ಬಜಪೆ: ಕೋವಿಡ್-19 ಮುನ್ನೆಚ್ಚರಿಕೆಯಾಗಿ ಬಜಪೆಯ ಮಾರುಕಟ್ಟೆ ಮತ್ತು ಇತರ ಪ್ರದೇಶಗಳಲ್ಲಿ ಗುರುವಾರ ಅಪರಾಹ್ನ ಬಳಿಕ ಹೆಚ್ಚಿನ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಬಂದ್ ಆಗಿದ್ದವು.
ಮುಂಬಯಿಯಿಂದ ಬಂದು ಹೋಂ ಕ್ವಾರಂಟೈನ್‌ನಲ್ಲಿದ್ದ ಮಳವೂರು ಗ್ರಾಮ ತಾಂಗಾಡಿಯ ನಿವಾಸಿ ಕೋವಿಡ್-19 ವರದಿ ಬರುವ ಮೊದಲು ಬಜಪೆ ಪೇಟೆಗೆ ಭೇಟಿ ನೀಡಿದ್ದರು ಎಂಬ ವದಂತಿಯ ಹಿನ್ನೆಲೆಯಲ್ಲಿ ಮುಂಜಾಗ್ರತೆ ವಹಿಸಲಾಗಿದೆ. ಈ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಇನ್ನಷ್ಟೇ ಸ್ಪಷ್ಟವಾಗಬೇಕಿದೆ.
ಮುನ್ನೆಚ್ಚರಿಕೆಯಾಗಿ ಅಂಗಡಿಗಳನ್ನು ಮಧ್ಯಾಹ್ನ ಬಳಿಕ ಸ್ವಯಂಪ್ರೇರಿತವಾಗಿ ಬಂದ್ ಮಾಡಬಹುದು ಎಂದು ಗ್ರಾಮ ಪಂಚಾಯತ್ ಬುಧವಾರ ತಿಳಿಸಿತ್ತು. ಇದಕ್ಕೆ ಹೆಚ್ಚಿನ ವ್ಯಾಪಾರಿಗಳು ಗುರುವಾರ ಸ್ಪಂದಿಸಿದ್ದರು. ಅಗತ್ಯ ವಸ್ತು ಮಾರಾಟ ಹೊರತು ಪಡಿಸಿ ಉಳಿದೆಲ್ಲ ಅಂಗಡಿಗಳು ಮುಚ್ಚಿದ್ದವು. ಅಪರಾಹ್ನ ಬಳಿಕ ಪೇಟೆಯಲ್ಲಿ ಜನರು ಮತ್ತು ವಾಹನ ಓಡಾಟ ಕೂಡ ಎಂದಿಗಿಂತ ಕಡಿಮೆ ಸಂಖ್ಯೆಯಲ್ಲಿ ಕಂಡು ಬಂತು. ಇದೇ ವೇಳೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿದ್ದು, ಅನಗತ್ಯ ಓಡಾಟಕ್ಕೆ ಕಡಿವಾಣ ಬಿದ್ದಿದೆ.
ಗ್ರಾ.ಪಂ.ಗೆ ಮಾಹಿತಿ ನೀಡಿ
ಕೋವಿಡ್-19 ಲಕ್ಷಣದ ಅನಾರೋಗ್ಯ ಕಂಡುಬಂದರೆ ಕೂಡಲೇ ಗ್ರಾಮ ಪಂಚಾಯತ್ ಅಥವಾ ಆರೋಗ್ಯ ಕಾರ್ಯಕರ್ತರಿಗೆ ಮಾಹಿತಿ ನೀಡಿ. ಭೀತಿ ಪಡುವ ಅಗತ್ಯವಿಲ್ಲ. ಆದರೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಬಜಪೆ ಪಿಡಿಒ ಸಾಯೀಶ್ ಚೌಟ ತಿಳಿಸಿದ್ದಾರೆ.