲ್ಲಿ ಅದೂ ವಿಶೇಷವಾಗಿ ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಹಳ ಜೋರಾಗಿ ನಡೆದಿರುವ ಲೆಕ್ಕಾಚಾರ.
Related Articles
Advertisement
ಬಿಜೆಪಿ ಗೆಲುವಿನ ಅಂತರ 50 ಸಾವಿರದಿಂದ ಒಂದು ಲಕ್ಷದವರೆಗೆ ಇರಲಿದೆ. ಗೋಕಾಕ, ಬೈಲಹೊಂಗಲ, ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ ಹಾಗೂ ರಾಮದುರ್ಗದಲ್ಲಿ ನಾವು ಮುನ್ನಡೆ ಸಾಧಿಸಲಿದ್ದೇವೆ. ಅರಭಾವಿ-ಸವದತ್ತಿಯಲ್ಲಿ ಸ್ವಲ್ಪ ಹೆಚ್ಚು ಕಮ್ಮಿ ಆಗಬಹುದು. ಇಲ್ಲಿ ನಾವು ಕಡಿಮೆ ಮತಗಳನ್ನು ಪಡೆದರೂ ಕಾಂಗ್ರೆಸ್‌ಗೆ ಅದನ್ನು ದಾಟಿ ಮುಂದೆ ಹೋಗಲು ಸಾಧ್ಯವಿಲ್ಲ ಎಂಬುದು ಬಿಜೆಪಿ ಪರ ಕಳೆದ ಎಂಟು ಚುನಾವಣೆಗಳನ್ನು ಮಾಡಿರುವ ಹಿರಿಯ ಮುಖಂಡ ಆರ್.ಎಸ್.ಮುತಾಲಿಕ ಅವರ ಖಚಿತ ಲೆಕ್ಕಾಚಾರ. ಒಂದು ವೇಳೆ ಬಿಜೆಪಿಗೆ ಹಿನ್ನಡೆಯಾದರೆ ಅದಕ್ಕೆ ಪಕ್ಷದೊಳಗಿನ ನಕಾರಾತ್ಮಕ ಅಂಶಗಳೇ ಕಾರಣ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಸಾಕಷ್ಟು ಸಂಖ್ಯೆಯಲ್ಲಿದ್ದ ಟಿಕೆಟ್ ಆಕಾಂಕ್ಷಿಗಳು ತಮಗೆ ಟಿಕೆಟ್ ಸಿಗದ ಕಾರಣ ಪ್ರಚಾರದಿಂದ ಅಂತರ ಕಾಯ್ದುಕೊಂಡರು. ಇನ್ನು ಕೆಲವರು ಪ್ರಚಾರಕ್ಕೆ ಬಂದರೂ ಅದು ತೋರಿಕೆಗೆ ಮಾತ್ರ. ಕೆಲ ನಾಯಕರು ತೆರೆಮರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಪರ ಕೆಲಸ ಮಾಡಿದರು. ಎಲ್ಲಕ್ಕಿಂತ ಮುಖ್ಯವಾಗಿ ಹುಬ್ಬಳ್ಳಿ ನಾಯಕರ ಹಸ್ತಕ್ಷೇಪ ಜಿಲ್ಲಾ ನಾಯಕರಲ್ಲಿ ಸಾಕಷ್ಟು ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿತ್ತು. ಇದೆಲ್ಲವೂ ಫಲಿತಾಂಶದ ಮೇಲೆ ಪರಿಣಾಮ ಬೀರಿದರೆ ಅಚ್ಚರಿಯಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಬಿಜೆಪಿಯಲ್ಲಿರುವಷ್ಟೇ ವಿಶ್ವಾಸ ಕಾಂಗ್ರೆಸ್ ಪಾಳೆಯದಲ್ಲೂ ಕಾಣುತ್ತಿದೆ. ಮತದಾನ ಮುಗಿದ ಬೆನ್ನಲ್ಲೇ ನಾವು 50 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲ್ಲುತ್ತೇವೆಂದು ಹೇಳಿಕೊಳ್ಳುತ್ತಿದ್ದಾರೆ.
ಮೂರೂ ಪ್ರಮುಖ ಕ್ಷೇತ್ರಗಳಲ್ಲಿ ಮತದಾರರು ಕಾಂಗ್ರೆಸ್ ಪರ ವಾಲಿರುವುದು ಈ ವಿಶ್ವಾಸಕ್ಕೆ ಸಾಕ್ಷಿ. ಕಾಂಗ್ರೆಸ್ ಮೂಲಗಳ ಪ್ರಕಾರ ಅರಭಾವಿ, ಸವದತ್ತಿ, ಬೈಲಹೊಂಗಲ, ಬೆಳಗಾವಿ ಉತ್ತರ, ಬೆಳಗಾವಿ ಗ್ರಾಮೀಣ ಕ್ಷೇತ್ರಗಳಲ್ಲಿ ನಿರೀಕ್ಷೆಗಿಂತ ಹೆಚ್ಚು ಮತಗಳು ಬಂದಿವೆ. ಗೋಕಾಕ, ರಾಮದುರ್ಗ, ಬೆಳಗಾವಿ ದಕ್ಷಿಣದಲ್ಲಿ ಪ್ರತಿಶತ 50 ಮತಗಳು ಕಾಂಗ್ರೆಸ್ ಪರವಾಗಿವೆ. ಎಲ್ಲಕ್ಕಿಂತ ಮುಖ್ಯವಾಗಿ ಬಾಲಚಂದ್ರ ಜಾರಕಿಹೊಳಿ ಮತ್ತು ರಮೇಶ ಜಾರಕಿಹೊಳಿ ಅವರಿಗೆ ಇದು ಸತ್ವ ಪರೀಕ್ಷೆಯ ಕಾಲ. ಫಲಿತಾಂಶ ಏರುಪೇರಾದರೆ ಇದು ಬಿಜೆಪಿಯಲ್ಲಿ ಬದಲಾವಣೆಗೆ ಕಾರಣವಾಗಬಹುದು. ಅದರ ಪರಿಣಾಮ ಜಾರಕಿಹೊಳಿ ಸಹೋದರರ ಮೇಲೆ ಆದರೂ ಅಚ್ಚರಿಯಿಲ್ಲ.