ಬಜಪೆ: ಇಲ್ಲಿನ ಮಾರುಕಟ್ಟೆಯ ಸುಂಕ ವಸೂಲಿಯನ್ನು ಗ್ರಾಮ ಪಂಚಾಯತ್ ಸಂಗ್ರಹಿಸಲು ಆರಂಭಿಸಿದೆ. ಹಿಂದಿನ ಗುತ್ತಿಗೆದಾರರಿಗೆ ಸುಂಕ ವಸೂಲಿಯ ಗುತ್ತಿಗೆ ನೀಡುವ ಕುರಿತ ಪಂಚಾಯತ್ ಸಭೆಯ ನಿರ್ಣಯಕ್ಕೆ ಹೈಕೋರ್ಟ್ ತಡೆ ನೀಡಿರುವ ಹಿನ್ನೆಲೆಯಲ್ಲಿ, ಜೂ. 18ರಿಂದ ಗ್ರಾಮ ಪಂಚಾಯತ್ ಸುಂಕ ಸಂಗ್ರಹ ಆರಂಭಿಸಿದೆ.
ಏನಿದು ವಿವಾದ?
ರಾಜ್ಯ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯ ಪ್ರಕಾರ, ಪಂಚಾಯತ್ ತನ್ನ ವ್ಯಾಪ್ತಿಯ ತೆರಿಗೆ, ಶುಲ್ಕ ವಸೂಲಿಯನ್ನು ಏಜೆನ್ಸಿ ಮೂಲಕ ಕೈಗೊಳ್ಳಬಹುದಾಗಿದೆ. ಆದರೆ, ಏಜೆನ್ಸಿಯ ಆಯ್ಕೆ ಅಥವಾ ಗುತ್ತಿಗೆ ನೀಡಿಕೆ ಸಾರ್ವಜನಿಕ ಹರಾಜು ನಿಯಮದ ಮೂಲಕ ನಡೆಯಬೇಕು. ಶೇಕಡಾವಾರು ಏರಿಕೆ ಮಾಡಿ ಗುತ್ತಿಗೆ ಕೊಡುವಂತಿಲ್ಲ ಎಂದಿದೆ.
ಎಪ್ರಿಲ್ 11ರ ಸಾಮಾನ್ಯ ಸಭೆಯಲ್ಲಿ ಮಹಮ್ಮದ್ ನಿಸಾರ್ ಅವರಿಗೆ 2016-17ನೇ ಸಾಲಿಗೆ 7,66,412 ರೂ. ಗಳಿಗೆ ನೀಡಲಾದ ಗುತ್ತಿಗೆಯನ್ನೇ ಶೇ. 2ರಷ್ಟು ಏರಿಸಿ ಗುತ್ತಿಗೆ ಮುಂದುವರಿಸುವ ಬಗ್ಗೆ ಚರ್ಚಿಸಿತು. ಇದೇ ಸಂದರ್ಭದಲ್ಲಿ ಗ್ರಾ.ಪಂ.ಗೆ ಇರಿಸಿಕೊಂಡಿದ್ದ ಬಾಕಿ ಮೊತ್ತವನ್ನು ಪಾವತಿಸಿದರೆ ಗುತ್ತಿಗೆ ಮುಂದುವರಿಸುವ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಮಹಮದ್ ಅವರು ಬಾಕಿಯನ್ನು ಪಾವತಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಪಿಡಿಒ ಅವರು, ಸಾರ್ವಜನಿಕ ಹರಾಜು ಪ್ರಕಟನೆ ಹೊರಡಿಸಿ ಏಲಂಗೆ ದಿನಾಂಕ ಗೊತ್ತು ಮಾಡಿದರು. ಇದನ್ನು ಆಕ್ಷೇಪಿಸಿದ್ದ ಸದಸ್ಯರಾದ ಸಾಹುಲ್ ಹಮೀದ್ ಮತ್ತು ಮನ್ಸೂರ್, ಹಳೆ ಬಾಕಿಯೊಂದಿಗೆ ಮುಂದಿನ ಎರಡು ತಿಂಗಳ ಮುಂಗಡ ನೀಡಿದರೆ ಗುತ್ತಿಗೆಯನ್ನು ಮುಂದುವರಿಸಬಹುದು ಎಂದರು. ಇದಕ್ಕೆ ಸದಸ್ಯರಾದ ಲೋಕೇಶ್ ಪೂಜಾರಿ ಮತ್ತು ಸಿರಾಜ್ ಅಹಮದ್ ದನಿಗೂಡಿಸಿದ್ದರು. ಆದರೆ, ಪಿಡಿಒ ಆಕ್ಷೇಪ ವ್ಯಕ್ತಪಡಿಸಿ, ನಿಯಮದಂತೆ ಮಾರ್ಕೆಟ್ ಸುಂಕ ವಸೂಲಿಯನ್ನು ಪಂ. ಮಾಡ ಬೇಕು. ಇದಕ್ಕೆ ಪೂರಕವಾಗಿ ಏಲಂ ಹಾಕಬೇಕು. ಈ ಹಿನ್ನೆಲೆಯಲ್ಲಿ ಏಲಂಗೆ ದಿನಾಂಕ ಪ್ರಕಟಿಸಿದೆ. ಈಗ ಅದನ್ನು ರದ್ದುಪಡಿಸಿದರೆ ನಿಯಮ ಮೀರಿದಂತಾಗುತ್ತದೆ ಎಂದರು. ಅಂತಿಮವಾಗಿ ಸದಸ್ಯರ ಅಭಿಪ್ರಾಯದಂತೆಯೇ ಅಂತಿಮ ಸಭೆಯು ಬೀಫ್ ಸ್ಟಾಲ್ ಹಾಗೂ ಮಾರ್ಕೆಟ್ ಸುಂಕ ವಸೂಲಿ ಸಂಬಂಧ ನೀಡಿದ ಸಾರ್ವಜನಿಕ ಪ್ರಕಟನೆಯನ್ನು ನಿಲ್ಲಿಸಲು ತೀರ್ಮಾನ ಕೈಗೊಳ್ಳಲಾಯಿತು. ಇದನ್ನು ಪ್ರಶ್ನಿಸಿ ಗ್ರಾಮಸ್ಥರೊಬ್ಬರು ಕೋರ್ಟ್‌ಗೆ ಹೋಗಿ ತಡೆ ತಂದರು.
