Advertisement

Bajpe-Kateel State Highway: ಕಾರು ಢಿಕ್ಕಿ : 6 ವಿದ್ಯುತ್‌ ಕಂಬಗಳಿಗೆ ಹಾನಿ

01:51 AM Sep 13, 2024 | Team Udayavani |

ಬಜಪೆ: ಬಜಪೆ -ಕಟೀಲು ರಾಜ್ಯ ಹೆದ್ದಾರಿ 67ರ ಎಕ್ಕಾರು ಪೇಟೆಯಲ್ಲಿ ಬುಧವಾರ ರಾತ್ರಿ ಸುಮಾರು 10.30ರ ವೇಳೆಗೆ ಕಟೀಲು ಕಡೆಯಿಂದ ವೇಗವಾಗಿ ಬಂದ ಕಾರು ಎಕ್ಕಾರು ಬಂಟರ ಭವನದ ಬಳಿಯ ವಿದ್ಯುತ್‌ ಕಂಬಕ್ಕೆ ಢಿಕ್ಕಿಯಾದ ಪರಿಣಾಮ ವಿದ್ಯುತ್‌ ಕಂಬ ತುಂಡಾಗಿ ಬಿದ್ದಿದ್ದು, ಜತೆಗೆ ಇತರ ಕೆಲವು ವಿದ್ಯುತ್‌ ಕಂಬಗಳೂ ಎಳೆಯಲ್ಪಟ್ಟು ಒಟ್ಟು ಆರು ಕಂಬಗಳು ತುಂಡಾಗಿವೆ. ಮೆಸ್ಕಾಂಗೆ ಒಟ್ಟು 1.10 ಲಕ್ಷ ರೂಪಾಯಿ ನಷ್ಟವಾಗಿದೆ.

Advertisement

ಕಂಬಗಳು ತುಂಡಾದ ಕಾರಣ ವಿದ್ಯುತ್‌ ತಂತಿಗಳು ಹಾಗೂ ಎಚ್‌ಟಿ ಲೈನ್‌ಗಳು ಕೂಡ ರಸ್ತೆಗೆ ಜೋತು ಬಿದ್ದಿತ್ತು. ಕೂಡಲೇ ಮೆಸ್ಕಾಂನ ಲೈನ್‌ಮನ್‌ ಗುರು ಭಟ್‌ ಅವರು ವಿದ್ಯುತ್‌ ಅನ್ನು ಸ್ಥಗಿತಗೊಳಿಸಿದ ಕಾರಣ ಕಾರಿನಲ್ಲಿ ಅಪಾಯದ ಸ್ಥಿತಿಯಲ್ಲಿದ್ದ ಮೂವರು ಯುವಕರು ಪಾರಾದರು. ಗುರು ಭಟ್‌ ಸ್ಥಳಕ್ಕೆ ಆಗಮಿಸಿ ರಸ್ತೆಯಲ್ಲಿ ತುಂಡಾಗಿ ಬಿದ್ದಿದ್ದ ಹಾಗೂ ಜೋತು ಬಿದ್ದಿದ್ದ ತಂತಿಗಳನ್ನು ಬದಿಗೆ ಸರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು. ಆದರೆ ನಸುಕಿನ ಜಾವ ಮೂರು ಗಂಟೆಗೆ ಎಕ್ಕಾರು ಭಜನ ಮಂದಿರದ ಬಳಿ ಇನ್ನೊಂದು ವಿದ್ಯುತ್‌ ಕಂಬ ರಸ್ತೆ ಬಿದ್ದಿದ್ದು, ಕಂಬ ಹಾಗೂ ತಂತಿಗಳು ರಸ್ತೆಯಲ್ಲಿ ನೇತಾಡುತ್ತಿದ್ದ ಕಾರಣ ವಾಹನ ಸಂಚಾರಕ್ಕೆ ಅಪಾಯವಿತ್ತು. ಮಾಹಿತಿ ಅರಿತ ಗುರು ಭಟ್‌ ಮತ್ತೆ ಸ್ಥಳಕ್ಕೆ ಆಗಮಿಸಿದ್ದರು.

ಮುಂಜಾನೆವರೆಗೆ ಕಾದು ಕುಳಿತರು
ರಸ್ತೆಯಲ್ಲಿದ್ದ ವಿದ್ಯುತ್‌ ತಂತಿ ಹಾಗೂ ಕಂಬಗಳನ್ನು ಲೈನ್‌ಮನ್‌ ಗುರು ಭಟ್‌ ಹಾಗೂ ರಮೇಶ್‌ ಶೆಟ್ಟಿ ಅವರು ತೆರವುಗೊಳಿಸಲು ಮುಂದಾದರು. ಆಗ ಸ್ಥಳೀಯ ಯುವಕರಾದ ಲೇಖನ್‌ ಮತ್ತು ಚಿನ್ನು ಅವರು ಆ ಮಾರ್ಗದಲ್ಲಿ ಬರುತ್ತಿದ್ದ ವಾಹನಗಳಿಗೆ ಅಪಾಯದ ಬಗ್ಗೆ ತಿಳಿಸಿ ಎಚ್ಚರಿಸುವ ಕೆಲಸವನ್ನು ಮುಂಜಾನೆವರೆಗೆ ಮಾಡಿದರು. ರಾತ್ರಿಯಾಗಿದ್ದ ಕಾರಣ ವಾಹನ ಚಾಲಕರಿಗೆ ವಿದ್ಯುತ್‌ ತಂತಿ ಹಾಗೂ ಕಂಬಗಳು ಬೇಗನೆ ಗೋಚರವಾಗದೆ ಎರಡು ದ್ವಿಚಕ್ರ ವಾಹನ ಸವಾರರು ಬಿದ್ದ ಘಟನೆಯೂ ನಡೆಯಿತು. ಲೈನ್‌ಮನ್‌ಗಳು ಹಾಗೂ ಸ್ಥಳೀಯ ಯುವಕರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next