Advertisement

ಬಜೆ: ನೀರೆತ್ತುವ ಪ್ರಕ್ರಿಯೆ ಆರಂಭ

12:53 AM May 08, 2019 | sudhir |

ಉಡುಪಿ: ನಗರಕ್ಕೆ ನೀರುಣಿಸುವ ಸಲುವಾಗಿ ನಗರಸಭೆ ಆಯುಕ್ತರ ಸಹಿತ ಅಧಿಕಾರಿಗಳು ಬಜೆ ಡ್ಯಾಂನಲ್ಲಿ ಬೀಡುಬಿಟ್ಟಿದ್ದಾರೆ. ನೀರೆತ್ತುವ ಪ್ರಕ್ರಿಯೆ ರವಿವಾರ ಆರಂಭವಾಗಬೇಕಿತ್ತಾದರೂ ಕಾರಣಾಂತರಗಳಿಂದ ವಿಳಂಬವಾಗಿತ್ತು. ಸೋಮವಾರ ರಾತ್ರಿ ಸುಮಾರು 11.30ರ ವರೆಗೂ ಅಧಿಕಾರಿಗಳು ಸ್ಥಳದಲ್ಲಿದ್ದರು. ಮಂಗಳವಾರ ಬೆಳಗ್ಗೆ 10 ಗಂಟೆಗೆ ಭಂಡಾರಿಬೆಟ್ಟುವಿನ ಬ್ರಹ್ಮರಗುಂಡಿ ಪ್ರದೇಶದಲ್ಲಿ ನೀರೆತ್ತುವಿಕೆ ಆರಂಭಗೊಂಡಿದೆ.

Advertisement

2 ದೋಣಿ ಹಾಗೂ 125 ಅಶ್ವಶಕ್ತಿ ಎಂಜಿನ್‌ವುಳ್ಳ 25 ಎಚ್‌ಪಿ ಸಾಮರ್ಥ್ಯದ 3 ಪಂಪ್‌ಬಳಸಿ ನೀರೆತ್ತಲಾಗುತ್ತಿದೆ. ಸುಮಾರು 12 ಕಾರ್ಮಿಕರು ಇದರಲ್ಲಿ ತೊಡಗಿಸಿಕೊಂಡಿದ್ದರು. ಈ ಪ್ರಕ್ರಿಯೆಯು ಹಗಲು ರಾತ್ರಿ ನಿರಂತರವಾಗಿ ನಡೆಯುತ್ತಿದೆ.

ಇಂದಿನಿಂದ ಪೂರೈಕೆ
ನೀರೆತ್ತುವ ಪ್ರಕ್ರಿಯೆ ಮಳೆಬರುವ ತನಕ ನಿರಂತರವಾಗಿ ನಡೆಯಲಿದೆ. ಪ್ರಸ್ತುತ ನೀರಿನ ಲಭ್ಯತೆ 20ರಿಂದ 25 ದಿನಗಳಿಗಾಗುವಷ್ಟು ಸಾಕಾಗಬಹುದು. ಇಂದಿನಿಂದ ಕಲ್ಮಾಡಿ, ಕೊಡವೂರು, ಪಾಳೆಕಟ್ಟೆ ಪ್ರದೇಶಕ್ಕೆ ನಳ್ಳಿ ಮೂಲಕ ನೀರು ಪೂರೈಕೆ ನಡೆಯಲಿದೆ. ಪುತ್ತಿಗೆ ಭಾಗದಲ್ಲಿ ನೀರೆತ್ತುವ ಪ್ರಕ್ರಿಯೆ ಆರಂಭಗೊಂಡ ಅನಂತರ ಉಳಿದ ಪ್ರದೇಶಕ್ಕೆ ನೀರು ಪೂರೈಸುವ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ ಎನ್ನುತ್ತಾರೆ ಎಂಜಿನಿಯರ್‌ ಗಣೇಶ್‌.

