ಬಳಗಾನೂರು: ಕಾರ್ಮಿಕರು ಸಂಘಟಿತರಾಗಿ ಸರ್ಕಾರದ ಸೌಲಭ್ಯ ಪಡೆಯಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಸಿ.ವಿ. ಸನತ್ ಹೇಳಿದರು.
ತಾಲೂಕು ಕಾನೂನು ಸೇವಾಸಮಿತಿ ಸಿಂಧನೂರು, ತಾಲೂಕು ನ್ಯಾಯವಾದಿಗಳ ಸಂಘ, ಶ್ರೀ ವಿಶ್ವೇಶ್ವರಯ್ಯ ಕಟ್ಟಡ ಹಾಗೂ ಇತರ ನಿರ್ಮಾಣ ಅಸಂಘಟಿತರ ಕಾರ್ಮಿಕರ ಸಂಘಗಳ ಪಟ್ಟಣದ ವಿರಕ್ತಮಠದ ಶ್ರೀ ಮರಿಬಸವಲಿಂಗೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಮಿಕ ನಿರೀಕ್ಷಕ ಜನಾರ್ದನಕುಮಾರ ಮಾತನಾಡಿ, 18ರಿಂದ 60 ವರ್ಷದವರೆಗಿನ ಪುರುಷರು, 18 ರಿಂದ 50 ವರ್ಷದವರೆಗಿನ ಮಹಿಳಾ ಕಾರ್ಮಿಕರು ಸಂಘದಲ್ಲಿ ತಮ್ಮ ಮೂಲ ದಾಖಲಾತಿ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು. ನೋಂದಣಿಯಾದ ನಂತರ ಕಾರ್ಮಿಕರ ಕಲ್ಯಾಣ ನಿಧಿಯಿಂದ ಗರ್ಭಿಣಿ ಕಾರ್ಮಿಕರಿಗೆ ಗಂಡು ಮಗುವಾದರೆ 20 ಸಾವಿರ, ಹೆಣ್ಣು ಮಗುವಾದರೆ 30 ಸಾವಿರ ಸಹಾಯ ನಿಧಿ ನೀಡುತ್ತದೆ. ಕಾರ್ಮಿಕರ 2 ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹಾಯಧನ, 2 ಮಕ್ಕಳ ಮದುವೆಗೆ 50 ಸಾವಿರ ಸಹಾಯಧನ, ನೋಂದಣಿಯಾದ 5 ವರ್ಷದ ನಂತರ ಕಾರ್ಮಿಕರಿಗೆ ಸಲಕರಣೆ ಖರೀದಿಗಾಗಿ 15 ಸಾವಿರ ಸಹಾಯಧನ, ಇತರೆ ಆರೋಗ್ಯ ವಿಮೆ ಸೇರಿ ಸೌಲಭ್ಯ ಪಡೆಯಲು ಮುಂದಾಗಬೇಕು ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ರಿಹಾನ್ ಸುಲ್ತಾನ, ಪಿಎಸ್‌ಐ ಎಂ. ಶಶಿಕಾಂತ, ಸಂಘದ ಅಧ್ಯಕ್ಷ ಲಿಂಗಪ್ಪ ಪೂಜಾರ ಮಾತನಾಡಿದರು.
ಬಸವಲಿಂಗಯ್ಯಸ್ವಾಮಿ, ಪಪಂ ಸದಸ್ಯೆ ರೇಣುಕಮ್ಮ ಪೂಜಾರ, ಉಪನ್ಯಾಸಕಿ ನಾಗರತ್ನಾ ಗುತ್ತೇದಾರ, ವಕೀಲರಾದ ವಿರುಪಣ್ಣ ದುಮತಿ, ತಿರುಪತಿ ನಾಯಕ, ಜಿ.ವಿ. ಜೋಶಿ ಬಳಗಾನೂರು, ಬಸವರಾಜ ಆಲೂರು, ಗೌರವಾಧ್ಯಕ್ಷ ಲಕ್ಷ್ಮಣ ಬೇಲ್ದಾರ, ಅಧ್ಯಕ್ಷ ಲಿಂಗಪ್ಪ ಪೂಜಾರ, ಉಪಾಧ್ಯಕ್ಷ ಗೂಡುಸಾಬ ಖಜಾಂಚಿ ಚಂದ್ರಕಾಂತ ಸಿಂಪಿಗೇರ, ಸೇರಿದಂತೆ ತಾಲೂಕು ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು, ಶ್ರೀ ವಿಶ್ವೇಶ್ವರಯ್ಯ ಕಟ್ಟಡ ಹಾಗೂ ಇತರ ನಿರ್ಮಾಣ ಅಸಂಘಟಿತರ ಕಾರ್ಮಿಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಮಿಕರ ಕಲ್ಯಾಣ ನಿಧಿಯಿಂದ ಕಾರ್ಮಿಕರಿಗೆ ತುಂಬ ಅನುಕೂಲತೆಗಳಿವೆ. ಆದರೆ ಮಾಹಿತಿ ಕೊರತೆಯಿಂದ ಕಾರ್ಮಿಕರು ಸಂಘಟಿತರಾಗುತ್ತಿಲ್ಲ. ಕಾರ್ಮಿಕರು ಸಂಘಟಿತರಾಗಿ ಸೌಲಭ್ಯ ಪಡೆಯಲು ಮುಂದಾಗಬೇಕು.
•
ಸಿ.ವಿ. ಸನತ್,
ಹಿರಿಯ ಸಿವಿಲ್ ನ್ಯಾಯಾಧೀಶರು