Advertisement
ವಿದ್ಯಾರ್ಥಿ ತೋಡಾರು ಸಮೀಪದ ಹಂಡೇಲು ನಿವಾಸಿಯಾಗಿದ್ದು, ಮೂಡುಬಿದಿರೆಯ ಕಾಲೇಜೊಂದರ ವಿದ್ಯಾರ್ಥಿ. ಸೋಮವಾರ ತಡರಾತ್ರಿ ಸುಮಾರು 2.45ರ ವೇಳೆಗೆ ಈತ ಗುರುಪುರ ಕೈಕಂಬ ವಿಕಾಸ್‌ನಗರದಲ್ಲಿ ರಸ್ತೆಯಲ್ಲಿ ಅಲೆದಾಡುತ್ತಿದ್ದ. ಇದನ್ನು ಗಮನಿಸಿದ ಬೀಟ್‌ನಲ್ಲಿದ್ದ ಅನಿತಾ ನಿಕ್ಕಂ ಮತ್ತು ದೇವಪ್ಪ ಹೊಸಮನಿ ಅವನನ್ನು ವಿಚಾರಿಸಿದಾಗ ಉತ್ತರಿಸಲು ನಿರಾಕರಿಸಿದ. ವಿಳಾಸ ಕೇಳಿದಾಗ ನೀಡಲಿಲ್ಲ. ಸಂಶಯ ತಾಳಿದ ಪೊಲೀಸರು ಅತನ ಐಡಿ ಕಾರ್ಡ್, ಮನೆ ಬಗ್ಗೆ ಕೇಳಿದರು. ಸುಮಾರು ಅರ್ಧತಾಸು ಪೊಲೀಸರು ಬುದ್ಧಿಯ ಮಾತು ಹೇಳಿದ ಬಳಿಕ ಆತ ತನ್ನ ವಿಳಾಸ ನೀಡಿದ. ಓದು ಇಷ್ಟವಿಲ್ಲ, ಮನೆಯವರ ಒತ್ತಾಯಕ್ಕೆ ಕಾಲೇಜು ಸೇರಿದೆ. ಜೀವನ ಸಾಕಾಗಿದೆ. ಅದಕ್ಕಾಗಿ ಮನೆ ಬಿಟ್ಟು ಬಂದಿದ್ದು, ಮನೆಯವರಲ್ಲಿ ಹೇಳಬೇಡಿ ಎಂದು ವಿನಂತಿಸಿದ.
ಪೊಲೀಸರು ವಿದ್ಯಾರ್ಥಿಯಿಂದ ವಿಳಾಸ ಮತ್ತು ಮೊಬೈಲ್ ನಂಬರ್ ಪಡೆದುಕೊಂಡು ಫೋನಾಯಿಸಿದಾಗ ಆತನ ತಾಯಿ ಮಗ ಮನೆಯಲ್ಲೇ ಇದ್ದಾನೆ ಎಂದು ಉತ್ತರಿಸಿದ್ದರು. ಪರಿಶೀಲಿಸಿ ನೋಡಿ ಎಂದು ಪೊಲೀಸರು ಹೇಳಿದ ಬಳಿಕವಷ್ಟೇ ಆಕೆಗೆ ಮಗ ಮನೆಯಲ್ಲಿ ಇಲ್ಲದಿರುವುದು ಅರಿವಿಗೆ ಬಂತು.
Related Articles
ಪೊಲೀಸರು ವಿದ್ಯಾರ್ಥಿಯನ್ನು ಆತನ ಮನೆಗೆ ತಲುಪಿಸಿದಾಗ ತಾಯಿ ಅಳುತ್ತಾ ಕೈ ಮುಗಿದು ನಿಮ್ಮಿಂದಾಗಿ ಮಗನೂ ನಾನೂ ಬದುಕಿದೆವು. ನಿಮಗೆ ಮತ್ತು ನಿಮ್ಮ ಇಲಾಖೆಗೆ ಚಿರಋಣಿಯಾಗಿರುತ್ತೇನೆ ಎಂದು ಕೃತಜ್ಞತೆ ಸಲ್ಲಿಸಿದರು. ವಿದ್ಯಾರ್ಥಿಯ ತಂದೆ ಬೆಂಗಳೂರಿನಲ್ಲಿದ್ದು, ತಾಯಿ ಮಾತ್ರ ಹಂಡೇಲು ಬಾಡಿಗೆ ಮನೆಯಲ್ಲಿ ಇಬ್ಬರು ಪುತ್ರರೊಂದಿಗೆ ವಾಸವಿದ್ದಾರೆ. ಇವರು ಮೂಲತಃ ಶಿವಮೊಗ್ಗದವರಾಗಿದ್ದು, ಮಕ್ಕಳ ಶಿಕ್ಷಣಕ್ಕಾಗಿ ಇಲ್ಲಿಗೆ ಬಂದಿದ್ದಾರೆ.
Advertisement
ಪೊಲೀಸರ ಕಾರ್ಯದ ಬಗ್ಗೆ ಜಾಲ ತಾಣದಲ್ಲಿ ಉತ್ತಮ ಪ್ರತಿಕ್ರಿಯೆ, ಪ್ರಶಂಸೆ ವ್ಯಕ್ತವಾಗಿ ವೈರಲ್ ಆಗಿದೆ.