ಬಜಪೆ: ಖೋಟಾ ನೋಟನ್ನು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಇಬ್ಬರನ್ನು ಬಜಪೆ ಪೊಲೀಸರು ನೀರುಮಾರ್ಗದ ಕೆಲರಾಯ್‌ಯಲ್ಲಿ ಬಂಧಿಸಿದ್ದಾರೆ. ಅವರಿಂದ ಕೃತ್ಯಕ್ಕೆ ಬಳಸುತ್ತಿದ್ದ ಕಲರ್ ಪ್ರಿಂಟರ್, ಖೋಟಾನೋಟು, ಎರಡು ಮೊಬೈಲ್ ಮತ್ತು ಬೈಕನ್ನು ವಶಪಡಿಸಿಕೊಳ್ಳಲಾಗಿದೆ.
ಬಂಟ್ವಾಳ ತಾಲೂಕು ಕಾಂಜಿಲ ಕೋಡಿ ಮನೆಯ ಧೀರೇಂದ್ರ (45) ಹಾಗೂ ಅಡ್ಯಾರ್ ವಳಬೈಲಿನ ಸುಧೀರ್ ಪೂಜಾರಿ (44) ಬಂಧಿತರು. ಇವರಿಂದ 500 ರೂ. ಮುಖಬೆಲೆಯ ಮೂರು ಹಾಗೂ 200 ರೂ. ಮುಖಬೆಲೆಯ ಏಳು ಖೋಟಾನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಫೆ. 23ರಂದು ಬಡಗುಳಿಪಾಡಿ ಗ್ರಾಮದ ಸೂರಲ್ಪಾಡಿ ಬಳಿಯ ಅಬ್ದುಲ್ ಸಲಾಂ ಎಂಬವರ ಗೂಡಂಗಡಿ ಬಳಿಗೆ ಬೈಕಿನಲ್ಲಿ ಬಂದ ಆರೋಪಿಗಳಲ್ಲಿ ಓರ್ವನು 20 ರೂ.ಯ ಜಿಲೆಟ್ ಬ್ಲೇಡ್ ಖರೀದಿಸಿ 200 ರೂ. ಮುಖ ಬೆಲೆಯ ನೋಟು ಕೊಟ್ಟು 180 ರೂ. ವಾಪಸ್ ಪಡೆದುಕೊಂಡಿದ್ದರು. ಈ 200 ರೂ.ಯ ನೋಟಿನ ಬಗ್ಗೆ ಅಬ್ದುಲ್ ಸಲಾಂಗೆ ಸಂಶಯ ಬಂತು. ಕೂಡಲೇ ಅವರು ನೋಟು ನೀಡಿದಾತನಲ್ಲಿ ವಿಚಾರಿಸಲು ಹೋದಾಗ ಆರೋಪಿಗಳು ಸಮೀಪದ ಮಹಮ್ಮದ್ ಆರೀಫ್ ಎಂಬವರ ಅಂಗಡಿಯಿಂದ ಸಾಸಿವೆ ಖರೀದಿಸಿ 200 ರೂ. ಮುಖಬೆಲೆಯ ನೋಟು ನೀಡಿದ್ದರು. ಅಲ್ಲೂ ಸಂಶಯ ಮೂಡಿದಾಗ ಆರೋಪಿಯು ಆರೀಫ್ ಕೈಯಲ್ಲಿದ್ದ ನೋಟನ್ನು ಎಳೆದುಕೊಂಡು ಅಬ್ದುಲ್ ಸಲಾಂರನ್ನು ದೂಡಿ ತಾವು ಬಂದಿದ್ದ ಬೈಕಿನಲ್ಲಿ ಪರಾರಿಯಾಗಿದ್ದರು.
ಈ ಬಗ್ಗೆ ಅಬ್ದುಲ್ ಸಲಾಂ ಫೆ.24ರಂದು ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.