ಸುಳ್ಯ : ದಾಹಕ್ಕೆ ನೀರಿನ ಬದಲು ಆಯಿಲ್, ಹಸಿವಾದರೆ ಸುಟ್ಟ ಪೇಪರ್ ಸೇವಿಸುವ ಶಿವಮೊಗ್ಗ ಮೂಲದ ಕುಮಾರ್ ಅವರು ಸುಳ್ಯ ರಿಕ್ಷಾ ನಿಲ್ದಾಣದಲ್ಲಿ ತನ್ನ ಆಹಾರ ಸೇವನೆಯ ಕರಾಮತ್ತು ಪ್ರದರ್ಶಿಸಿ ನೋಡುಗರರನ್ನು ನಿಬ್ಬೆರಗಾಗಿಸಿದರು.
ಶಬರಿಮಲೆ ಅಯ್ಯಪ್ಪ ವ್ರತಧಾರಿ ಮಧ್ಯವಯಸ್ಕ ವ್ಯಕ್ತಿ ಆಯಿಲ್, ಪೇಪರ್ ಹಿಡಿದು ಇದೇ ನನ್ನ ಆಹಾರ ಎಂದೆನ್ನುತ್ತಿದ್ದ ದೃಶ್ಯ ಜನರಲ್ಲಿ ಅಚ್ಚರಿ ಮೂಡಿಸಿತು.
ಬಾಲಕನಾಗಿದ್ದಾಗಲೇ ಅವರನ್ನು ಶಿವಮೊಗ್ಗದಲ್ಲಿ ಹೆತ್ತವರು ಬಿಟ್ಟು ಹೋಗಿದ್ದರಂತೆ. ತಿರುಗಾಡುತ್ತ, ಅಲ್ಲಲ್ಲಿ ಕೆಲಸ ಮಾಡುತ್ತ ಕುಮಾರ್ ಬದುಕುತ್ತಿದ್ದರಂತೆ. 18 ವರ್ಷಗಳ ಹಿಂದೆ ವ್ಯಕ್ತಿಯೊಬ್ಬ ಇವರನ್ನು ಕಾರವಾರಕ್ಕೆ ಕರೆದೊಯ್ದು, ಐದು ವರ್ಷ ದುಡಿಸಿಕೊಂಡು ಸಂಬಳ ಕೊಡದೆ ಓಡಿಸಿದ್ದರಂತೆ. ಕೈಯಲ್ಲಿ ದುಡ್ಡಿಲ್ಲದೆ, ಹಸಿವು ತಾಳಲಾರದೆ ಕುಮಾರ್ ಆಗ ಆಯಿಲ್, ಪೇಪರ್ ಸೇವಿಸಲು ಆರಂಭಿಸಿದರು. ಆರೋಗ್ಯದ ಮೇಲೆ ಏನೂ ಪರಿಣಾಮ ಬೀರದ ಕಾರಣ ಅದನ್ನೇ ನಿತ್ಯದ ಆಹಾರವಾಗಿಸಿಕೊಂಡರು!
ಗಾರೆ ಕೆಲಸ ಮಾಡುವ ಕುಮಾರ್ ಅನಿವಾರ್ಯವಾದರೆ ಬೇರೆ ಕೆಲಸ ಮಾಡುವುದೂ ಉಂಟು. ಊಟ ಮಾಡಿದರೆ ವಾಂತಿ ಬಂದಂತಾಗುತ್ತದೆ. ಇದಕ್ಕಾಗಿ ಹಲವಾರು ಬಾರಿ ವೈದ್ಯರಿಂದ ಚಿಕಿತ್ಸೆ ಪಡೆದಿದ್ದರೂ ಇದಕ್ಕೆ ಪರಿಹಾರ ದೊರಕಿಲ್ಲ ಎನ್ನುತ್ತಾರೆ, ಕುಮಾರ್.
ಆಗೊಮ್ಮೆ ಈಗೊಮ್ಮೆ ಕಾಫಿ, ಚಹಾ ಕುಡಿದರೂ ಆಯಿಲ್, ಪೇಪರ್ ಅವರ ಪ್ರಮುಖ ಆಹಾರ. 9 ವರ್ಷಗಳಿಂದ ಶಬರಿಮಲೆ ಯಾತ್ರೆ ಮಾಡುತ್ತಾರೆ. ಅದಕ್ಕೂ ದುಡಿದೇ ಹಣ ಸಂಗ್ರಹಿಸುತ್ತಾರೆ. ಇರುಮುಡಿ ಸಾಮಾನು ಹಾಗೂ ಟಿಕೆಟ್ ತೆಗೆಸಿಕೊಟ್ಟರೆ ಪಡೆಯುವುದುಂಟು. ಹಣದ ಸಹಾಯ ಪಡೆಯುವುದಿಲ್ಲ. ಹಣ ಕೊಡಲು ಮುಂದಾದರೆ, ಕೆಲಸ ಮಾಡುತ್ತೇನೆ, ಆಮೇಲೆ ಹಣ ಕೊಡಿ ಎನ್ನುತ್ತಾರೆ.
ಸುಳ್ಯ ರಿಕ್ಷಾ ನಿಲ್ದಾಣದಲ್ಲಿ ಆಟೋ ಚಾಲಕರು ಕುಮಾರ್ ಅವರಿಗೆ ಇರುಮುಡಿ ಸಾಮಾನು ಕೊಡಿಸಿದ್ದಾರೆ. ಕುಶಾಲನಗರಕ್ಕೆ ತೆರಳುವ ಬಸ್ ಟಿಕೆಟ್ ತೆಗೆಸಿದ್ದಾರೆ.