ಮಾಸ್ಕೋ: ಉಕ್ರೇನ್‌ನ ಬಖ್ಮುತ್ ನಗರವನ್ನು ವಶಪಡಿಸಿಕೊಂಡಿರುವುದಾಗಿ ರಷ್ಯಾ ಭಾನುವಾರ ಘೋಷಿಸಿದೆ. ಇದಕ್ಕಾಗಿ ರಷ್ಯಾದ ಭದ್ರತಾ ಪಡೆಗಳು ಮತ್ತು ಖಾಸಗಿ ಭದ್ರತಾ ಸಂಸ್ಥೆ “ವ್ಯಾಗ್ನರ್’ ಅನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶ್ಲಾಘಿಸಿದ್ದಾರೆ. ಆದರೆ ಈ ವಿಚಾರವನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅಲ್ಲಗಳೆದಿದ್ದಾರೆ.
“ಬಖ್ಮುತ್ ನಗರ ಇನ್ನೂ ನಮ್ಮ ವಶದಲ್ಲಿಯೇ ಇದೆ. ಅದನ್ನು ರಷ್ಯಾ ವಶಪಡಿಸಿಕೊಂಡಿದೆ ಎಂದು ಹೇಳಿರುವುದು ಸತ್ಯಕ್ಕೆ ದೂರವಾದದು,” ಎಂದು ಜಪಾನ್‌ನ ಜಿ7 ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಿರುವ ಝೆಲೆನ್‌ಸ್ಕಿ ಹೇಳಿದ್ದಾರೆ.
ರಷ್ಯಾ-ಉಕ್ರೇನ್ ಯುದ್ಧ ಆರಂಭವಾಗುವ ಮುನ್ನ ಬಖ್ಮುತ್ ನಗರದಲ್ಲಿ 70,000 ಮಂದಿ ವಾಸಿಸುತ್ತಿದ್ದರು. ಯುದ್ಧ ಆರಂಭವಾದ ನಂತರ ಅನೇಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು. ಬಖ್ಮುತ್ ನಗರ ವಶಪಡಿಸಿಕೊಳ್ಳುವ ಮೂಲಕ ದೊಡ್ಡ ವಿಜಯ ಸಾಧಿಸಿದ್ದೇವೆ ಎಂದು ರಷ್ಯಾ ಹೇಳಿಕೊಂಡಿದೆ.
“ಮೇ 20ರ ಮಧ್ಯರಾತ್ರಿ ಬಖ್ಮುತ್ ನಗರವನ್ನು ರಷ್ಯಾದ ಭದ್ರತಾ ಪಡೆಗಳು ಸಂಪೂರ್ಣವಾಗಿ ವಶಪಡಿಸಿಕೊಂಡಿವೆ. ರಷ್ಯಾ ಸೇನೆಗೆ ನಗರವನ್ನು ಹಸ್ತಾಂತರಿಸುವ ಮುನ್ನ ವ್ಯಾಗ್ನಾರ್ ಫೈಟರ್‌ಗಳು ನಗರದಲ್ಲಿ ಶೋಧ ಕಾರ್ಯಾಚರಣೆ ಕೈಗೊಳ್ಳಲಿದ್ದಾರೆ,” ಎಂದು ವ್ಯಾಗ್ನಾರ್ ಪಡೆಗಳ ಮುಖ್ಯಸ್ಥ ಯೆವೆನಿ ಪ್ರಿಗೋಜಿನ್ ಟೆಲಿಗ್ರಾಮ್ ಮೂಲಕ ಮಾಹಿತಿ ನೀಡಿದ್ದಾರೆ.
ರಷ್ಯಾ-ಉಕ್ರೇನ್ ಘೋರ ಯುದ್ಧಕ್ಕೆ ಬಖ್ಮುತ್ ನಗರ ಸಾಕ್ಷಿಯಾಗಿದೆ. ಯುದ್ಧದಿಂದಾಗಿ ಈಗಾಗಲೇ ಎರಡೂ ರಾಷ್ಟ್ರಗಳು ದೊಡ್ಡ ಪ್ರಮಾಣದ ನಷ್ಟ ಅನುಭವಿಸಿವೆ. 2022ರ ಫೆಬ್ರವರಿಯಲ್ಲಿ ಆರಂಭವಾದ ಯುದ್ಧ ಒಂದೂವರೆ ವರ್ಷ ಕಳೆದರೂ ಮುಂದುವರಿದಿದೆ.
Related Articles
ಉಕ್ರೇನ್‌ಗೆ ಅಮೆರಿಕ ನೆರವು:
ಹಿರೋಶಿಮಾದ ಜಿ7 ನಾಯಕರ ಶೃಂಗದಲ್ಲಿ ವಿವಿಧ ರಾಷ್ಟ್ರಗಳ ನಾಯಕರೊಂದಿಗೆ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಮಾತುಕತೆ ನಡೆಸಿದರು. ಉಕ್ರೇನ್-ರಷ್ಯಾ ಯುದ್ಧದ ಪರಿಸ್ಥಿತಿಯನ್ನು ವಿವರಿಸಿದರು. ಶೃಂಗಸಭೆಯ ನೇಪಥ್ಯದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಇದೇ ವೇಳೆ ಯುದ್ಧ ಪೀಡಿತ ಉಕ್ರೇನ್‌ಗೆ ಹೊಸದಾಗಿ ಮಿಲಿಟರಿ ಪರಿಹಾರವಾಗಿ 375 ಮಿಲಿಯನ್ ಡಾಲರ್ ನೆರವನ್ನು ಬೈಡೆನ್ ಘೋಷಿಸಿದರು.