ದಾವಣಗೆರೆ: ಜಿಲ್ಲಾ ಬಾಲಭವನ ಮಕ್ಕಳ ಸರ್ವತೋಮುಖ ಬೆಳವಣಿಗೆ ಪೂರಕವಾಗಲು 5 ರಿಂದ 16 ವರ್ಷದ ಒಳಗಿನ ಮಕ್ಕಳಿಗೆ ಸೃಜನಾತ್ಮಕ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳ ತರಬೇತಿ ನೀಡಲು ಮೇ 8ರಿಂದ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಬೇಸಿಗೆ ಶಿಬಿರ ಆಯೋಜಿಸಲಾಗವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್. ಅಶ್ವತಿ ಹೇಳಿದರು.
ಶನಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಬಾಲ ಭವನ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ಬಾಲಕಿಯರ ಮತ್ತು ಬಾಲಕರ ಬಾಲಭವನದಲ್ಲಿ 15 ದಿನಗಳ ಕಾಲ ಬೇಸಿಗೆ ಶಿಬಿರ ನಡೆಯಲಿದೆ ಎಂದರು.
ಹರಿಹರ ತಾಲೂಕಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣ, ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಶಾಲಾ ಆವರಣ, ಹರಪನಹಳ್ಳಿಯ ಆಶ್ರಯ ಕ್ಯಾಂಪ್, ಜಗಳೂರಿನ ಸರ್ಕಾರಿ ಜ್ಯೂನಿಯರ್ ಕಾಲೇಜ್ ಹಾಗೂ ಹೊನ್ನಾಳಿಯ ಹಿರೇಕಲ್ಮಠ ಮಠದ ಆವರಣದಲ್ಲಿ ಶಿಬಿರ ನಡೆಸಲು ಸ್ಥಳ ನಿಗದಿಯಾಗಿದ್ದು, ತಾಲೂಕು ಮಟ್ಟದಲ್ಲಿ 10 ದಿನಗಳ ಕಾಲ ಶಿಬಿರ ನಡೆಯಲಿದೆ ಎಂದು ಹೇಳಿದರು.
ಚಿತ್ರಕಲೆ, ಕರಕುಶಲ, ಜೇಡಿಮಣ್ಣಿನ ಕಲೆ, ಕಸದಿಂದ ರಸ, ಸಮೂಹ ಸಂಗೀತ, ಸಮೂಹ ನೃತ್ಯ, ಯೋಗ ಮತ್ತು ಕರಾಟೆ ಇವುಗಳಲ್ಲಿ ಯಾವುದಾದರೂ ಆರು ಚಟುವಟಿಕೆಗಳನ್ನು ಸ್ಥಳೀಯ ಬೇಡಿಕೆಗನುಗುಣವಾಗಿ ಆದ್ಯತೆ ಮೇರೆಗೆ ತರಬೇತಿ ನೀಡಲಾಗುವುದು. 2-3 ಚಟುವಟಿಕೆಗಳಲ್ಲಿ ಅನುಭವಿ, ಪ್ರತಿಭಾವಂತ ಸಂಪನ್ಮೂಲ ವ್ಯಕ್ತಿಗಳನ್ನು ತರಬೇತಿ ನೀಡಲು ನಿಯೋಜಿಸಲಾಗುವುದು ಎಂದು ತಿಳಿಸಿದರು.
ಶಿಬಿರದಲ್ಲಿ 50 ಮಕ್ಕಳಿಗೆ ಪ್ರವೇಶಾವಕಾಶ ಇದ್ದು, ಸರ್ಕಾರಿ ಶಾಲಾ ವಿದ್ಯಾರ್ಥಿಗಳು, ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಆದ್ಯತೆ ನೀಡಲಾಗುವುದು. ಸರ್ಕಾರಿ ಸುಧಾರಣಾ ಸಂಸ್ಥೆಗಳ ಬಾಲಕ, ಬಾಲಕಿಯರಿಗೆ, ಬಾಲ ಮಂದಿರದ ಮಕ್ಕಳಿಗೆ, ಅಂಗವಿಕಲ ಮಕ್ಕಳು ಹಾಗೂ ಎಚ್‌ಐವಿ ಸೋಂಕಿತ ಮಕ್ಕಳಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವಿಜಯಕುಮಾರ್ ಮಾತನಾಡಿ, ಜಿಲ್ಲಾ ಮಟ್ಟದಲ್ಲಿ 55,000 ಹಾಗೂ ತಾಲೂಕು ಮಟ್ಟದಲ್ಲಿ 30,000 ರೂ. ಶಿಬಿರ ನಡೆಸಲು ಅನುದಾನ ಬಿಡುಗಡೆಯಾಗಿದ್ದು, ಆಯ್ದ 13 ಜಿಲ್ಲೆಗಳಲ್ಲಿ ವಿಶೇಷ ಶಿಬಿರ ನಡೆಸಲು ಟ್ಯಾಲೆಂಟ್ ಸರ್ಚ್ ಫೌಂಡೇಶನ್‌ಗೆ ವಹಿಸಲಾಗಿದೆ ಎಂದರು. ದಾವಣಗೆರೆಯ ಬಾಲ ಭವನದ ಕಾಮಗಾರಿ ಪೂರ್ಣಗೊಂಡಿದ್ದು, ನೀರಿನ ಸಮಸ್ಯೆ ಇದೆ. ಶೌಚಾಲಯದ ಯೋಜನೆ ಸಿದ್ದವಾಗಿದೆ.
ನಿರ್ಮಿತಿ ಕೇಂದ್ರಕ್ಕೆ ಕಾರ್ಯಾದೇಶ ನೀಡಬೇಕಿದೆ ಎಂದು ಹೇಳಿದರು. ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಕೆ. ಮಂಜುನಾಥ್, ಜಿಪಂ ಉಪ ಕಾರ್ಯದರ್ಶಿ ಜಿ.ಎಸ್. ಷಡಕ್ಷರಪ್ಪ, ಜಿಲ್ಲಾ ಮತ್ತು ಕುಟುಂಬ ಕಲ್ಯಾಧಿಣಾಧಿಕಾರಿ ಡಾ|ತ್ರಿಪುಲಾಂಬ, ಬಾಲ ಮಂದಿರದ ಸಂಯೋಜಕ ಪುಟ್ಟರಾಜು, ಟ್ಯಾಲೆಂಟ್ ಸರ್ಚ್ ಫೌಂಡೇಷನ್‌ನ ಡಾ| ಸಲೀಂ ಇತರರು ಸಭೆಯಲ್ಲಿ ಭಾಗವಹಿಸಿದ್ದರು.