ಮುಂಬಯಿ: ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿಗೆ ಬಜರಂಗ ಬಲಿ ಸಹಾಯ ಮಾಡಲಿಲ್ಲ, ಆದ್ದರಿಂದ ಪಕ್ಷ ಈಗ ಔರಂಗಜೇಬ್ ಮತ್ತು ಟಿಪ್ಪು ಸುಲ್ತಾನ್ ಅವರಂತಹ ಐತಿಹಾಸಿಕ ವ್ಯಕ್ತಿಗಳನ್ನು ಅವಲಂಬಿಸುತ್ತಿದೆ ಎಂದು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವುತ್ ಗುರುವಾರ ಟೀಕಾ ಪ್ರಹಾರ ನಡೆಸಿದ್ದಾರೆ.
ಉದ್ಧವ್ ಠಾಕ್ರೆ ನೇತೃತ್ವದ ಪಕ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಇತ್ತೀಚಿನ ಕೋಮುಗಲಭೆ ಘಟನೆಗಳಿಗೆ ಆಡಳಿತಾರೂಢ ಮೈತ್ರಿಕೂಟದ ಸದಸ್ಯ ಬಿಜೆಪಿಯನ್ನು ದೂಷಿಸಿ ”ಮೊಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿ ಮಹಾರಾಷ್ಟ್ರದಲ್ಲಿದೆ. ಔರಂಗಜೇಬನನ್ನು ಇಲ್ಲಿ ಸಮಾಧಿ ಮಾಡಲಾಗಿದೆ … ಛತ್ರಪತಿ ಶಿವಾಜಿ ಮಹಾರಾಜರ ಮಹಾರಾಷ್ಟ್ರ ಅವನನ್ನು ಸಮಾಧಿ ಮಾಡಿದೆ, ನಂತರ ಅವನನ್ನು ಕೊಲ್ಲಾಪುರ, ಸಂಗಮ್ನೇರ್ ಅಥವಾ ಬೇರೆಲ್ಲಿಯಾದರೂ ಏಕೆ ಮತ್ತೆ ಜೀವಂತಗೊಳಿಸಲಾಗುತ್ತಿದೆ?” ಎಂದು ರಾವುತ್ ಪ್ರಶ್ನಿಸಿದರು.
ಬಿಜೆಪಿಗೆ ತನ್ನ ರಾಜಕೀಯಕ್ಕೆ ಔರಂಗಜೇಬ್ ಅಗತ್ಯವಿದೆ. ಇದಕ್ಕೆ ಕಾರಣ ಕರ್ನಾಟಕದಲ್ಲಿ ಬಜರಂಗ ಬಲಿ ಅವರಿಗೆ ಸಹಾಯ ಮಾಡಲಿಲ್ಲ …. ನಂತರ ಅವರು ಔರಂಗಜೇಬ್, ಟಿಪ್ಪು ಸುಲ್ತಾನ್, ಬಹದ್ದೂರ್ ಶಾ ಜಾಫರ್, ಅಫ್ಜಲ್ ಖಾನ್ ಅವರನ್ನು ತರಾಟೆಗೆ ತೆಗೆದುಕೊಂಡರು. ಬಿಜೆಪಿಯವರು ಇವರಿಗೆ ಜೀವ ತುಂಬುತ್ತಿದ್ದಾರೆ ಏಕೆಂದರೆ ನಿಮಗೆ ಅವರ ಅವಶ್ಯಕತೆ ಇದೆ. ನಿಮ್ಮ ಹಿಂದುತ್ವ ಈ ಖಾನ್‌ಗಳ ಮೇಲೆ ಅವಲಂಬಿತವಾಗಿದೆ ಮತ್ತು ಅದು ಬೋಗಸ್ ಆಗಿದೆ ಎಂದು ರಾವತ್ ವ್ಯಂಗ್ಯವಾಡಿದರು.
ಪಶ್ಚಿಮ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಬುಧವಾರ ಟಿಪ್ಪು ಸುಲ್ತಾನನ ಚಿತ್ರವನ್ನು ತಮ್ಮ ಸಾಮಾಜಿಕ ಮಾಧ್ಯಮದ ಸ್ಟೇಟಸ್‌ಗಳಲ್ಲಿ `ಆಕ್ಷೇಪಾರ್ಹ’ ಆಡಿಯೋ ಕ್ಲಿಪ್‌ನೊಂದಿಗೆ ಬಳಸಿದ್ದಕ್ಕಾಗಿ ಸಂಘಟನೆಗಳಿಂದ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದವು.