ಗೋಕಾಕ: ರಮೇಶ ಜಾರಕಿಹೊಳಿ, ಮಹೇಶ ಕುಮಟಳ್ಳಿ, ಶ್ರೀಮಂತ ಪಾಟೀಲ್ ಮೊದಲಾದವರ ತ್ಯಾಗದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅಧಿಕಾರ ಅನುಭವಿಸುವವರು ಇದನ್ನು ಮರೆಯಬಾರದು ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಚಿವ ಕತ್ತಿ, ಲಕ್ಷ್ಮಣ ಸವದಿ ಹಾಗೂ ಶಶಿಕಲಾ ಜೊಲ್ಲೆಗೆ ಟಾಂಗ್ ನೀಡಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಉಮೇಶ ಕತ್ತಿ ನೇತೃತ್ವದಲ್ಲಿ ಸಭೆಯಲ್ಲಿ ಪಾಲ್ಗೊಂಡ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಪಿ.ರಾಜೀವ್ ಅಧಿಕೃತ ಸಭೆಯಲ್ಲ ಎಂದಿದ್ದಾರೆ. ಈ ವಿಚಾರ ದೊಡ್ಡದು ಮಾಡಲು ಹೋಗುವುದಿಲ್ಲ. ಉಮೇಶ ಕತ್ತಿ ಅವರು ಕವಟಗಿಮಠ ಸಭೆ ಕರೆದಿದ್ದಾರೆ ಎಂದಿದ್ದಾರೆ. ನನಗೆ, ರಮೇಶ ಜಾರಕಿಹೊಳಿ, ಮಹೇಶ ಕುಮಟಳ್ಳಿ, ಶ್ರೀಮಂತ ಪಾಟೀಲ್‌ಗೆ ಆಹ್ವಾನ ನೀಡಿರಲಿಲ್ಲ. ಪಕ್ಷದಿಂದಲೇ ಈ ಬಗ್ಗೆ ಸ್ಪಷ್ಟನೆ ನೀಡಬೇಕು. ಚುನಾವಣೆಗೆ ವರ್ಷ ಮಾತ್ರ ಬಾಕಿ ಇದೆ. ಆರೋಪ-ಪ್ರತ್ಯಾರೋಪ ಮಾಡಲು ಇದು ಸಮಯವಲ್ಲ. ಜತೆಗೆ ಈ ಬೆಳಗವಣಿಗೆ ಪಕ್ಷಕ್ಕೆ ಒಳಿತನ್ನೂ ಮಾಡದು ಎಂದರು.
17 ಮಂದಿ ಶಾಸಕರು ಬರದಿರುತ್ತಿದ್ದರೆ ಯಾರೂ ಮಂತ್ರಿ, ರಾಜ್ಯಸಭೆ ಸದಸ್ಯ, ಡಿಸಿಎಂ ಆಗುತ್ತಿರಲಿಲ್ಲ. ಕೆಲವರು ಬಾಲಚಂದ್ರ ಜಾರಕಿಹೊಳಿ ಬಿಜೆಪಿ ತೊರೆಯಲಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್-ಜೆಡಿಎಸ್‌ನವರಿಂದ ಈ ಸುದ್ದಿ ಹಬ್ಬಿದೆಯೇ ಎಂಬುದು ಗೊತ್ತಿಲ್ಲ. ನಾನು ಮುಂದಿನ ಚುನಾವಣೆಯಲ್ಲಿ ಅರಭಾವಿಯಿಂದ ಬಿಜೆಪಿ ಅಭ್ಯರ್ಥಿಯಾಗಿಯೇ ಕಣಕ್ಕಿಳಿಯುವುದು ನಿಶ್ಚಿತ. ನಾನು ಅಥವಾ ರಮೇಶ್ ಜಾರಕಿಹೊಳಿ ಪಕ್ಷ ವಿರೋ ಧಿ ಚಟುವಟಿಕೆಯಲ್ಲಿ ನಿರತವಾಗಿಲ್ಲ ಎಂದರು.