ಪಂಚಾಯತ್ ವಸೂಲಿ
ಹೈಕೋರ್ಟ್ ಆದೇಶದಂತೆ ಜೂ.18ರಿಂದ ಪಂಚಾಯತ್ ಸುಂಕ ಸಂಗ್ರಹಿಸುತ್ತಿದೆ. ಪಂ. ಸಾಮಾನ್ಯ ಸಭೆಯ ನಿರ್ಣಯದಂತೆ ನಿಗದಿಪಡಿಸಿದ ದರದಲ್ಲಿ ಸಂಗ್ರಹ ನಡೆಯುತ್ತಿದೆ ಎಂದು ಪಿಡಿಒ ಸಾಯೀಶ್ ಚೌಟ ಹೇಳಿದ್ದಾರೆ. ಪಂಚಾಯತ್ ಕನಿಷ್ಠ ದರ ನಿಗದಿಪಡಿಸಿದ್ದರೂ ವರ್ಷಕ್ಕೆ ಸುಮಾರು 20 ಲಕ್ಷ ರೂ. ಸುಂಕ ಸಂಗ್ರಹ ವಾಗುವ ಸಾಧ್ಯತೆ ಇದೆ. ಆದರೆ ಹಿಂದಿನ ಬಾರಿ ನೀಡಲಾದ ಗುತ್ತಿಗೆ ಮೊತ್ತು 7.66 ಲಕ್ಷ ರೂ. ಗಳು ಮಾತ್ರ ಎಂಬ ಅಂಶವೂ ಬೆಳಕಿಗೆಗೆ ಬಂದಿತ್ತು. ಈ ಹಿನ್ನೆಲೆಯಲ್ಲೇ ಜೂ. 18ರಿಂದ ಜು. 6ವರೆಗೆ ಸುಮಾರು 91 ಸಾವಿರ ರೂ. ಸುಂಕ ಸಂಗ್ರಹವಾಗಿದೆ. ಪ್ರಸ್ತುತ ಮಳೆಗಾಲವಾಗಿದ್ದು, ಉಳಿದ ಸಮಯದಲ್ಲಿ ಸುಂಕ ಸಂಗ್ರಹ ಹೆಚ್ಚಾಗುವ ಸಾಧ್ಯತೆ ಇದೆ. ಇದರಂತೆ 18ರಿಂದ 25ಲಕ್ಷ ರೂ. ನಿರೀಕ್ಷಿಸಲಾಗಿದೆ.
ವ್ಯಾಪಾರಸ್ಥರಿಂದ ಮನವಿ
‘ಸುಂಕ ವಸೂಲಿ ಮಾಡುತ್ತಿದ್ದ ಹಿಂದಿನ ಗುತ್ತಿಗೆದಾರರು ನಮ್ಮನ್ನು ಸುಲಿಗೆ ಮಾಡುತ್ತಿದ್ದು, ಇದರಿಂದ ಕಷ್ಟವಾಗಿದೆ. ಹಾಗಾಗಿ ಪಂಚಾಯತ್ ಸುಂಕ ವಸೂಲಿ ಮಾಡಬೇಕು’ ಎಂದು ಆಗ್ರಹಿಸಿ ವ್ಯಾಪಾರಿಗಳು ದೂರಿದ್ದಾರೆ. ಜತೆಗೆ ಪಂಚಾಯತ್ ಸುಂಕ ವಸೂಲಿ ಮಾಡುವುದರಿಂದ ಲಭ್ಯವಾಗುವ ಆದಾಯವನ್ನು ಅಭಿವೃದ್ಧಿ ಕೆಲಸಗಳಿಗೆ ಬಳಸಬಹುದು ಎಂದು ಸಲಹೆ ನೀಡಿದ್ದರು.