ಹೂಳೆತ್ತಿದ್ದರೆ 4 ವರ್ಷದ ನೀರು
ಡ್ಯಾಂನ ಸುತ್ತಮುತ್ತ ಸುಮಾರು 10ರಿಂದ 15 ಅಡಿಗಳಷ್ಟು ಹೂಳು ತುಂಬಿದೆ. 20 ವರ್ಷ ಗಳಿಂದಲೂ ಹೂಳೆತ್ತುವ ಪ್ರಕ್ರಿಯೆ ನಡೆಯದಿರುವುದೇ ಇದಕ್ಕೆಲ್ಲ ಕಾರಣ. ನೀರೆತ್ತುವ ಜತೆಗೆ ಹೂಳು ತೆಗೆಯಲು ಜಿಲ್ಲಾಡಳಿತ ಅನುಮತಿ ನೀಡಿದರೆ ಕನಿಷ್ಠ 4 ವರ್ಷಕ್ಕೆ ಉಡುಪಿಗೆ ನೀರಿನ ಸಮಸ್ಯೆ ಉದ್ಬವಿಸದು ಎಂದು ತಿಳಿಸುತ್ತಾರೆ ಸ್ಥಳೀಯರು.

ಗಂಟೆಗೆ ಲಕ್ಷ ಲೀ. ನೀರು
ಮಂಗಳವಾರ ಮುಂಜಾನೆ ಎರಡು ಪಂಪ್‌ ಮೂಲಕ ನೀರೆತ್ತುವ ಪ್ರಕ್ರಿಯೆ ನಡೆಯಿತು. ಸಂಜೆ 6 ಗಂಟೆ ಹೊತ್ತಿಗೆ ಮತ್ತೂಂದು ಪಂಪ್‌ ಅಳವಡಿಸಲಾಯಿತು. ಈ ಪಂಪ್‌ಗ್ಳಿಂದ ಗಂಟೆಗೆ 1 ಲಕ್ಷ ಲೀ. ನೀರು ಬಜೆ ಪಂಪ್‌ ಇರುವಲ್ಲಿಗೆ ಸರಬರಾಜು ಆಗುತ್ತಿದೆ.

Advertisement

ಜನರ ಸಹಕಾರವೂ ಅಗತ್ಯ
ಬಜೆ ಅಣೆಕಟ್ಟು ಸಹಿತ ಭಂಡಾರಿಬೆಟ್ಟು ಹಾಗೂ ಪುತ್ತಿಗೆ ಪ್ರದೇಶದಲ್ಲಿ ಕಸಕಡ್ಡಿ ಸಹಿತ ತ್ಯಾಜ್ಯ ತುಂಬಿದ್ದು, ಜನ ಜಾಗೃತಿ ಅಗತ್ಯ ಎಂಬುದು ಸ್ಥಳೀಯರ ಆಗ್ರಹ.
ಶಾಸಕ ರಘುಪತಿ ಭಟ್‌ ಭೇಟಿ ನಗರದ ನೀರಿನ ಸಮಸ್ಯೆ ಪರಿಹರಿಸಲು ಪಣತೊಟ್ಟಿರುವ ಶಾಸಕ ಕೆ. ರಘುಪತಿ ಭಟ್‌ ಅವರು ಮಂಗಳವಾರ ಬಜೆ ಡ್ಯಾಂ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ನಗರಸಭಾ ಸದಸ್ಯರಾದ ಪ್ರಭಾಕರ ಪೂಜಾರಿ, ಗಿರೀಶ್‌ ಅಂಚನ್‌, ಮಂಜುನಾಥ್‌ ಮಣಿಪಾಲ, ಗಿರಿಧರ ಆಚಾರ್ಯ, ಪ್ರಮುಖರಾದ ಚಂದ್ರಶೇಖರ್‌ ಕರಂಬಳ್ಳಿ ಉಪಸ್ಥಿತರಿದ್ದರು.

ನಿರಂತರ ನೀರು ಯಾವಾಗ?
ಮಾ. 24ರ ಮೊದಲು ನಗರಕ್ಕೆ 24×7 ನೀರು ಪೂರೈಕೆಯಾಗುತ್ತಿತ್ತು. ಅನಂತರ 3 ದಿನಕ್ಕೊಮ್ಮೆ ಸೀಮಿತವಾಯಿತು. ಬರು ಬರುತ್ತಾ 4-5 ದಿನ ಆದರೂ ನೀರು ಲಭಿಸುತ್ತಿರಲಿಲ್ಲ. ಜನರ ಬೇಡಿಕೆಯನ್ನು ಮನಗಂಡು ನಗರಸಭೆ ಕೊನೆಗೂ ಎಚ್ಚೆತ್ತುಕೊಂಡಿದೆ. ಲಭ್ಯತೆ, ಪೂರೈಕೆಗೆ ಅನುಗುಣವಾಗಿ ನೀರು ಪೂರೈಕೆ ಮಾಡುತ್ತೇವೆ ಎಂದು ನಗರಸಭೆಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next